ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ಇಲ್ಲದಿದ್ದರೆ ಪಡಿತರ ನಿರಾಕರಿಸುವಂತಿಲ್ಲ

ರಾಜ್ಯಗಳಿಗೆ ಕೇಂದ್ರ ಆಹಾರ ಸಚಿವಾಲಯದ ಕಟ್ಟುನಿಟ್ಟಿನ ಸೂಚನೆ: ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ
Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಆಧಾರ್‌ ಸಂಖ್ಯೆ ಇಲ್ಲ ಅಥವಾ ಇದ್ದ ಆಧಾರ್‌ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಜೋಡಣೆ ಮಾಡಿಲ್ಲ ಎಂಬ  ಕಾರಣಕ್ಕಾಗಿ ಯಾರಿಗೂ ಪಡಿತರ ಸೌಲಭ್ಯವನ್ನು ನಿರಾಕರಿಸುವಂತಿಲ್ಲ ಎಂದು ಕೇಂದ್ರ ಆಹಾರ ಸಚಿವಾಲಯ ಎಲ್ಲ ರಾಜ್ಯಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

ಆಧಾರ್‌ ಕಾರ್ಡ್‌ ಇಲ್ಲ ಎಂಬ ಕಾರಣಕ್ಕೆ ಪಡಿತರ ವ್ಯವಸ್ಥೆಯ ಅರ್ಹ ಫಲಾನುಭವಿಗಳ ಪಟ್ಟಿಯಿಂದ ಕುಟುಂಬಗಳ ಹೆಸರುಗಳನ್ನು ತೆಗೆದು ಹಾಕದಂತೆಯೂ ಸಚಿವಾಲಯ ನಿರ್ದೇಶಿಸಿದೆ.

ಆಧಾರ್‌ ಸಂಖ್ಯೆಯನ್ನು ಜೋಡಿಸಿಲ್ಲ ಎಂಬ ಕಾರಣ ನೀಡಿ ಪಡಿತರ ಚೀಟಿ ರದ್ದುಗೊಳಿಸಿದ್ದರಿಂದ ಪಡಿತರ ಆಹಾರ ಸಿಗದೇ ಜಾರ್ಖಂಡ್‌ನಲ್ಲಿ  11 ವರ್ಷದ ಬಾಲಕಿ ಹಸಿವಿನಿಂದ ಮೃತಪಟ್ಟಿದ್ದಾಳೆ ಎಂದು ಹೇಳಲಾದ ಪ್ರಕರಣ ವರದಿಯಾದ ನಂತರ ಸಚಿವಾಲಯ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸೂಚನೆ ನೀಡಿದೆ.

‘ಪಡಿತರ ಚೀಟಿಯನ್ನು ರದ್ದುಪಡಿಸುವ ಮೊದಲು ಪರಿಶೀಲನೆ ನಡೆಸಬೇಕು. ಪಡಿತರ ಚೀಟಿ ಹೊಂದಿರುವ ವ್ಯಕ್ತಿ ಅಥವಾ ಕುಟುಂಬ ನೈಜ ಫಲಾನುಭವಿ ಅಲ್ಲ ಎಂಬುದು ದೃಢಪಟ್ಟ ನಂತರವೇ ಪಡಿತರ ವ್ಯವಸ್ಥೆಯಲ್ಲಿ ದಾಖಲಾಗಿರುವ ಆ ವ್ಯಕ್ತಿ ಅಥವಾ ಕುಟುಂಬದ ವಿವರಗಳನ್ನು ಅಳಿಸಿಹಾಕಬೇಕು’ ಎಂದು ಹೊಸ ಸೂಚನೆಯಲ್ಲಿ ಹೇಳಲಾಗಿದೆ.

‘ಆಧಾರ್‌ ಇಲ್ಲ ಅಥವಾ ಅದನ್ನು ಜೋಡಣೆ ಮಾಡಿಲ್ಲ ಅಥವಾ ಬಯೊಮೆಟ್ರಿಕ್‌ ಆಗಿ ದೃಢೀಕರಿಸಲು ತಾಂತ್ರಿಕ ದೋಷ ಇದೆ ಎಂಬ ಕಾರಣಕ್ಕೆ ಯಾರೊಬ್ಬರಿಗೂ ಪಡಿತರ ಆಹಾರ ಸಿಗದಂತೆ ಆಗಬಾರದು ಎಂಬುದು ನಮ್ಮ ಉದ್ದೇಶ. ನೈಜ ಮತ್ತು ಅರ್ಹ ಫಲಾನುಭವಿಗಳಿಗೆ ಪಡಿತರ ಸೌಲಭ್ಯ ಸಿಗಲೇಬೇಕು’ ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಸಿಇಒ ಅಜಯ್‌ ಭೂಷಣ್‌ ಪಾಂಡೆ ಹೇಳಿದ್ದಾರೆ.

ವ್ಯವಸ್ಥೆ ಮಾಡಿ: ಆಧಾರ್‌ ಸಂಖ್ಯೆ ಹೊಂದಿಲ್ಲದವರಿಗೆ ಅದನ್ನು ಪಡೆಯಲು ಮತ್ತು ಪಡಿತರ ಚೀಟಿಗೆ ಜೋಡಣೆ ಮಾಡಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಚಿವಾಲಯ ಕಟ್ಟು ನಿಟ್ಟಾಗಿ ಸೂಚಿಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ, ಪಡಿತರ ಚೀಟಿಗೆ ಆಧಾರ್‌ ಜೋಡಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯಗಳಿಗೆ ಡಿಸೆಂಬರ್‌ 31ರ ಗಡುವು ವಿಧಿಸಲಾಗಿದೆ.

ಆದರೆ, ಈ ಗಡುವನ್ನು 2018ರ ಮಾರ್ಚ್‌ 31ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ದೇಶದಾದ್ಯಂತ ಇದುವರೆಗೆ ಶೇ 82ರಷ್ಟು ಪಡಿತರ ಚೀಟಿಗಳನ್ನು ಆಧಾರ್‌ನೊಂದಿಗೆ ಜೋಡಿಸಲಾಗಿದೆ.

**

ಮೊಬೈಲ್‌ಗೆ ಆಧಾರ್‌ ಜೋಡಣೆ: ತುರ್ತು ವಿಚಾರಣೆಗೆ ನಿರಾಕರಣೆ

ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಿಸುವುದನ್ನು ಕಡ್ಡಾಯಗೊಳಿಸಿ ದೂರಸಂಪರ್ಕ ಸಚಿವಾಲಯ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಈ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್‌ ಮತ್ತು ಎಸ್‌. ಅಬ್ದುಲ್‌ ನಜೀರ್‌ ಅವರಿದ್ದ ನ್ಯಾಯಪೀಠ, ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಕೂಡ ಇಂತಹದೇ ವಿಷಯಗಳ ಬಗ್ಗೆ ವಿಚಾರಣೆ ನಡೆಸುತ್ತಿದೆ ಎಂದು ಹೇಳಿದೆ.

ಆಧಾರ್‌ಗೆ ಸಂಬಂಧಿಸಿದ ಇತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಅಕ್ಟೋಬರ್‌ 30ರಂದು ಕೈಗೆತ್ತಿಕೊಳ್ಳಲಿದ್ದು, ಅಂದೇ ಈ ವಿಚಾರವನ್ನು ಪ್ರಸ್ತಾಪಿಸುವಂತೆ ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT