ಭಾನುವಾರ, ಸೆಪ್ಟೆಂಬರ್ 22, 2019
23 °C

ಗೌತಮ್‌ ಆಟದ ಗಮ್ಮತ್ತು

Published:
Updated:
ಗೌತಮ್‌ ಆಟದ ಗಮ್ಮತ್ತು

‘ಆತ ಅದ್ಭುತ ಆಟಗಾರ. ಯಾವುದೇ ಭಯವಿಲ್ಲದೆ ಆಡುವ ತಾಕತ್ತು ಇದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸಮಾನ ರೀತಿಯಲ್ಲಿ ಮಿಂಚಬಲ್ಲ ಸಾಮರ್ಥ್ಯ ಹೊಂದಿದ್ದಾನೆ’ –ಕರ್ನಾಟಕ ರಣಜಿ ಕ್ರಿಕೆಟ್‌ ತಂಡದ ನಾಯಕ ಆರ್‌.ವಿನಯ್‌ ಕುಮಾರ್‌ ಅವರು ಸಹ ಆಟಗಾರ ಕೆ.ಗೌತಮ್‌ ಬಗ್ಗೆ ಹೇಳಿದ ಮಾತಿದು. ಮೈಸೂರಿನಲ್ಲಿ ನಡೆದ ಅಸ್ಸಾಂ ವಿರುದ್ಧದ ರಣಜಿ ಪಂದ್ಯದ ಬಳಿಕ ಅವರು ಹೀಗೆ ಹೇಳಿದ್ದರು.

ವಿನಯ್‌ ಹೇಳಿದಂತೆ ಗೌತಮ್‌ ಒಬ್ಬ  ಆಲ್‌ರೌಂಡರ್‌ ಆಗಿ ಬೆಳೆಯುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಗಂಗೋತ್ರಿ ಗ್ಲೇಡ್ಸ್‌ನಲ್ಲಿ ನೀಡಿದ ಪ್ರದರ್ಶನವೇ ಅದಕ್ಕೆ ಸಾಕ್ಷಿ. ಗೌತಮ್‌ ಆಲ್‌ರೌಂಡ್‌ ಆಟದ ಬಲದಿಂದ ಕರ್ನಾಟಕ ತಂಡ ಇನಿಂಗ್ಸ್‌ ಹಾಗೂ 121 ರನ್‌ಗಳ ಜಯ ಸಾಧಿಸಿತ್ತು.

ಇದೇ ಗೌತಮ್‌ ಹೋದ ತಿಂಗಳು ಕಹಿ ಘಟನೆ ಎದುರಿಸಿದ್ದರು. ದುಲೀಪ್‌ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಡಿಯಾ ರೆಡ್‌ ಪರ ಆಡಿದ್ದ ಅವರು ಐದು ವಿಕೆಟ್‌ ಪಡೆದಿದ್ದರು. ಆ ಬಳಿಕ ಟೈಫಾಯ್ಡ್‌ನಿಂದ ಬಳಲುತ್ತಿರುವುದಾಗಿ ಹೇಳಿ ಬೆಂಗಳೂರಿಗೆ ವಾಪಸಾಗಿದ್ದ ಅವರು, ಕೆಲವೇ ದಿನಗಳಲ್ಲಿ ಕೆಪಿಎಲ್‌ ಪಂದ್ಯದಲ್ಲಿ ಆಡಿದ್ದರು. ಆದರೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅನುಮತಿ ಪಡೆದಿರಲಿಲ್ಲ. ಇದರಿಂದ ಶಿಸ್ತು ಕ್ರಮ ಕೈಗೊಂಡಿದ್ದ ಮಂಡಳಿ ಅವರನ್ನು ಭಾರತ ’ಎ’ ತಂಡದಿಂದ ಕೈಬಿಟ್ಟಿತ್ತು. ಕಾರಣ ಕೇಳಿ ನೋಟಿಸ್ ಕೂಡಾ ನೀಡಲಾಗಿತ್ತು. ತಮ್ಮ ವರ್ತನೆ ಬಗ್ಗೆ ಗೌತಮ್‌ ಬಿಸಿಸಿಐ ಕ್ಷಮೆಯನ್ನೂ ಕೋರಿದ್ದರು.

ಈ ದುರದೃಷ್ಟಕರ ಘಟನೆ ತನ್ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ಗೌತಮ್‌ ಮೊದಲ ಪಂದ್ಯದಲ್ಲೇ ತೋರಿಸಿಕೊಟ್ಟಿದ್ದಾರೆ. ‘ಅದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ. ನಿರಾಳವಾಗಿ ಆಡಿದೆ’ ಎಂದು ಗೌತಮ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದರು.

ಮೂರು ವರ್ಷ ಹೊರಗಿದ್ದರು: ಗೌತಮ್‌ 2012 ರಲ್ಲಿ ಉತ್ತರ ಪ್ರದೇಶ ವಿರುದ್ಧದ ಪಂದ್ಯದೊಂದಿಗೆ ರಣಜಿ ಪದಾರ್ಪಣೆ ಮಾಡಿದ್ದರು. ಆದರೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಆಗಿರಲಿಲ್ಲ. 2013 ರ ಜನವರಿಯಲ್ಲಿ ಸೌರಾಷ್ಟ್ರ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ಸೋತು ಹೊರಬಿದ್ದಿತ್ತು. ಆ ಪಂದ್ಯದಲ್ಲಿ ಕೊನೆಯದಾಗಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಗೌತಮ್‌ ಮುಂದಿನ ಮೂರು ವರ್ಷ ತಂಡದಿಂದ ಹೊರಗುಳಿದಿದ್ದರು.

ಆದರೆ ಕೆಎಸ್‌ಸಿಎ ಟೂರ್ನಿಗಳಲ್ಲಿ ಸಾಮರ್ಥ್ಯ ತೋರಿಸಿ ಮತ್ತೆ ರಾಜ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. 2016–17ರ ಋತುವಿನ ರಣಜಿ ತಂಡದಲ್ಲಿ ಅವಕಾಶ ಪಡೆದಿದ್ದರಲ್ಲದೆ, ಅಮೋಘ ಬೌಲಿಂಗ್‌ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಎಂಟು ಪಂದ್ಯಗಳಿಂದ ಒಟ್ಟು 27 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು.

ರಾಜ್ಯ ತಂಡದ ಹರಭಜನ್: ಆಫ್‌ಸ್ಪಿನ್ನರ್ ಹರಭಜನ್‌ ಸಿಂಗ್‌ ಅವರ ಬೌಲಿಂಗ್‌ ಶೈಲಿ ಹೊಂದಿರುವುದಿಂದ ಗೌತಮ್‌ ಅವರನ್ನು ತಂಡದ ಸಹ ಆಟಗಾರರು‘ಭಜ್ಜಿ’ ಎಂದು ಕರೆಯುತ್ತಾರೆ. ಆರಂಭದಲ್ಲಿ ಹರಭಜನ್‌ ಅವರದ್ದೇ ಶೈಲಿಯಲ್ಲಿ ಬೌಲಿಂಗ್‌ ಮಾಡುತ್ತಿದ್ದ ಗೌತಮ್‌ ಇದೀಗ ಶೈಲಿಯಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ.

ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಒಟ್ಟು 51 ರನ್‌ಗಳಿಗೆ 7 ವಿಕೆಟ್‌ ಪಡೆದದ್ದಲ್ಲದೆ 170 ಎಸೆತಗಳಲ್ಲಿ 149 ರನ್‌ ಗಳಿಸಿದ್ದರು. ಪ್ರಥಮ ದರ್ಜೆ ಪಂದ್ಯವೊಂದರಲ್ಲಿ ಅವರು ಗಳಿಸಿದ ಮೊದಲ ಶತಕ ಇದು. ಮೂರನೇ ವಿಕೆಟ್‌ ಪತನದ ಬಳಿಕ ಕ್ರೀಸ್‌ಗಿಳಿದಿದ್ದ ಅವರು ಅಸ್ಸಾಂ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದ್ದರು.

ಕಳೆದ ರಣಜಿಯಲ್ಲಿ ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್‌ ಪಡೆದಾಗ ಉಂಟಾಗಿದ್ದ ಅದೇ ಸಂತಸ ಶತಕ ಗಳಿಸಿದಾಗಲೂ ಉಂಟಾಯಿತು. ನಾಯಕ ಆರ್‌.ವಿನಯ್‌ಕುಮಾರ್‌ ಮತ್ತು ಸಿ.ಎಂ.ಗೌತಮ್‌ ಅವರ ಸಲಹೆಗಳು ನೆರವು ನೀಡಿತು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಲು ಸಾಧ್ಯವಾಗಿರುವುದು ಸಂತಸ ಉಂಟುಮಾಡಿದೆ ಎಂದು ಗೌತಮ್‌ ಹೇಳಿದ್ದಾರೆ.

ಎರಡು ವರ್ಷಗಳ ಬಿಡುವಿನ ಬಳಿಕ ರಣಜಿ ಟ್ರೋಫಿ ಗೆಲ್ಲುವ ಗುರಿಯನ್ನು ಕರ್ನಾಟಕ ತಂಡ ಹೊಂದಿದೆ. ಅದು ಈಡೇರಬೇಕಾದರೆ ಗೌತಮ್‌ ಅವರಿಂದ ಇನ್ನಷ್ಟು ಆಲ್‌ರೌಂಡ್‌ ಪ್ರದರ್ಶನಗಳು ಮೂಡಿ ಬರಬೇಕಿದೆ.

ಐಪಿಎಲ್‌ನಲ್ಲಿ ₹2 ಕೋಟಿ ಬೆಲೆ

ಗೌತಮ್‌ ಅವರು ಕಳೆದ ರಣಜಿ ಋತುವಿನಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದರಿಂದ ಐಪಿಎಲ್‌ ಹರಾಜಿನ ವೇಳೆ ಕೆಲವು ಫ್ರಾಂಚೈಸಿಗಳನ್ನು ಆಕರ್ಷಿಸಿದ್ದರು. ₹ 10 ಲಕ್ಷ ಮೂಲ ಬೆಲೆ ಹೊಂದಿದ್ದ ಅವರು ₹ 2 ಕೋಟಿ ಮೊತ್ತಕ್ಕೆ ಮುಂಬೈ ಇಂಡಿಯನ್ಸ್‌ ತಂಡದ ಪಾಲಾಗಿದ್ದರು. 10ನೇ ಆವೃತ್ತಿಯ ಐಪಿಎಲ್‌ ಹರಾಜಿನಲ್ಲಿ ಅತಿಹೆಚ್ಚು ಮೊತ್ತ ಪಡೆದ ರಾಜ್ಯದ ಆಟಗಾರ ಎನಿಸಿಕೊಂಡಿದ್ದರು.

Post Comments (+)