ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲೇ ತೆರಿಗೆ ಮರುಪಾವತಿ

ರಫ್ತುದಾರರಿಗೆ ತೆರಿಗೆ ಮೊತ್ತ ಹಿಂದಿರುಗಿಸಲು ಶೀಘ್ರದಲ್ಲಿಯೇ ಜಿಎಸ್‌ಟಿಎನ್‌ ಆ್ಯಪ್‌
Last Updated 23 ಅಕ್ಟೋಬರ್ 2017, 19:37 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿಯಲ್ಲಿ ರಫ್ತುದಾರರಿಗೆ ಆಗಸ್ಟ್‌ ಮತ್ತು ಸೆಪ್ಟೆಂಬರ್ ತಿಂಗಳಿನ ತೆರಿಗೆ ಮರುಪಾವತಿ ಪ್ರಕ್ರಿಯೆ ಈ ವಾರದಿಂದ ಆರಂಭವಾಗಲಿದೆ ಎಂದು ಜಿಎಸ್‌ಟಿಎನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.

ತೆರಿಗೆ ಮರುಪಾವತಿಗಾಗಿ ಈ ವಾರದೊಳಗೇ ಜಿಎಸ್‌ಟಿಎನ್ ಆ್ಯಪ್‌ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಎರಡೂ ತಿಂಗಳಿನ ಜಿಎಸ್‌ಟಿಆರ್‌–3ಬಿ ಸಲ್ಲಿಕೆಯಾಗಿದೆ. ಅಂತಿಮ ಮಾಹಿತಿ ಸಲ್ಲಿಸುವ ಜಿಎಸ್‌ಟಿಆರ್‌–1 ಸಲ್ಲಿಕೆ ಇನ್ನೂ ಬಾಕಿ ಇದೆ. ಈ ಎರಡೂ ಮಾಹಿತಿಗಳು ಹೋಲಿಕೆಯಾದ ಬಳಿಕ ಮರುಪಾವತಿ ಮಾಡಲಾಗುವುದು.

ಜುಲೈ ತಿಂಗಳಿನಲ್ಲಿ ರಫ್ತುದಾರರು ಪಾವತಿಸಿದ್ದ ಸಮಗ್ರ ಜಿಎಸ್‌ಟಿಗೆ (ಐಜಿಎಸ್‌ಟಿ) ಅಕ್ಟೋಬರ್ 10 ರಿಂದ ತೆರಿಗೆ ಮರುಪಾವತಿಸಲು ಚಾಲನೆ ನೀಡಲಾಗಿದೆ.

ರಫ್ತು ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ಟೇಬಲ್ 6ಎನಲ್ಲಿ ಭರ್ತಿ ಮಾಡಿದ ಬಳಿಕ ಜಿಎಸ್‌ಟಿಎನ್‌ ಆ್ಯಪ್‌ನಲ್ಲಿ ಮಾರಾಟಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸೇವ್ ಮಾಡಿ ಅಪ್‌ಲೋಡ್ ಮಾಡಬಹುದು.

ಟೇಬಲ್‌ 6ಎಗೆ ರಫ್ತುದಾರರು ಡಿಜಿಟಲ್‌ ಸಹಿ ಮಾಡಬೇಕಾಗುತ್ತದೆ. ಆ ಬಳಿಕ ಅದು ಅಬಕಾರಿ ಇಲಾಖೆಗೆ ಹೋಗುತ್ತದೆ. ಅಲ್ಲಿ ಜಿಎಸ್‌ಟಿಆರ್‌–3ಬಿನಲ್ಲಿ ಪಾವತಿಸಿದ ತೆರಿಗೆ ಮತ್ತು ರಫ್ತು ವಹಿವಾಟಿನ ಮಾಹಿತಿಗಳ ಪರಿಶೀಲನೆ ನಡೆಯುತ್ತದೆ. ಆ ಬಳಿಕ ರಫ್ತುದಾರರ ಖಾತೆಗೆ ಅಥವಾ ಚೆಕ್‌ ಮೂಲಕ ಮರುಪಾವತಿ ಮೊತ್ತ ಸಂದಾಯವಾಗಲಿದೆ.

**

ಜಿಎಸ್‌ಟಿಎನ್ ಲೋಪ ನಿವಾರಣೆಗೆ ಕ್ರಮ

ನವದೆಹಲಿ: ‘ಜಿಎಸ್‌ಟಿಎನ್‌ ಅಂತರ್ಜಾಲ ತಾಣದಲ್ಲಿ ಕಂಡುಬಂದಿರುವ ದೋಷಗಳನ್ನು ನಿವಾರಿಸಲು ಅಗತ್ಯ ಕ್ರಮಗಳನ್ನೆಲ್ಲ ಕೈಗೊಳ್ಳಲಾಗಿದೆ’ ಎಂದು ಜಾಲತಾಣದ ಅಧ್ಯಕ್ಷ ಅಜಯ್‌ ಭೂಷಣ್‌ ಪಾಂಡೆ ಹೇಳಿದ್ದಾರೆ.

ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ನೇತೃತ್ವದಲ್ಲಿ ರಚಿಸಲಾಗಿರುವ ಸಚಿವರ ಸಮಿತಿಯು ಜಿಎಸ್‌ಟಿಎನ್‌ ಕಾರ್ಯವೈಖರಿಯನ್ನು ಪ್ರತಿ ಹದಿನೈದು ದಿನಕ್ಕೊಮ್ಮೆ ಪರಾಮರ್ಶಿಸುತ್ತಿದೆ.

‘ಜಿಎಸ್‌ಟಿ ಪಾವತಿ ಪ್ರಕ್ರಿಯೆ ಸುಸೂತ್ರವಾಗಿ ನಡೆಯುತ್ತಿರುವುದನ್ನು ಪರಿಶೀಲಿಸಲು ಸಮಿತಿಯು ಇದೇ 28ರಂದು ಮತ್ತೆ ಸಭೆ ಸೇರಲಿದೆ. ಸೆಪ್ಟೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಸಮಿತಿಯು ಇದುವರೆಗೆ ಮೂರು ಬಾರಿ ಸಭೆ ಸೇರಿದೆ. ಇನ್ಫೊಸಿಸ್‌ನ ಸಿಇಒ ಕೂಡ ಸಚಿವರ ಸಮಿತಿಯ ಸಭೆಯಲ್ಲಿ ಭಾಗಿಯಾಗಿ ಮಾಹಿತಿ ಪಡೆದುಕೊಂಡಿದ್ದಾರೆ. ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ ಪ್ರಕ್ರಿಯೆ ಸುಸೂತ್ರವಾಗಿ ಇರುವಂತೆ ನೋಡಿಕೊಳ್ಳಲು ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದು ಪಾಂಡೆ ಹೇಳಿದ್ದಾರೆ.

‘ಮುಂದಿನ ಎರಡು ತಿಂಗಳಲ್ಲಿ ತೆರಿಗೆ ಪಾವತಿಯಲ್ಲಿ ಯಾವುದೇ ಅಡಚಣೆ ಎದುರಾಗದಿರುವಂತೆ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

ಒಂದೇ ಅಂತರ್ಜಾಲ ತಾಣದಲ್ಲಿ ಲಕ್ಷಾಂತರ ರಿಟರ್ನ್ಸ್‌ ಸಲ್ಲಿಕೆಯ ಸಂದರ್ಭದಲ್ಲಿ ಆರಂಭಿಕ ದಿನಗಳಲ್ಲಿ ಕೆಲ ಸಮಸ್ಯೆಗಳು ಎದುರಾಗುವುದು ಸಹಜ. ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ’ ಎಂದು ‍ಪಾಂಡೆ ಹೇಳಿದ್ದಾರೆ.

ಜಿಎಸ್‌ಟಿಎನ್‌, ಹೊಸ ತೆರಿಗೆ ವ್ಯವಸ್ಥೆಯ ಬೆನ್ನೆಲುಬು ಆಗಿ ಕಾರ್ಯನಿರ್ವಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT