ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಪರ್ಸಂಟೇಜ್ ಮುಖ್ಯಮಂತ್ರಿ

‘ಶೇ 25ರಷ್ಟು ಕಮೀಶನ್ ಕೊಟ್ಟರೆ ಮಾತ್ರ ಯೋಜನೆಗೆ ಅನುಮೋದನೆ’
Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿದ್ದರಾಮಯ್ಯ  ಪರ್ಸಂಟೇಜ್‌ ಮುಖ್ಯಮಂತ್ರಿ. ಶೇ 25ರಷ್ಟು ಕಮೀಶನ್ ಇಲ್ಲದೆ ಯಾವುದೇ ಯೋಜನೆಗೂ ಅನುಮೋದನೆ ನೀಡುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಪಾದಿಸಿದರು.

ನವೆಂಬರ್ 2ರಿಂದ ಆರಂಭವಾಗಲಿರುವ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯ ಲೋಗೋ ಮತ್ತು ಪಥಸೂಚಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಯೋಜನೆ ಅಥವಾ ಕಾಮಗಾರಿ ಅಂದಾಜು ಮೊತ್ತವನ್ನು ಶೇ 25ರಷ್ಟು ಹೆಚ್ಚಿಸಿ, ಅದನ್ನು ಕಮೀಶನ್ ರೂಪದಲ್ಲಿ ಪಡೆಯುವ ಅಭ್ಯಾಸ ಮಾಡಿಕೊಂಡಿದ್ದಾರೆ’ ಎಂದು ದೂರಿದರು.

‘ಕಲ್ಲಿದ್ದಲು ಹಗರಣವನ್ನು ಬಿಜೆಪಿ ಬಯಲು ಮಾಡಿದ ಮೇಲೆ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ.  ಕಲ್ಲಿದ್ದಲು ಪೂರೈಸಲು ಒಪ್ಪಂದ ಮಾಡಿಕೊಂಡಿದ್ದ ಕಂಪೆನಿ ಕಟ್ಟಬೇಕಿದ್ದ ದಂಡದ ಹಣವನ್ನು ಸುಪ್ರೀಂಕೋರ್ಟ್ ಆದೇಶದ ಅನ್ವಯವೇ ಪಾವತಿಸಿದ್ದೇವೆ ಎಂದು ಇಬ್ಬರೂ ಹೇಳಿಕೆ ನೀಡಿದ್ದಾರೆ. ಅದು ಸತ್ಯಕ್ಕೆ ದೂರವಾದ ಸಂಗತಿ’ ಎಂದರು.

ಐತಿಹಾಸಿಕ ಯಾತ್ರೆ:

224 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 75 ದಿನ ಸಾಗಲಿರುವ ಯಾತ್ರೆ ದೇಶದ ಇತಿಹಾಸದಲ್ಲೇ ಮೊದಲ ಪ್ರಯೋಗವಾಗಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಹೇಳಿದರು.

ಯಾತ್ರೆಯ ಪಥಸೂಚಿ ಬಿಡುಗಡೆ ಮಾಡಿದ ಅವರು, ನ.2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಉದ್ಘಾಟನೆ ಸಮಾರಂಭಕ್ಕೆ ದಕ್ಷಿಣ ಕರ್ನಾಟಕ ಜಿಲ್ಲೆಗಳ 114 ವಿಧಾನಸಭೆ ಕ್ಷೇತ್ರಗಳಿಂದ ಸುಮಾರು ಒಂದು ಲಕ್ಷ ಬೈಕ್‌ ಗಳಲ್ಲಿ ತಲಾ ಇಬ್ಬರಂತೆ ನಗರಕ್ಕೆ ಬರಲಿದ್ದಾರೆ. ಅಂದಿನ ಸಮಾವೇಶಕ್ಕೆ ಮೂರು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.

ಡಿಸೆಂಬರ್ 21ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಉತ್ತರ ಕರ್ನಾಟಕದ 110 ವಿಧಾನಸಭಾ ಕ್ಷೇತ್ರಗಳಿಂದ 80 ಸಾವಿರ ಬೈಕ್‌ಗಳಲ್ಲಿ ಕಾರ್ಯಕರ್ತರು ಬರಲಿದ್ದಾರೆ. ಜನವರಿ 25ಕ್ಕೆ ಮೈಸೂರಿನಲ್ಲಿ ಸಮಾವೇಶ ನಡೆಯಲಿದೆ. ಜ.28ಕ್ಕೆ ಬೆಂಗಳೂರಿನಲ್ಲಿ ಸಮಾರೋಪ ನಡೆಯಲಿದೆ ಎಂದು ವಿವರಿಸಿದರು.

ಯಾತ್ರೆಗೆ ₹1 ಕೋಟಿ ವೆಚ್ಚದ ರಥ

ಪರಿವರ್ತನಾ ಯಾತ್ರೆಗಾಗಿ ₹1 ಕೋಟಿಗೂ ಹೆಚ್ಚಿನ ಮೊತ್ತದಲ್ಲಿ ಭವ್ಯವಾದ ರಥ ನಿರ್ಮಿಸುವ ಜವಾಬ್ದಾರಿಯನ್ನು ಈಗಾಗಲೇ ಖಾಸಗಿ ಸಂಸ್ಥೆಗೆ ವಹಿಸಲಾಗಿದೆ.

75 ದಿನ ಸಂಚರಿಸಲಿರುವ ಯಾತ್ರೆಗಾಗಿ ಲಾರಿಯನ್ನು ಬಳಸಿ ರಥ ನಿರ್ಮಾಣ ಮಾಡಲಾಗುತ್ತದೆ. ರಥದಲ್ಲಿ ಎರಡು ಸ್ತರಗಳು ಇರಲಿವೆ. ಯಾತ್ರೆಯ ನೇತೃತ್ವ ವಹಿಸಲಿರುವ ಯಡಿಯೂರಪ್ಪ ಅವರಿಗಾಗಿ ಕೆಳಸ್ತರದಲ್ಲಿ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ, ಶೌಚಾಲಯ, ಲಘು ಉಪಹಾರ, ಟೀ, ಕಾಫಿ ಪೂರೈಸುವ ವ್ಯವಸ್ಥೆ ಇರಲಿದೆ.

ಮೇಲುಸ್ತರದಲ್ಲಿ ಮೊದಲು ಒಬ್ಬರು ಮಾತ್ರ ನಿಲ್ಲುವಂತೆ ವೇದಿಕೆ ನಿರ್ಮಿಸಲು ಯೋಚಿಸಲಾಗಿತ್ತು. ವಿಧಾನಸಭಾ ಕ್ಷೇತ್ರಗಳಲ್ಲಿ ಬಹಿರಂಗ ಸಭೆ ನಡೆಸುವಾಗ ಸ್ಥಳೀಯ ಮಟ್ಟದ ನಾಯಕರಿಗೆ ಅವಕಾಶ ಕಲ್ಪಿಸಬೇಕು ಎಂಬ ಕಾರಣಕ್ಕೆ ವಿಶಾಲ ವೇದಿಕೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗ ನಿರ್ಮಾಣವಾಗಲಿರುವ ರಥದಲ್ಲಿ ಒಂಬತ್ತು ಜನ ನಿಲ್ಲಲು ಹಾಗೂ 15 ಜನ ಕುಳಿತುಕೊಳ್ಳಲು ಅವಕಾಶ ಇರಲಿದೆ.

ರಥ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಪಕ್ಷವೇ ಭರಿಸಲಿದೆ. ಯಾತ್ರೆ ಉದ್ದಕ್ಕೂ ಯಾವುದೇ ಅಡಚಣೆಯಾಗಬಾರದು ಎಂಬ ಕಾರಣಕ್ಕೆ ಹೊಸ ಲಾರಿಯನ್ನು ಖರೀದಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

7,500 ಕಿ.ಮೀ ಉದ್ದ ಸಾಗಲಿದೆ ಯಾತ್ರೆ

ಮೂರು ಸಮಾವೇಶ, ಎರಡು ಪ್ರತ್ಯೇಕ ಬೈಕ್ ರ‍್ಯಾಲಿ

1.80 ಲಕ್ಷ ಬೈಕ್‌ಗಳಲ್ಲಿ ಬರಲಿರುವ ಕಾರ್ಯಕರ್ತರು

* ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ ಮಾನ ನೀಡಲು ತಂದಿರುವ ತಿದ್ದುಪಡಿಯನ್ನು ಕಾಂಗ್ರೆಸ್‌ ಏಕೆ ವಿರೋಧಿಸುತ್ತಿದೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗಪಡಿಸಲಿ

–ಡಿ.ವಿ. ಸದಾನಂದಗೌಡ, ಕೇಂದ್ರ ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT