ಸೋಮವಾರ, ಸೆಪ್ಟೆಂಬರ್ 16, 2019
22 °C
ಸೆಮಿಫೈನಲ್ ಪಂದ್ಯಗಳಿಗೆ ವೇದಿಕೆ ಸಜ್ಜು

ಜಯದ ವಿಶ್ವಾಸದಲ್ಲಿ ಬ್ರೆಜಿಲ್‌

Published:
Updated:
ಜಯದ ವಿಶ್ವಾಸದಲ್ಲಿ ಬ್ರೆಜಿಲ್‌

ಕೋಲ್ಕತ್ತ: ಪ್ರಶಸ್ತಿ ಗೆದ್ದುಕೊಳ್ಳುವ ನೆಚ್ಚಿನ ತಂಡ ಬ್ರೆಜಿಲ್ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಬುಧವಾರ ಇಂಗ್ಲೆಂಡ್ ಎದುರು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಡಲಿದೆ.

ಭಾರತದಲ್ಲಿ ನಡೆಯುತ್ತಿರುವ ಕಾಲ್ಚೆಂಡಿನ ಆಟ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಫೈನಲ್‌ ತಲುಪಲಿರುವ ತಂಡಗಳ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಬೀಳಲಿದೆ.

ಜರ್ಮನಿ ಎದುರಿನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ಒತ್ತಡಕ್ಕೆ ಒಳಗಾಗಿತ್ತು. ಆರಂಭದಲ್ಲೇ ಗೋಲು ದಾಖಲಿಸಿದ್ದ ಜರ್ಮನಿಗೆ 70 ನಿಮಿಷದ ಪಂದ್ಯದ ಬಳಿಕ ಬ್ರೆಜಿಲ್ ತಿರುಗೇಟು ನೀಡಿತ್ತು. ಕ್ರೀಡಾಂಗಣದಲ್ಲಿ ಬ್ರೆಜಿಲ್‌ ತಂಡದ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಒತ್ತಡಕ್ಕೆ ಒಳಗಾದ ಆಟಗಾರರು ಕೊನೆಯ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಎವೆರ್ಸನ್ ಹಾಗೂ ಪುಲಿನ್ಹೊ ತಂಡದ ಸೆಮಿಫೈನಲ್‌ ಕನಸು ನನಸು ಮಾಡಿದ್ದರು. ಆರು ನಿಮಿಷಗಳ ಅಂತರದಲ್ಲಿ ಎರಡು ಗೋಲು ದಾಖಲಾಗಿದ್ದವು.

ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಬ್ರೆಜಿಲ್ ತಂಡದ ಆಟ ನೋಡಲು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರಲಿದ್ದಾರೆ. ಈ ಪಂದ್ಯವನ್ನು ಬ್ರೆಜಿಲ್ ಪೂರ್ಣ ಸಿದ್ಧತೆಯೊಂದಿಗೆ ಆಡಲಿದೆ ಎಂದು ತಂಡದ ಆಡಳಿತ ಮಂಡಳಿ ಹೇಳಿದೆ.

ಮಳೆಯ ಕಾರಣದಿಂದ ಪಂದ್ಯದ ಎರಡು ದಿನ ಮುಂಚಿತವಾಗಿ ಗುವಾಹಟಿಯಿಂದ ಇಲ್ಲಿಗೆ ಪಂದ್ಯ ಸ್ಥಳಾಂತರಿಸಲಾಗಿದೆ. ಗುವಾಹಟಿಯಲ್ಲಿ ಅಭ್ಯಾಸ ನಡೆಸಿದ್ದ ಆಟಗಾರರು ಬಳಿಕ ಕೋಲ್ಕತ್ತಗೆ ಪ್ರಯಾಣ ಮಾಡಿದರು.

ಇದೇ ಅಂಗಳದಲ್ಲಿ ಬ್ರೆಜಿಲ್ 2–1ರಲ್ಲಿ ಜರ್ಮನಿ ವಿರುದ್ಧ ಗೆದ್ದಿದೆ. ಈ ತಂಡದಲ್ಲಿ ಎವೆರ್ಸನ್, ಪುಲಿನ್ಹೊ ಮತ್ತು ಬೆರ್ನರ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಪುಲಿನ್ಹೊ ಜರ್ಮನಿ ವಿರುದ್ಧದ ಪಂದ್ಯದಲ್ಲಿಯೂ ಮಿಂಚಿದ್ದರು.

ಮಿಡ್‌ಫೀಲ್ಡ್‌ನಲ್ಲಿ ಅಲನ್‌, ಮಾರ್ಕೋಸ್‌, ಅಂಟನಿಯೊ ಬ್ರೆಜಿಲ್ ತಂಡದ ಶಕ್ತಿ ಎನಿಸಿದ್ದಾರೆ. ಡಿಫೆಂಡರ್‌ಗಳು ಬ್ರೆಜಿಲ್‌ ಜಯಕ್ಕೆ ಪ್ರಮುಖ ಕಾಣಿಕೆ ನೀಡಿದ್ದಾರೆ. ವಿಟೊ ಮಾರ್ಷಲ್‌ ಹಿಂದಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಗೋಲ್‌ಕೀಪರ್ ಗ್ಯಾಬ್ರಿಯೆಲ್‌ ಬ್ರಜಾವೊ ಅವರನ್ನು ವಂಚಿಸಿ ಗೋಲು ದಾಖಲಿಸಿವುದು ಕಷ್ಟ. ಇಂಗ್ಲೆಂಡ್‌ ಪಡೆಗೆ ಅವರು ಪ್ರಮುಖ ಅಡ್ಡಿಯಾಗಲಿದ್ದಾರೆ. ಒಟ್ಟಾರೆ ಶೇ 88.9ರಷ್ಟು ಗೋಲುಗಳನ್ನು ತಡೆದ ದಾಖಲೆಯನ್ನು ಅವರು ಹೊಂದಿದ್ದಾರೆ.

ಇಂಗ್ಲೆಂಡ್‌ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 4–1ಗೋಲುಗಳಲ್ಲಿ ಅಮೆರಿಕಾವನ್ನು ಮಣಿಸಿ ಸೆಮಿಫೈನಲ್‌ ತಲುಪಿದೆ. ಈ ತಂಡದ ಬ್ರೆಸ್ಟರ್‌ ಮೂರು ಗೋಲು ದಾಖಲಿಸಿ ಮಿಂಚಿದ್ದರು. 11, 14 ಮತ್ತು 90ನೇ ನಿಮಿಷದಲ್ಲಿ ಅವರು ಚೆಂಡನ್ನು ಗುರಿ ಸೇರಿಸಿದ್ದರು. ಗ್ರಿಬ್ಸ್‌ವೈಟ್‌ (64ನೇ ನಿ.) ಒಂದು ಗೋಲಿನಿಂದ ಜಯದ ಅಂತರ ಹೆಚ್ಚಿಸಿದ್ದರು. ಆದರೆ ಅಮೆರಿಕಾ ತಂಡ ಒಂದು ಗೋಲು ದಾಖಲಿಸಿತ್ತು. ಇಂಗ್ಲೆಂಡ್ ತಂಡಕ್ಕೆ ಫಾವರ್ಡ್‌ ಆಟಗಾರರೇ ಶಕ್ತಿ. ಹಿಂದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ದಾಖಲಿಸಿದ 15 ಗೋಲುಗಳು ಫಾವರ್ಡ್‌ ಆಟ ಗಾರರ ಕೊಡುಗೆಯಾಗಿವೆ. ಯುವ ಆಟಗಾರರು ಈ ತಂಡದಲ್ಲಿ ಹೆಚ್ಚು ಇದ್ದಾರೆ. ಜಪಾನ್ ವಿರುದ್ಧದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜಾರ್ಡನ್‌ ಸ್ಯಾಂಚೊ ಮಿಂಚು ಹರಿಸಿದ್ದರು. ಪೆನಾಲ್ಟಿ ಶೂಟೌಟ್‌ನಲ್ಲಿ ಈ ತಂಡ ಪರಿಣಿತಿ ಸಾಧಿಸಿಲ್ಲ.

Post Comments (+)