ಗುರುವಾರ , ಸೆಪ್ಟೆಂಬರ್ 19, 2019
28 °C

ಕಾಫಿ ನಾಡಿನಲ್ಲಿ ರಾಂಬಟನ್‌ ಹಣ್ಣು

Published:
Updated:
ಕಾಫಿ ನಾಡಿನಲ್ಲಿ ರಾಂಬಟನ್‌ ಹಣ್ಣು

ನಾಪೋಕ್ಲು: ಸಮೀಪದ ಚೆಯ್ಯಂಡಾಣೆ ಗ್ರಾಮದ ಕೃಷಿಕ ಮಕ್ಕಿಮನೆ ಸುಧೀರ್ ರಾಂಬಟನ್‌ ಹಣ್ಣಿನ ಕೃಷಿಯತ್ತ ಮನಸ್ಸು ಮಾಡಿದ್ದು, ಅವರ ಪ್ರಯತ್ನ ಫಲ ನೀಡುತ್ತಿದೆ.

ತೋಟದಲ್ಲಿ ರಾಂಬಟನ್ ಮರಗಳಲ್ಲಿ ಫಸಲು ಬಿಟ್ಟಿದ್ದು, ಈಗಾಗಲೇ ಹಣ್ಣುಗಳನ್ನು ಮಾರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಬೇಡಿಕೆಯಿದೆ, ಹೆಚ್ಚು ವರಮಾನ ಸಿಗಬಹುದು ಎಂಬುದು ಅವರ ಆಶಯ.

ಮನೆಯಂಗಳದಲ್ಲಿ ಗಿಡನೆಟ್ಟು ಫಸಲು ಪಡೆಯುತ್ತಿರುವ ಕೃಷಿಕರು ಹಲವರು. ಆದರೆ, ದೊಡ್ಡ ಪ್ರಮಾಣದಲ್ಲಿ ಈ ಕೃಷಿಗೆ ಆಸಕ್ತಿ ತೋರಿದವರು ಸುಧೀರ್‌. ಕೇರಳದ ಹೋಂಗ್ರೋ ನರ್ಸರಿಯಿಂದ ಎನ್‌–8 ತಳಿಯ ಗಿಡಗಳ ತಂದು ಕೃಷಿಕೈಗೊಳ್ಳುತ್ತಿರುವ ಇವರು, ನಿರೀಕ್ಷಿತ ಫಸಲು ಪಡೆಯುತ್ತಿದ್ದಾರೆ. ಇವರ ಪ್ರಯತ್ನ ಫಲ ನೀಡಿದ್ದು, ಸುಧೀರ್‌ ಯಶಸ್ಸು ಪಡೆದಿದ್ದಾರೆ.

ಸುಧೀರ್‌ ಕಾಫಿ ತೋಟದಲ್ಲಿ ಮುನ್ನೂರಕ್ಕೂ ಅಧಿಕ ರಾಂಬಟನ್‌ ಗಿಡಗಳನ್ನು ನೆಟ್ಟಿದ್ದಾರೆ. ಜಿಲ್ಲೆಯಲ್ಲಿ ಕಿತ್ತಳೆ ಕೃಷಿ ಕುಸಿತ ಕಂಡಿರುವ ದಿನಗಳಲ್ಲಿ ಆ ಕೊರತೆ ನೀಗಿಸುವ ವಿಶ್ವಾಸವನ್ನು ಇವರು ಹೊಂದಿದ್ದಾರೆ.

ರಾಂಬಟನ್‌ ಸ್ಯಾಪಿಂಡೇಸಿಯಾ ಕುಟುಂಬಕ್ಕೆ ಸೇರಿದ ಹಣ್ಣು. ಮಲೇಶಿಯಾ ಮತ್ತು ಇಂಡೋನೇಶಿಯಾ ಮೂಲದ ಬೆಳೆ. ಕೇರಳದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಲ್ಲಲ್ಲಿ ಇದೆ.

ಸಿಹಿ ಹೊಂದಿರುವ ರಾಂಬಟನ್‌ ಸೆಪ್ಟಂಬರ್‌–ಅಕ್ಟೋಬರ್‌ ತಿಂಗಳಲ್ಲಿ ಕೊಯ್ಲು ಆಗುತ್ತದೆ. ಗಿಡ ನೆಟ್ಟ ನಾಲ್ಕು ವರ್ಷಗಳ ಬಳಿಕ ಫಸಲು ಸಿಗಲು ಆರಂಭವಾಗಲಿದೆ. ‘ಮಳೆ ಕಾರಣದಿಂದ ಕೊಳೆರೋಗ ತಗಲುವ ಆತಂಕ ಇದೆ. ಮಿಡಿ ಕಚ್ಚುವ ಸಂದರ್ಭ ಉದುರುತ್ತವೆ. ಪಕ್ಷಿಗಳಿಂದ ರಕ್ಷಿಸುವ ಅಗತ್ಯವಿದೆ’ ಎಂದು ಸುಧೀರ್‌ ಹೇಳಿದರು.

ರಾಂಬಟನ್‌ ಹಣ್ಣಿನಲ್ಲಿ ಹತ್ತು ವಿವಿಧ ತಳಿಗಳ ಕೃಷಿ ಮಾಡಿದ್ದಾರೆ. ಕೇರಳ ಮತ್ತು ಕರಾವಳಿಯ ಕೆಲ ನರ್ಸರಿಗಳಲ್ಲಿ ರೂ.275 ರಿಂದ ರೂ.500 ದರದಲ್ಲಿ ಗಿಡಗಳು ಲಭ್ಯ ಎಂದು ಮಾಹಿತಿ ನೀಡಿದರು.

 

Post Comments (+)