‘ಜಮೀನು ಒದಗಿಸಿದರೆ ತಿಂಗಳಲ್ಲೇ ಪುನರ್ವಸತಿ’

ಭಾನುವಾರ, ಮೇ 26, 2019
22 °C

‘ಜಮೀನು ಒದಗಿಸಿದರೆ ತಿಂಗಳಲ್ಲೇ ಪುನರ್ವಸತಿ’

Published:
Updated:

ಹುಮನಾಬಾದ್: ‘ಪುನರ್ವಸತಿ ಸಂಬಂಧ ಜಮೀನು ಒದಗಿಸಿದರೆ ಕಾರಂಜಾ ಸಂತ್ರಸ್ತರಿಗೆ ಪುನ ರ್ವಸತಿ ಸೌಲಭ್ಯ ಕಲ್ಪಿಸುವ ಕಾರ್ಯ ಸಾಧ್ಯವಾದಷ್ಟು ಶೀಘ್ರ ಆರಂಭಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು. ತಾಲ್ಲೂಕಿನ ಡಾಕುಳಗಿ ಗ್ರಾಮದ ವಸತಿ ಪ್ರದೇಶದ ಆಸುಪಾಸು ಹಿನ್ನೀರು ನುಗ್ಗಿ ಆಗಿರುವ ಹಾನಿ ಪರಿಶೀಲನೆಗಾಗಿ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

‘ಅಧಿಕಾರಿಗಳ ನಿರ್ಲಕ್ಷ್ಯ, ಅವೈಜ್ಞಾನಿಕ ಸಮೀಕ್ಷೆಯಿಂದ ಈ ಭಾಗದ ಜನರು ಕಳೆದ ಒಂದು ದಶಕದಿಂದ ಅಧಿಕ ಮಳೆ ಬಂದಾಗ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ 2012ರಲ್ಲಿ ಜಿಲ್ಲಾಧಿಕಾರಿ ಹರ್ಷಗುಪ್ತ ಅವಧಿಯಲ್ಲಿ ಕೈಗೊಂಡ ಸಮೀಕ್ಷೆ ನಂತರ 97 ಮನೆಗಳಿಗೆ ತೊಂದರೆ ಆಗುತ್ತಿರುವುದು ಖಚಿತಪಟ್ಟ ನಂತರ ಆ ನಿವಾಸಿಗಳಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿತ್ತು.

ಅಗತ್ಯ ಭೂಮಿ ಲಭ್ಯವಿಲ್ಲದ ಕಾರಣ ಪುನರ್ವಸತಿ ವಿಳಂಬವಾಗಿದೆ. ಈ ಬಾರಿ ಹಿನ್ನೀರು ನುಗ್ಗಿದ್ದರಿಂದ ನಿವಾಸಿಗಳು ವಿವಿಧ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈಗ ವಿಳಂಬಿಸುವುದಿಲ್ಲ. ಗ್ರಾಮಸ್ಥರು ಭೂಮಿ ನೀಡಲು ಮುಂದೆ ಬಂದಲ್ಲಿ ಮಾರುಕಟ್ಟೆ ಬೆಲೆಯ ನಾಲ್ಕುಪಟ್ಟು ಹೆಚ್ಚಿನ ಹಣ ನೀಡಿ, ಖರೀದಿಸಿ, ಯೋಜನಾಬದ್ದವಾಗಿ ಮೂಲ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ಇದಕ್ಕೂ ಮುಂಚೆ ಮಾತನಾಡಿದ ಕೆಆರ್ಐಡಿಎಲ್ ಅಧ್ಯಕ್ಷ ರಾಜಶೇಖರ ಬಿ.ಪಾಟೀಲ 2018ರಿಂದ ಈವರೆಗೆ ಡಾಕುಳಗಿ ಗ್ರಾಮಕ್ಕೆ ನಿರೀಕ್ಷೆಗೂ ಮೀರಿ ಅನುದಾನ ನೀಡಿ, ಮೂಲಸೌಲಭ್ಯ ಕಲ್ಪಿಸಲಾಗಿದೆ. ಆದರೆ ಈಗಿನ ಸಮಸ್ಯೆ ಪುನರ್ವಸತಿಯದು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈಗ ಕೇವಲ ಭರವಸೆ ಕೊಟ್ಟರೆ ಸಾಲದು 20 ದಿನಗಳೊಳಗೆ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರ ಪರವಾಗಿ ಆಗ್ರಹಿಸಿದರು.

ಡಾಕುಳಗಿ ಗ್ರಾಮದ ಮುಖಂಡ ಸೂರ್ಯಕಾಂತ ಪಾಟೀಲ ಮಾತನಾಡಿ, ‘ಅತಿವೃಷ್ಟಿಯಾದಾಗ ಜನ ರೋಗಭೀತಿ ಎದುರಿಸುತ್ತಿದ್ದಾರೆ. ರಾತ್ರಿ ಇಡೀ ವಿಷಜಂತು ಕಾಟದ ಭೀತಿಯಲ್ಲಿ ನಿದ್ದೆಗೆಡುತ್ತಿದ್ದಾರೆ. ಕಳೆದ ಒಂದು ದಶಕದಿಂದ ಅಧಿಕಾರಿಗಳು, ವಿವಿಧ ಹಂತದ ಜನ ಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಾಂತ್ವಾನ ಹೇಳಿದ್ದು ಈಗ ಸಾಕು.ಅನಗತ್ಯ ವಿಳಂಬ ಮಾಡದೇ ಯುದ್ಧೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಸೆಲ್ವಮಣಿ, ಬೀದರ್‌ ಉಪವಿಭಾಗಾಧಿಕಾರಿ ಶಿವಕುಮಾರ ಶೀಲವಂತ, ತಹಶೀಲ್ದಾರ್‌ ಡಿ.ಎಂ.ಪಾಣಿ, ಜಿಲ್ಲಾ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷ ಭೀಮರಾವ ಪಾಟೀಲ, ಜಿ.ಪಂ ಮಾಜಿ ಸದಸ್ಯ ಮಹಾಂತಯ್ಯ ತೀರ್ಥ, ಕೇಶವರಾವ ತಳಘಟಕರ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry