ಆರ್‌ಎಸ್‌ಎಸ್‌, ಬಿಜೆಪಿ ವಿರುದ್ಧ ಜಾಮದಾರ ವಾಗ್ದಾಳಿ

ಮಂಗಳವಾರ, ಜೂನ್ 18, 2019
24 °C
ವೀರಶೈವ– ಲಿಂಗಾಯತ ಎರಡೂ ಹಿಂದೂ ಧರ್ಮದ ಭಾಗಗಳು ಎನ್ನುವ ಪೇಜಾವರ ಶ್ರೀಗಳ ಹೇಳಿಕೆಗೆ ಖಂಡನೆ

ಆರ್‌ಎಸ್‌ಎಸ್‌, ಬಿಜೆಪಿ ವಿರುದ್ಧ ಜಾಮದಾರ ವಾಗ್ದಾಳಿ

Published:
Updated:
ಆರ್‌ಎಸ್‌ಎಸ್‌, ಬಿಜೆಪಿ ವಿರುದ್ಧ ಜಾಮದಾರ ವಾಗ್ದಾಳಿ

ಬೆಂಗಳೂರು: ’ಲಿಂಗಾಯತರು ಹಿಂದೂ ಧರ್ಮದ ಭಾಗವೇ ಅಲ್ಲ. ಹಾಗಿದ್ದರೂ ನೀವೇಕೆ ನಮ್ಮನ್ನು ಹಿಂದೂ ಧರ್ಮ ಬಿಟ್ಟು ಹೋಗಬೇಡಿ. ವೀರಶೈವರೂ–ನೀವು ಪ್ರತ್ಯೇಕವಾಗಬೇಡಿ ಎಂದು ಪದೇ ಪದೇ ಹೇಳುತ್ತಿದ್ದೀರಿ’ ಎಂದು ಪೇಜಾವರ ಶ್ರೀಗಳನ್ನು ಪ್ರಶ್ನಿಸುವ ಮೂಲಕ ನಿವೃತ್ತ ಐಎಎಸ್‌ ಅಧಿಕಾರಿ ಎಸ್.ಎಂ.ಜಾಮದಾರ ಸಂಘ ಪರಿವಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಲಿಂಗಾಯತರ ಹೋರಾಟದಿಂದ ಪೇಜಾವರ ಶ್ರೀಗಳು, ಬಿಜೆಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ನಾಯಕರು ಕಂಗಾಲಾಗಿದ್ದಾರೆ. ಲಿಂಗಾಯತರೇನು ಭಯೋತ್ಪಾದಕರೇ, ದೇಶದ್ರೋಹಿಗಳೇ, ರಾಷ್ಟ್ರ ಭಕ್ತಿಗೆ ಭಂಗ ತರುವವರೇ, ಅವರಿಂದ ದೇಶಕ್ಕೆ ಯಾವ ಹಾನಿಯಾಗಿದೆ’ ಎಂದು ಪ್ರಶ್ನಿಸಿದ ಜಾಮದಾರ, ‘ಶ್ರೀಗಳು ಅವರ ಹೇಳಿಕೆ ಹಿಂದಿರುವ ನಿಗೂಢ ರಹಸ್ಯ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

‘ಲಿಂಗಾಯತರು ಯಾರು ಎಂಬುದನ್ನು ಪೇಜಾವರ ಶ್ರೀಗಳಿಗೆ ಮನವರಿಕೆ ಮಾಡಿಕೊಡಲು ನಾವು ಸಿದ್ಧರಿದ್ದೇವೆ. ಬೇಕಿದ್ದರೆ ಈ ಕುರಿತು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬಹಿರಂಗ ಚರ್ಚೆ ನಡೆಸಲಿ. ಆರ್‌ಎಸ್‌ಎಸ್‌ನ ಸರಸಂಘಚಾಲಕ ಮೋಹನ ಭಾಗವತ, ಸಂಸದ ಪ್ರತಾಪ ಸಿಂಹ, ಸಾಹಿತಿ ಎಸ್‌.ಎಲ್.ಬೈರಪ್ಪ, ಕಲ್ಲಡ್ಕ ಪ್ರಭಾಕರ ಭಟ್ಟ ಇವರನ್ನೂ ಈ ಚರ್ಚೆಗೆ ಕರೆತರಲಿ’ ಎಂದು ಸವಾಲು ಹಾಕಿದರು.

ಅವರ ಜೊತೆ ಹೋಗಲಿ: ‘ಪೇಜಾವರ ಶ್ರೀಗಳ ಹೇಳಿಕೆಯನ್ನು ಸ್ವಾಗತಿಸುವ ಪಂಚಪೀಠಾಧೀಶ್ವರರು ಬೇಕಿದ್ದರೆ ಅವರ ಜೊತೆ ಹೋಗಲಿ. ಲಿಂಗಾಯತರನ್ನು ಅವರ ಪಾಡಿಗೆ ಬಿಟ್ಟುಬಿಡಲಿ’ ಎಂದರು. ಜಿ.ಬಿ.ಪಾಟೀಲ ಮತ್ತು ಎ.ಪಿ.ಬಸವರಾಜು ಇದ್ದರು.

*

ಜೀವ ಬೆದರಿಕೆಗೆ ಅಂಜುವುದಿಲ್ಲ

‘ಲಿಂಗಾಯತ ಧರ್ಮದ ಹೋರಾಟ ತೀವ್ರಗೊಂಡರೆ ರಕ್ತಪಾತ ಆಗಲಿದೆ ಎಂದು ಸಂಘ ಪರಿವಾರದವರು ಹೇಳಿದ್ದಾರೆ. ಈಗಾಗಲೇ ಸಿದ್ಧಾಂತಕ್ಕೆ ಹೋರಾಟ ಮಾಡಿದ ಮೂವರು ಲಿಂಗಾಯತರು ಬಲಿಯಾಗಿದ್ದಾರೆ. ನನಗೂ ಕೂಡಾ ಜೀವ ಭಯ ಇದೆ. ಆದರೆ, ನಾನು ಇದಕ್ಕೆ ಅಂಜುವುದಿಲ್ಲ. ಶರಣರಿಗೆ ಮರಣವೇ ಮಹಾನವವಿ’ ಎಂದು ಜಾಮದಾರ ಹೇಳಿದರು.

‘ಆ ಮೂವರು ಯಾರು ಹಾಗೂ ಈ ಕೊಲೆಗಳ ಆರೋಪವನ್ನು ಆರ್‌ಎಸ್‌ಎಸ್‌ ಮೇಲೆ ಹೊರಿಸುತ್ತಿದ್ದೀರಾ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಆ ಮೂವರು ಡಾ.ಎಂ.ಎಂ.ಕಲ್ಬುರ್ಗಿ, ಲಿಂಗಣ್ಣ ಸತ್ಯಂಪೇಟೆ ಹಾಗೂ ಗೌರಿ ಲಂಕೇಶ್’ ಎಂದ ಅವರು, ‘ನಿಮ್ಮ ಪ್ರಶ್ನೆ ಬಗ್ಗೆ ನಾನು ಹೇಳುವುದೇನೂ ಇಲ್ಲ. ಈಗಾಗಲೇ ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆಯಲ್ಲಾ’ ಎಂದು ಮರು ಪ್ರಶ್ನೆ ಎಸೆದರು.

*

‘ಪೇಜಾವರ ಶ್ರೀಗಳು ಲಿಂಗದೀಕ್ಷೆ ಪಡೆಯಲಿ’

‘ಲಿಂಗಾಯತರ ಬಗ್ಗೆ ಅಪಾರ ಕಾಳಜಿ ವಹಿಸಿ ಮಾತನಾಡುತ್ತಿರುವ ಪೇಜಾವರ ಶ್ರೀಗಳು ಲಿಂಗದೀಕ್ಷೆ ಪಡೆಯುವುದು ಉಚಿತ’ ಎಂದು ಲಿಂಗಾಯತ ಬಣದ ಮತ್ತೊಬ್ಬ ಮುಖಂಡ ಡಾ.ಸಿ.ಜಯ್ಯಣ್ಣ ಹೇಳಿದರು.

‘ಬಸವಣ್ಣನ ಬಗ್ಗೆ ಪೇಜಾವರರಿಗೆ ಎಲ್ಲೊ ಒಂದು ಕಡೆ ವ್ಯಾಮೋಹ ಜಾಸ್ತಿ ಆದಂತಿದೆ. ಪ್ರಾಯಶಃ ಬಸವಣ್ಣ ನಮ್ಮವನೇ ಎಂಬ ಭಾವ ಅವರನ್ನು ಕಾಡುತ್ತಿರಬಹುದು! ಹೀಗಾಗಿ ಶ್ರೀಗಳು ಯಾವ ಪರಮ ಪೂಜ್ಯರಿಂದ ಲಿಂಗದೀಕ್ಷೆ ಪಡೆಯಲು ಅಪೇಕ್ಷಿಸುವರೊ ಅವರಿಂದಲೇ ಕೊಡಿಸುತ್ತೇವೆ. ವಿಶ್ವಮಾನವರಾಗಲಿ’ ಎಂದರು.

*

ಸರ್ಕಾರದ ತಜ್ಞರ ಸಮಿತಿ ರಚನೆಗೆ ಒಲವು

ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಕುರಿತಂತೆ ತಜ್ಞರ ಸಮಿತಿ ರಚನೆ ನಿರ್ಧಾರದಿಂದ ವೀರಶೈವ ಮತ್ತು ಲಿಂಗಾಯತ ಬಣಗಳು ಹಿಂದೆ ಸರಿದಿವೆ. ಇದರಿಂದಾಗಿ ಎರಡೂ ಬಣಗಳು ಒಗ್ಗೂಡುವ ಪ್ರಕ್ರಿಯೆಗೆ ಹಿನ್ನಡೆಯಾದಂತಾಗಿದೆ.

ಆದರೆ, ಸರ್ಕಾರದ ವತಿಯಿಂದಲೇ ತಜ್ಞರ ಸಮಿತಿ ರಚಿಸುವಂತೆ ಒತ್ತಡ ಹೇರಲು ಲಿಂಗಾಯತ ಬಣ ನಿರ್ಧರಿಸಿದೆ. ‘ಸಮಯದ ಅಭಾವದಿಂದಾಗಿ ಈ ತೀರ್ಮಾನಕ್ಕೆ ಬರಲಾಗಿದೆ. ಇದರಲ್ಲಿ ಯಾವುದೇ ವಿಘಟನೆಯ ಪ್ರಶ್ನೆ ಇಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯರೂ ಆದ ಲಿಂಗಾಯತ ಬಣದ ಮುಖಂಡ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಈ ಕುರಿತಂತೆ ‘ಪ್ರಜಾವಾಣಿ‘ಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಜನವರಿ ಅಂತ್ಯ ಅಥವಾ ಫೆಬ್ರುವರಿಯಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳಿವೆ. ಹೀಗಾಗಿ ತಜ್ಞರ ಸಮಿತಿಯು ವಿಸ್ತೃತ ಅಧ್ಯಯನ ಅಥವಾ ಚರ್ಚೆ ನಡೆಸಲು ಸಮಯಾವಕಾಶದ ಕೊರತೆ ಇದೆ. ಈ ಕಾರಣಕ್ಕಾಗಿ ಪರ್ಯಾಯ ಮಾರ್ಗದ ಚಿಂತನೆ ನಡೆಸಲಾಗಿದೆ’ ಎಂದು ಅವರು ತಿಳಿಸಿದರು.

ಶಾಮನೂರು ನೇತೃತ್ವದಲ್ಲೇ ಮನವಿ

‘ಇದೇ 25ರಂದು ಬೆಂಗಳೂರಿನಲ್ಲಿ ಲಿಂಗಾಯತ ಬಣದ ಮುಖಂಡರು ಮತ್ತೊಂದು ಸುತ್ತಿನ ಮಹತ್ವದ ಮಾತುಕತೆ ನಡೆಸಲಿದ್ದಾರೆ. ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲೇ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದೂ ಹೊರಟ್ಟಿ ವಿವರಿಸಿದರು.

‘ಎರಡೂ ಬಣಗಳ ನಡುವೆ ಜಗಳ, ಕಿತ್ತಾಟ ಸಲ್ಲದು. ನಮ್ಮ ಕಿತ್ತಾಟದ ಲಾಭವನ್ನು ಮೂರನೆಯವರು ಪಡೆಯುತ್ತಾರೆ. ಆದ್ದರಿಂದ ಸಹಮತದ ನಡೆಯೊಂದಿಗೆ ಮುಂದುವರಿಯಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ವೀರಶೈವ ಬಣದ ಮುಖಂಡರಾದ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಸ್.ಪಾಟೀಲ ಅವರ ಜೊತೆ ವಿಸ್ತೃತವಾಗಿ ಚರ್ಚಿಸಿದ್ದೇನೆ. ಪಾಟೀಲರು ಶಿವಶಂಕರಪ್ಪ ಅವರಿಗೆ ಈ ದಿಸೆಯಲ್ಲಿ ಮನವರಿಕೆ ಮಾಡಿಕೊಡಲಿದ್ದಾರೆ’ ಎಂದರು.

23ರಂದು ಸಭೆ: ‘ಲಿಂಗಾಯತ ಬಣದ ಪ್ರಮುಖರು ಇದೇ 23ರಂದು ಸಚಿವರೂ ಆದ ರಾಷ್ಟ್ರೀಯ ಬಸವ ಸೇನಾ ಅಧ್ಯಕ್ಷ ವಿನಯ ಕುಲಕರ್ಣಿ ಅವರ ನೇತೃತ್ವದಲ್ಲಿ ಮುಂದಿನ ನಡೆಗಳ ಬಗ್ಗೆ ಪೂರ್ವಭಾವಿ ಚರ್ಚೆ ನಡೆಸಲಿದ್ದಾರೆ’ ಎಂದು ಲಿಂಗಾಯತ ಬಣದ ಮುಖಂಡ ಡಾ.ಸಿ.ಜಯ್ಯಣ್ಣ ತಿಳಿಸಿದ್ದಾರೆ.

*

‘ಇನ್ನೂ ಯಾರೂ ಈ ಬಗ್ಗೆ ನನ್ನ ಜೊತೆ ಮಾತನಾಡಿಲ್ಲ. ಆದಾಗ್ಯೂ ಅವರಾಗಿಯೇ ಮುಂದೆ ಬಂದರೆ ಸಂತೋಷ. ನೋಡೋಣ’

ಶಾಮನೂರು ಶಿವಶಂಕರಪ್ಪ,

ವೀರಶೈವ ಮಹಾಸಭಾ ಅಧ್ಯಕ್ಷ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry