ನವದೆಹಲಿ: ಆರ್ಥಿಕ ವರ್ಷದ ಮೊದಲ 6 ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ರಫ್ತು ವಹಿವಾಟಿನಲ್ಲಿ ಮಾರುತಿ ಸುಜುಕಿ ಇಂಡಿಯಾ ಮೊದಲ ಸ್ಥಾನಕ್ಕೇರಿದೆ.
ಈ ಮೊದಲು ಹುಂಡೈ ಮೋಟಾರ್ ಇಂಡಿಯಾ ಕಂಪೆನಿ ಮೊದಲ ಸ್ಥಾನದಲ್ಲಿತ್ತು. ಅದು ಈಗ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಏಪ್ರಿಲ್–ಸೆಪ್ಟೆಂಬರ್‌ನಲ್ಲಿ ಮಾರುತಿ 57,300 ಪ್ರಯಾಣಿಕ ವಾಹನಗಳನ್ನು ರಫ್ತು ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 54,008 ವಾಹನಗಳನ್ನು ರಫ್ತು ಮಾಡಿತ್ತು. ಅಂದರೆ ಶೇ 6 ರಷ್ಟು ಪ್ರಗತಿ ಕಂಡಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ (ಎಸ್‌ಐಎಎಂ) ಮಾಹಿತಿ ನೀಡಿದೆ.
ಹುಂಡೈ ರಫ್ತು 63,014 ರಿಂದ 44,585ಕ್ಕೆ ಭಾರಿ ಇಳಿಕೆ ಕಂಡಿದೆ. ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ನಿಸಾನ್ ಈ ಬಾರಿ ಆರನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಫೋಕ್ಸ್‌ವ್ಯಾಗನ್ ಇಂಡಿಯಾ ಎರಡನೇ ಸ್ಥಾನಕ್ಕೇರಿದೆ. ಮೇ 18 ರಿಂದ ಭಾರತದಲ್ಲಿ ವಾಹನ ಮಾರಾಟ ನಿಲ್ಲಿಸಿರುವ ಜನರಲ್ ಮೋಟಾರ್ಸ್ ಇಂಡಿಯಾ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿರುವುದು ಆಚ್ಚರಿ ಮೂಡಿಸಿದೆ.