ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಕಡಿಮೆ ಮಳೆಯಿಂದ ರಾಗಿ ಬೆಳೆಗಾರರ ಆತಂಕ

Published:
Updated:
ಕಡಿಮೆ ಮಳೆಯಿಂದ ರಾಗಿ ಬೆಳೆಗಾರರ ಆತಂಕ

ವಿಜಯಪುರ: ರಾಗಿ ಹೊಲಗಳ ಪೈರುಗಳಲ್ಲಿ ತೆನೆಗಳು ಕಾಣಿಸಿ ಕೊಳ್ಳುತ್ತಿವೆ. ಆದರೆ, ಮಳೆ ಕಡಿಮೆಯಾಗಿರುವುದರಿಂದ ಉತ್ತಮ ಇಳುವರಿ ಬಗ್ಗೆ ಆತಂಕ ಮನೆ ಮಾಡಿದೆ ಎಂದು ರೈತ ಮುಖಂಡ ಮಂಡಿಬೆಲೆ ದೇವರಾಜಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ್ದ ರಾಗಿ ಬೆಳೆ ಉತ್ತಮವಾಗಿ ಮೊಳಕೆಯೊಡೆದು, ಈಚೆಗೆ ಬಿದ್ದ ಮಳೆಯಿಂದ ಮತ್ತಷ್ಟು ಗಟ್ಟಿಯಾಗಿದ್ದವು. ಪ್ರತಿದಿನ ಬೀಳುತ್ತಿದ್ದ ಮಳೆಯಿಂದ ಎಲ್ಲೆಡೆ ಬೆಳೆಗಳು ನಳನಳಿಸುತ್ತಿದ್ದವು. ಒಂದು ವಾರದಿಂದ ಮಳೆಯಾಗಿಲ್ಲ. ಆದ್ದರಿಂದ ಕೈಗೆ ಬಂದಿರುವ ಬೆಳೆಗಳನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.

ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿ ಕೆರೆಗಳು ಭರ್ತಿಯಾಗಿವೆ. ಆದರೆ, ವಿಜಯಪುರ ಸುತ್ತಮುತ್ತಲಿನ ಯಾವ ಕೆರೆಗಳು ತುಂಬಿಲ್ಲ. ಹೊಲಗಳಲ್ಲಿ ನಿಂತಿದ್ದ ನೀರು, ಕುಂಟೆಗಳಲ್ಲಿ ಶೇಖರಣೆಯಾಗಿದ್ದ ನೀರು ಇಂಗುತ್ತಿವೆ ಎಂಬ ಕಳವಳ ರೈತರಲ್ಲಿದೆ.

ಹೊಲಗಳಲ್ಲಿನ ಗರಿಗಳ ತುಂಬಾ ತೆನೆಗಳು ಕಾಣಿಸಿಕೊಂಡಿವೆ. ನಾಲ್ಕೈದು ವರ್ಷಗಳ ನಂತರ ಮೊದಲ ಬಾರಿಗೆ ತೆನೆಗಳನ್ನು ಕಂಡು ರೈತರು ಸಂತಸ ಪಟ್ಟಿದ್ದರು. ತೆನೆಗಳಲ್ಲಿ ಕಾಳುಕಚ್ಚುವ ಮುನ್ನ ಒಂದೆರಡು ಹದ ಮಳೆ ಬೀಳಬೇಕು. ಇಲ್ಲವಾದರೆ ತೆನೆಗಳಲ್ಲಿ ಕಾಳು ಕಚ್ಚದೆ ಹುಸಿಯಾದರೆ ರೈತರ ಪರಿಶ್ರಮ ವ್ಯರ್ಥವಾಗುವುದರ ಜೊತೆಗೆ ಮತ್ತೆ ಬರಗಾಲ ಎದುರಿಸಬೇಕಾಗುತ್ತದೆ ಎಂದು ರೈತ ನಂಜುಂಡಪ್ಪ ತಿಳಿಸಿದ್ದಾರೆ.

ರಾಗಿ ಬೆಳೆಯ ಜೊತೆಗೆ ಅವರೆ, ಅಲಸಂದಿ, ಸಜ್ಜೆ, ಸಾಮೆ, ನವಣೆ, ಸಾಸಿವೆ, ಜೋಳ ಮುಂತಾದ ಬೆಳೆಗಳು ಸೊರಗುತ್ತಿವೆ ಎಂದಿದ್ದಾರೆ. ಕೈಗೆ ಬಂದ ಬೆಳೆಗಳನ್ನು ಉಳಿಸಿಕೊಳ್ಳಲೇ ಬೇಕು. ಮಳೆ ಬಾರದಿದ್ದರೆ ಟ್ಯಾಂಕರುಗಳಲ್ಲಿ ನೀರು ಹಾಯಿಸಿಯಾದರೂ ಅವುಗಳನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಕೇವಲ ದನಕರುಗಳಿಗೆ ಹುಲ್ಲು ಮಾತ್ರ ಸಿಗಲಿದ್ದು, ಧವಸ ಧಾನ್ಯಗಳಿಗೆ ಪರದಾಡಬೇಕಾಗುತ್ತದೆ ಎಂದು ರೈತರು ಹೇಳುತ್ತಾರೆ.

ನಾಲ್ಕೈದು ವರ್ಷಗಳಿಂದ ಸಾವಿರಾರು ರೂಪಾಯಿ ಬಂಡವಾಳ ಹೂಡಿಕೆ ಮಾಡಿ ಬಿತ್ತನೆ ಮಾಡಿದ್ದರೂ ಮಳೆಯ ಕೊರತೆಯಿಂದಾಗಿ ಮೊಳಕೆಯೊಡೆದ ಪೈರು ಸಂಪೂರ್ಣವಾಗಿ ಒಣಗಿ ಹೋಗಿತ್ತು. ಈ ಬಾರಿ ಉತ್ತಮ ಮಳೆಯಾಗಿದೆ. ಮುಂದಿನ ಒಂದು ವಾರದಲ್ಲಿ ಮಳೆಯಾಗದಿದ್ದರೆ ಬೆಳೆಗಳ ಇಳುವರಿ ಕಡಿಮೆಯಾಗಬಹುದು ಎಂದು ರೈತ ಲೋಕೇಶ್ ತಿಳಿಸಿದ್ದಾರೆ.

ಎಂ. ಮುನಿನಾರಾಯಣ

 

Post Comments (+)