ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಮಾಲೀಕರ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

Last Updated 20 ಅಕ್ಟೋಬರ್ 2017, 8:53 IST
ಅಕ್ಷರ ಗಾತ್ರ

ಉಳ್ಳಾಲ: ಕಿನ್ಯಾ ಮತ್ತು ಬೋಳಿಯಾರು ಕಡೆಗೆ ತೆರಳುವ ಸರ್ಕಾರಿ ಬಸ್‌ಗಳಿಗೆ ಹೈಕೋರ್ಟ್ ತಡೆಯಾಜ್ಞೆ ತಂದಿರುವ ಖಾಸಗಿ ಬಸ್ ಮಾಲೀಕರ ವಿರುದ್ಧ ಕಿನ್ಯಾದಲ್ಲಿ ಗುರುವಾರ ಸಾರ್ವಜನಿಕರು ಖಾಸಗಿ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಡಿವೈಎಫ್ಐ ಮುಖಂಡ ಹಂಝ ಕಿನ್ಯಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಬಂದ ಬಳಿಕ ಎಚೆತ್ತ ಖಾಸಗಿ ಬಸ್ ಮಾಲೀಕರು ಬಸ್‌ಗಳನ್ನು ರಜೆ ಇಲ್ಲದೆ ಓಡಿಸಲು ಆರಂಭಿಸಿದ್ದಾರೆ, ಈ ನಡುವೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತರುವ ಮೂಲಕ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಕಿನ್ಯಾ ಭಾಗದ ಜನರ ಹಲವು ವರ್ಷಗಳ ಬೇಡಿಕೆಗಳಿಗೆ ಸ್ಪಂದಿಸಿ ತಿಂಗಳ ಹಿಂದೆ ಸರ್ಕಾರಿ ಬಸ್ ಸಂಚಾರ ಆರಂಭಿಸಲಾಗಿತ್ತು. ಆದರೆ ಖಾಸಗಿ ಬಸ್‌ಗಳು ಬೇಕಾಬಿಟ್ಟಿ ರಜೆ ಮಾಡುತ್ತಾ, ಮದುವೆ ಟ್ರಿಪ್‌ಗಳನ್ನು ಮಾಡುತ್ತಾ ಸಂಚರಿಸುತ್ತಿದ್ದವು. ಸ್ಥಳೀಯ ಜನಪ್ರತಿನಿಧಿಗಳು ಬಸ್‌ ಮಾಲೀಕರ ಜತೆ ಕೈಜೋಡಿಸಿ ಸರ್ಕಾರಿ ಬಸ್‌ ಜತೆಗೆ ಖಾಸಗಿ ಬಸ್‌ಗಳನ್ನು ಸಂಚರಿಸುವಂತೆ ಮಾಡಿ ಸಾರಿಗೆ ಬಸ್‌ಗೆ ಹೆಚ್ಚಿನ ಆದಾಯ ಬಾರದಂತೆ ಮಾಡಿದ್ದರು ಎಂದು ಅವರ ಆರೋಪಿಸಿದರು.

ಹೈಕೋರ್ಟ್‌ನಿಂದ ತಡೆಯಾಜ್ಞೆ ತರುವ ಮೂಲಕ ಬುಧವಾರದಿಂದ ಸರ್ಕಾರಿ ಬಸ್‌ಗಳು ಗ್ರಾಮಕ್ಕೆ ಬಾರದಂತೆ ತಡೆ ಹಿಡಿದಿರುವುದು ಖಂಡನೀಯ. ಶೀಘ್ರದಲ್ಲೇ ಬಸ್‌ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ನ್ಯಾಯಾಲಯ ಮುಖೇನ ಹೋರಾಡುವುದಾಗಿ ತಿಳಿಸಿದರು.

ಕಿನ್ಯಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿರಾಜ್ ಕಿನ್ಯಾ ಮಾತನಾಡಿ, ತಡೆಯಾಜ್ಞೆ ಕುರಿತು ಸಚಿವರಲ್ಲಿ ಮಾತನಾಡಿದ್ದು, ಗುರುವಾರ ಸಂಜೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ವಿವಿಧ ಅಧಿಕಾ ರಿಗಳ ಜತೆಗೆ ತುರ್ತು ಸಭೆ ನಡೆಯಲಿದೆ. ಇದರಲ್ಲಿ ಗ್ರಾಮಸ್ಥರನ್ನು ಭಾಗವಹಿಸಲು ಆಹ್ವಾನಿಸಲಾಗಿದೆ ಎಂದರು. ಸದಸ್ಯರಾದ ಫಾರೂಕ್ ಕಿನ್ಯಾ, ಹಮೀದ್ ಕಿನ್ಯಾ, ಡಿವೈಎಫ್‍ಐ ಹಂಝ ಕಿನ್ಯಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT