ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜ್ಬುಲ್‌ ಮುಖ್ಯಸ್ಥನ ಮಗನ ಬಂಧನ

ಉಗ್ರಗಾಮಿ ಸಂಘಟನೆಗೆ ವಿದೇಶದಿಂದ ಹಣ ಸಂಗ್ರಹಿಸಿ ನೀಡಿದ ಆರೋಪ
Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಹಿಜ್ಬುಲ್‌ ಮುಜಾಹಿದೀನ್‌ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಸಯ್ಯದ್‌ ಸಲಾಹುದ್ದೀನ್‌ನ ಮಗ ಸಯ್ಯದ್‌ ಶಾಹಿದ್‌ ಯೂಸುಫ್‌ನನ್ನು (42) ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬಂಧಿಸಿದೆ. ಸಲಾಹುದ್ದೀನ್‌ ಜಾಗತಿಕ ಉಗ್ರ ಎಂದು ಈ ಜೂನ್‌ನಲ್ಲಿ ಅಮೆರಿಕ ಘೋಷಿಸಿದೆ.

ಸೌದಿ ಅರೇಬಿಯಾದಲ್ಲಿರುವ ಹಿಜ್ಬುಲ್‌ ಉಗ್ರ ಎಜಾಜ್‌ ಅಹ್ಮದ್‌ ಭಟ್‌ ಎಂಬಾತ ವರ್ಗಾಯಿಸಿದ ಹಣವನ್ನು ಹಿಜ್ಬುಲ್‌ ಮುಜಾಹಿದೀನ್‌ಗೆ ತಲುಪಿಸಿದ ಆರೋಪ ಶಾಹಿದ್‌ ಮೇಲಿದೆ. 2011ರಿಂದ 2014ರ ನಡುವೆ ಕನಿಷ್ಠ ನಾಲ್ಕು ಕಂತುಗಳಲ್ಲಿ ಹಣ ಪಾವತಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ‘ಸುಸ್ಥಿರ ಸಂವಾದ’ ನಡೆಸಲು ಸಂಧಾನಕಾರರನ್ನು ನೇಮಿಸಿದ ಮರು ದಿನವೇ ಈ ಬಂಧನ ನಡೆದಿದೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿರುವ ಪ್ರಕರಣದ ತನಿಖೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಾಹಿದ್‌, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಕೃಷಿ ಇಲಾಖೆಯ ಗ್ರಾಮ ಕೃಷಿ ವಿಸ್ತರಣಾ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಭಾರತದ ಹಲವರೊಂದಿಗೆ ಏಜಾಜ್‌ ಸಂಪರ್ಕ ಹೊಂದಿದ್ದು ಅದರಲ್ಲಿ ಶಾಹಿದ್‌ ಕೂಡ ಒಬ್ಬ ಎಂದು ಎನ್ಐಎ ತಿಳಿಸಿದೆ.

ಶಾಹಿದ್‌ನನ್ನು ನಾಲ್ಕು ಬಾರಿ ತನಿಖೆಗೆ ಒಳಪಡಿಸಲಾಗಿತ್ತು. ಎನ್‌ಐಎ ಮುಂದೆ ಮಂಗಳವಾರ ಮತ್ತೆ ಹಾಜರಾಗುವಂತೆ ಸೂಚಿಸಲಾಗಿತ್ತು. ಮಂಗಳವಾರ ಎನ್‌ಐಎ ಮುಂದೆ ಹಾಜರಾದ ಆತನನ್ನು ಬಂಧಿಸಲಾಗಿದೆ. ಉಗ್ರರಿಗೆ ಹಣಕಾಸು ನೆರವಿನ ಈ ಪ್ರಕರಣ 2011ರಲ್ಲಿ ದಾಖಲಾಗಿದೆ. ಹವಾಲಾ ಮೂಲಕ ದೆಹಲಿ ಮಾರ್ಗವಾಗಿ ಕಾಶ್ಮೀರಕ್ಕೆ ಹಣ ರವಾನೆಯಾಗುತ್ತಿದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆ ನಡೆಸಲು ಪಾಕಿಸ್ತಾನ ಈ ಹಣ ಪೂರೈಸುತ್ತಿದೆ ಎಂದು ಎನ್‌ಐಎ 2011ರಲ್ಲಿ ಆರೋಪಿಸಿತ್ತು.

ದೆಹಲಿ ಪೊಲೀಸರು ಆರಂಭಿಸಿದ್ದ ತನಿಖೆಯನ್ನು ಬಳಿಕ ಎನ್‌ಐಎ ಕೈಗೆತ್ತಿಕೊಂಡಿತ್ತು. ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್‌ ಕಾನ್ಫರೆನ್ಸ್‌ನ ಮುಖ್ಯಸ್ಥ ಸಯ್ಯದ್‌ ಅಲಿ ಷಾ ಗಿಲಾನಿಯ ನಿಕಟವರ್ತಿ ಗುಲಾಂ ಮೊಹಮ್ಮದ್‌ ಭಟ್‌ ಸೇರಿ ನಾಲ್ವರನ್ನು ಈಗಾಗಲೇ ಎನ್‌ಐಎ ಬಂಧಿಸಿದೆ. ಮೊಹಮ್ಮದ್‌ ಮಕ್ಬೂಲ್‌ ಪಂಡಿತ್‌ ಮತ್ತು ಎಜಾಜ್‌ ಅಹ್ಮದ್‌ ಭಟ್‌ ಎಂಬ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲಾಗಿದೆ.

2008ರಿಂದ ಜನವರಿ 2011ರವರೆಗೆ ಹಿಜ್ಬುಲ್‌ ಉಗ್ರರಿಗೆ ಪಾಕಿಸ್ತಾನದಿಂದ ಕನಿಷ್ಠ ₹6.5 ಕೋಟಿ ನೀಡಲಾಗಿದೆ ಎಂದು ಎನ್ಐಎ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT