ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳಿಂದ ಮುಕ್ತವಾಗದ ಮುಕ್ತರಾಂಪುರ

Last Updated 24 ಅಕ್ಟೋಬರ್ 2017, 8:28 IST
ಅಕ್ಷರ ಗಾತ್ರ

ತಾವರಗೇರಾ: ತಗ್ಗುಗುಂಡಿ ಬಿದ್ದ ಕಚ್ಛಾ ರಸ್ತೆ; ಬಾರದ ಬಸ್‌. ಗ್ರಾಮದಲ್ಲಿ ಕುಡಿಯಲು ಶುದ್ಧ ನೀರಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಮಾಡಿದರೂ ಹಣ ಪಾವತಿಸಿಲ್ಲ. ನಾಲ್ಕು ವರ್ಷ ಕಳೆದರೂ ಮುಗಿಯದ ಅಂಗನವಾಡಿ ಕೆಂದ್ರದ ಕಾಮಗಾರಿ. ಇವು ಸಮೀಪದ ಮುಕ್ತರಾಂಪುರ ಗ್ರಾಮದ ಮುಖ್ಯ ಸಮಸ್ಯೆಗಳು. ಗ್ರಾಮದಲ್ಲಿ ಕೇವಲ 50 ಮನೆಗಳಿದ್ದು, ಮೂಲ ಸೌಲಭ್ಯಗಳಿಗಾಗಿ ಜನರು ಕಾಯುತ್ತಿದ್ದಾರೆ.

‘ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಮುದಾಯ ಭವನದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಇದರಿಂದ ಮಕ್ಕಳ ಬಿಸಿಯೂಟ ತಯಾರಿಸಲು ಕಷ್ಟವಾಗಿದೆ. ಅಡುಗೆ ತಯಾರಿ, ಮಕ್ಕಳಿಗೆ ಸೂಕ್ತ ಕಲಿಕೆಗೆ ಬೇಕಾಗುವ ವಾತಾವರಣ, ಸಲಕರಣೆ ಬಳಸಲು ಅನನುಕೂಲವಾಗಿದೆ. ವರ್ಷಕ್ಕೊಮ್ಮೆ ಎರಡು ಸಲ ಕಾಮಗಾರಿ ನಡೆಸುತ್ತಾರೆ’ ಎಂದು ಕುಂಟೆಪ್ಪ ಹೂಜಿ ಆರೋಪಿಸಿದರು.

‘ನಾಲ್ಕು ತಿಂಗಳ ಹಿಂದೆ ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ಮಾಡಿದ ಕೂಲಿಕಾರರಿಗೆ ಇದುವರೆಗೆ ಕೂಲಿ ಹಣ ಪಾವತಿಸಿಲ್ಲ. ಇದರಿಂದ ದುಡಿದ ಕುಟುಂಬಗಳಿಗೆ ಜೀವನ ನಡೆಸಲು ತೊಂದರೆಯಾಗಿದೆ. ಪಂಚಾಯಿತಿಯಿಂದ ಕೂಲಿಕಾರರಿಗೆ ಪ್ರತಿ ವಾರ ಅಥವಾ 15 ದಿನಕ್ಕೊಮ್ಮೆ ಕೂಲಿ ಹಣ ನೀಡಬೇಕು’ ಎಂದು ಅವರು ಆಗ್ರಹಿಸಿದರು.

‘ಗ್ರಾಮದಿಂದ 3–4 ಕಿಲೊ ಮೀಟರ್‌ ದೂರವಿರುವ ಹುಲಿಯಾಪುರಕ್ಕೆ ಹೋಗುವ ಕಚ್ಚಾ ರಸ್ತೆ ಹದಗೆಟ್ಟಿದೆ. ಇದರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್‌ ಓಡಾಟ ನಿಲ್ಲಿಸಿದ್ದಾರೆ. ಇದರಿಂದ ಹುಲಿಯಾಪುರ ಆಸ್ಪತ್ರೆಗೆ ಹೋಗುವ ವೃದ್ಧರು, ಮಕ್ಕಳು, ಗರ್ಭಿಣಿಯರಿಗೆ ಅನನುಕೂಲ ಆಗಿದೆ. ರಸ್ತೆಗೆ ಶೀಘ್ರ ಡಾಂಬರೀಕರಣ ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

‘ಗ್ರಾಮದ ಕೆಲ ರೈತರು ಸರ್ಕಾರದಿಂದ ಬೆಳೆ ಪರಿಹಾರ ಸಿಗದೆ ಪರದಾಡುತ್ತಿದ್ದಾರೆ. ಮೂರು–ನಾಲ್ಕು ತಿಂಗಳಿಂದ ಗ್ರಾಮ ಲೆಕ್ಕಿಗರನ್ನು ಭೇಟಿ ಮಾಡಿದರೂ ಪ್ರಯೋಜನ ಆಗುತ್ತಿಲ್ಲ’ ಎಂದು ಗ್ರಾಮದ ರೈತರಾದ ಹನಮಂತ ಹೂಜಿ, ಪರಸಪ್ಪ ತಳವಾರ ಅಳಲು ತೋಡಿಕೊಂಡರು.

‘ಮಹಿಳೆಯರು ಬಟ್ಟೆ ತೊಳೆಯುವ ಮತ್ತು ಜಾನುವಾರುಗಳ ನೀರಿನ ತೊಟ್ಟಿಗಳು ಅವ್ಯವಸ್ಥೆಯಿಂದ ಕೂಡಿವೆ. ಗ್ರಾಮದಲ್ಲಿ ಪ್ಲೋರೈಡ್‌ ಯುಕ್ತ ನೀರು ಜನ ಕುಡಿಯುತ್ತಿದ್ದಾರೆ. ಇದರಿಂದ ಕೈಕಾಲು, ಮಂಡಿ ನೋವು, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಶಾಸಕರು ಗ್ರಾಮಕ್ಕೆ ಒಂದು ಶುದ್ಧ ನೀರಿನ ಘಟಕ ಮಂಜೂರು ಮಾಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT