ಸಾಹಿತ್ಯದ ನೆಪದಲ್ಲಿ ಮಾತಿನ ಹಲವು ಧ್ವನಿಗಳ ಹುಡುಕಾಟ

ಗುರುವಾರ , ಮೇ 23, 2019
31 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಸಾಹಿತ್ಯದ ನೆಪದಲ್ಲಿ ಮಾತಿನ ಹಲವು ಧ್ವನಿಗಳ ಹುಡುಕಾಟ

Published:
Updated:
ಸಾಹಿತ್ಯದ ನೆಪದಲ್ಲಿ ಮಾತಿನ ಹಲವು ಧ್ವನಿಗಳ ಹುಡುಕಾಟ

ಬೆಂಗಳೂರು: ‘ಗಟ್ಟಿಯಾಗಿ ಹೇಳಿ, ಸ್ಪಷ್ಟವಾಗಿ ಹೇಳಿ’ ಎನ್ನುವ ಘೋಷವಾಕ್ಯದ ‘ಬೆಂಗಳೂರು ಸಾಹಿತ್ಯ ಹಬ್ಬ’ (ಬೆಂಗಳೂರು ಲಿಟರೇಚರ್ ಫೆಸ್ಟಿವಲ್ - ಬಿಎಲ್‍ಎಫ್) ಶನಿವಾರ ಮತ್ತು ಭಾನುವಾರ ನಡೆಯಲಿದೆ. ಕನ್ನಡ ಸಾಹಿತಿಗಳೂ ಸೇರಿದಂತೆ ದೇಶ ವಿದೇಶಗಳ 120ಕ್ಕೂ ಹೆಚ್ಚು ಬರಹಗಾರರು ಭಾಗವಹಿಸುವ ಈ ಹಬ್ಬ, ವರ್ತಮಾನದ ನೆಲೆಗಟ್ಟಿನಲ್ಲಿ ಮಾತಿನ ವಿವಿಧ ಸಾಧ್ಯತೆಗಳನ್ನು ಒರೆಗೆ ಹಚ್ಚುವ ಪ್ರಯತ್ನ ನಡೆಸಲಿದೆ.

ಸಾಹಿತ್ಯದ ಹಬ್ಬ ಎಂದ ಮಾತ್ರಕ್ಕೆ ಇದು ಬರಹಗಾರರು ಮತ್ತು ಓದುಗರ ಸಮಾವೇಶ ಎಂದು ಭಾವಿಸಬೇಕಿಲ್ಲ. ಸಾಹಿತಿಗಳ ಜೊತೆಗೆ ಚರಿತ್ರಕಾರರು, ಸಿನಿಮಾ ತಾರೆಯರು, ಕ್ರಿಕೆಟಿಗರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಸಿದ್ಧರು ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಸಾಹಿತ್ಯದ ಹೆಸರಿನಲ್ಲಿ ನಡೆಯುವ ಈ ಸಹೃದಯರ ಕೂಟ, ರಾಷ್ಟ್ರೀಯತೆ, ಪತ್ರಕರ್ತೆಯರ ಮೇಲೆ ನಡೆಯುತ್ತಿರುವ ಹಿಂಸೆ ಸೇರಿದಂತೆ ವರ್ತಮಾನದ ಹಲವು ತವಕ ತಲ್ಲಣಗಳಿಗೆ ಕನ್ನಡಿಯಾಗುವ ಹಂಬಲ ಹೊಂದಿದೆ.

ಪತ್ರಕರ್ತೆ ಗೌರಿ ಲಂಕೇಶ್‍ ಸ್ಮರಣೆಯೊಂದಿಗೆ ಮಾತಿನ ರೂಪದ ಈ ಸಾಹಿತ್ಯ ಹಬ್ಬ ಆರಂಭಗೊಳ್ಳಲಿದೆ. ಗೌರಿ ಅವರನ್ನು ಅಮ್ಮು ಜೋಸೆಫ್‍, ನಿಮಿ ರವೀಂದ್ರನ್ ಹಾಗೂ ಪದ್ಮಾವತಿ ರಾವ್‍ ನೆನಪಿಸಿಕೊಳ್ಳುವರು.

ಇತಿಹಾಸಕಾರ ರಾಮಚಂದ್ರ ಗುಹಾ ಅವರು ‘ಅತಿರೇಕದ ದೇಶಪ್ರೇಮ ವರ್ಸಸ್ ದೇಶಪ್ರೇಮ’ ಎನ್ನುವ ವಿಷಯದ ಕುರಿತು ಮಾತನಾಡಿದರೆ, ‘ಆಧಾರ್‍: ಡಿಸ್ಟೋಪಿಯಾ ಅಥವಾ ಯುಟೋಪಿಯಾ’ ಕುರಿತು ಜೈರಾಮ್ ರಮೇಶ್‍ ಮಾತನಾಡುವರು. ಗಿರೀಶ ಕಾರ್ನಾಡ, ಪೆರುಮಾಳ್‍ ಮುರುಗನ್‍, ಕನ್ಹಯ್ಯಾ ಕುಮಾರ್‍, ರಾಹುಲ್‍ ದ್ರಾವಿಡ್‍, ಅನಿಲ್‍ ಕುಂಬ್ಳೆ, ಟ್ವಿಂಕಲ್‍ ಖನ್ನಾ, ಪಾಲ್‍ ಝಕಾರಿಯಾ, ಮಕರಂದ್ ಕೆ. ಪರಾಂಜಪೆ, ಸುಕೇತು ಮೆಹ್ತಾ, ದಕ್ಷಿಣ ಆಫ್ರಿಕಾದ ಇಮ್ರಾನ್ ಕೂವಾಡಿಯಾ, ಆಸ್ಟ್ರೇಲಿಯಾದ ಖ್ಯಾತ ಕ್ರಿಕಟ್ ಬರಹಗಾರ ಗಿಡಿಯನ್ ಹೇಗ್, ಶ್ರೀಲಂಕಾದ ಛಿಮ್ಮಿ ತೆಂಡುಫ್‍-ಲ ಹಾಗೂ ಬ್ರಿಟನ್‍ನ ಏಡ್ರಿಯನ್ ಲೆವಿ ‘ಬಿಎಲ್‍ಎಫ್‍’ನ ಗೋಷ್ಠಿಗಳಲ್ಲಿ ಭಾಗವಹಿಸುತ್ತಿರುವ ಖ್ಯಾತನಾಮರಲ್ಲಿ ಸೇರಿದ್ದಾರೆ.

ಕನ್ನಡದ ಧ್ವನಿಗಳು:ಕನ್ನಡದ ಲೇಖಕ ಲೇಖಕಿಯರ ಧ್ವನಿಗಳಿಗೂ ‘ಬಿಎಲ್‍ಎಫ್‍’ನಲ್ಲಿ ಅವಕಾಶವಿದೆ. ‘ಕನ್ನಡ ಲಿಪಿ ಮತ್ತು ಭಾಷೆಯ ಇತಿಹಾಸ’ದ ಕುರಿತು ಷ. ಶೆಟ್ಟರ್‍ ಮಾತನಾಡಿದರೆ, ‘ಅಂತರಗಂಗೆ’ ಹೆಸರಿನ ಗೋಷ್ಠಿಯಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಆತ್ಮ

ಚರಿತ್ರೆಗಳ ಮೂಲಕ ಓದುಗರ ಗಮನ ಸೆಳೆದಿರುವ  ಭಾರ್ಗವಿ ನಾರಾಯಣ್‍, ಇಂದಿರಾ ಲಂಕೇಶ್ ಹಾಗೂ ಡಾ. ವಿಜಯಾ ಅವರ ನೆನಪುಗಳನ್ನು ಎಂ.ಎಸ್‍. ಆಶಾದೇವಿ ಕೆದಕುವರು. ‘ಎ.ಕೆ. ರಾಮಾನುಜನ್ ಜಗತ್ತು’ ವಿಷಯದ ಕುರಿತಂತೆ ಗಿರೀಶ ಕಾರ್ನಾಡ ಹಾಗೂ ಗ್ವಿರ್ಲೋಮ್ ರೊಡ್ರಿಗಸ್ ಜೊತೆ ಚಂದನ್‍ ಗೌಡ ಚರ್ಚೆ ನಡೆಸುವರು. ಪ್ರತಿಭಾ ನಂದಕುಮಾರ್‍, ಅಬ್ದುಲ್‍ ರಶೀದ್‍, ವಿಕ್ರಂ ಹತ್ವಾರ್‍, ಕರ್ಕಿ ಕೃಷ್ಣಮೂರ್ತಿ, ಶಾಂತಿ ಅಪ್ಪಣ್ಣ ಕೂಡ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದಾರೆ.

ಬರವಣಿಗೆ ಮತ್ತು ಓದುವಿಕೆಯ ಸಂಭ‍್ರಮದ ರೂಪದಲ್ಲಿ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಈ ಉತ್ಸವ ವರ್ಷದಿಂದ ವರ್ಷಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ ಹಾಗೂ ದೇಶದ ವಿವಿಧ ನಗರಗಳಲ್ಲಿ ನಡೆಯುವ ಸಾಹಿತ್ಯ ಹಬ್ಬಗಳ ಕ್ಯಾಲೆಂಡರ್‍ನಲ್ಲಿ ಗುರ್ತಿಸಿಕೊಂಡಿದೆ.

‘ಪ್ರಸ್ತುತ ಉತ್ಸವದಲ್ಲಿ ಭಾಗವಹಿಸುತ್ತಿರುವ ಬಹುತೇಕ ಗಣ್ಯರು ‘ಬೆಂಸಾಉ’ದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ. ಮಂಡನೆಗೊಳ‍್ಳುವ ವಿಷಯಗಳ ಕುರಿತು ನೇರ ಸಂವಾದ ಸಾಧ್ಯವಾಗುವಂತೆ ಪ್ರಯತ್ನಿಸಲಾಗುವುದು. ಪುರಾಣಗಳಲ್ಲಿನ ಮಹಿಳಾ ಪಾತ್ರಗಳು, ಸಾರ್ವಜನಿಕ ಗ್ರಂಥಾಲಯಗಳು, ಚಲನಚಿತ್ರವಾಗಿರುವ ಪುಸ್ತಕಗಳ ಕುರಿತು ನಡೆಯುವ ಚರ್ಚೆಗಳು ಹೆಚ್ಚು ಜನರನ್ನು ಸೆಳೆಯುವ ನಿರೀಕ್ಷೆಯಿದೆ’ ಎಂದು ಉತ್ಸವದ ನಿರ್ದೇಶಕಿ ಶೈನಿ ಆಂಟೋನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಿಮೆಂಬರಿಂಗ್ ಗೌರಿ’ ಪುಸ್ತಕ

‘ರಿಮೆಂಬರಿಂಗ್‍ ಗೌರಿ' ಇಂಗ್ಲಿಷ್ ಪುಸ್ತಕ ಭಾನುವಾರ ಬಿಡುಗಡೆಯಾಗಲಿದೆ. ಚಂದನ್‍ ಗೌಡ ಸಂಪಾದಿಸಿರುವ ಈ ಕೃತಿ ಗೌರಿ ಅವರ ಬರಹಗಳು, ಭಾಷಣಗಳ ಸಂಗ್ರಹವಾಗಿದೆ. ಪಾಲ್‍ ಝಕಾರಿಯಾ ಮತ್ತು ಕನ್ಹಯ್ಯಾ ಕುಮಾರ್‍ ಈ ಕಾರ್ಯಕ್ರಮದಲ್ಲಿ ಗೌರಿ ಅವರೊಂದಿಗಿನ ತಮ್ಮ ಒಡನಾಟದ ಕುರಿತು ಮಾತನಾಡುವರು.

ತಲ್ಲಣದ ದನಿಗಳು: ಎಂ.ಎಂ. ಕಲ್ಬುರ್ಗಿ, ಗೌರಿ ಅವರ ಹತ್ಯೆ ಸೇರಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯಕ್ಕೆ ಸಿಲುಕಿರುವ ಆತಂಕದ ಘಟನೆಗಳು ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಿವೆ. ಅಸಹಿಷ್ಣುತೆ ಹೆಚ್ಚುತ್ತಿದೆ ಎನ್ನುವ ಆತಂಕವೂ ಇದೆ. ಇದೆಲ್ಲದರ ಕುರಿತ ಚರ್ಚೆ ಉತ್ಸವದಲ್ಲಿ ನಡೆಯಲಿದೆ ಎಂದು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಉತ್ಸವದ ಸಂಘಟಕರಲ್ಲೊಬ್ಬರಾದ ಸುಬೋಧ್‍ ಶಂಕರ್‍ ಹೇಳಿದರು.

‘ಪ್ರಜಾಪ್ರಭುತ್ವ ವ್ಯವಸ‍್ಥೆಯಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಈ ತಕರಾರುಗಳನ್ನು ಕುಳಿತು ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಬೇಕು ಎನ್ನುವ ಆಶಯ ‘ಬಿಎಲ್‍ಎಫ್‍’ನ ಎಲ್ಲ ಗೋಷ್ಠಿಗಳಲ್ಲಿದೆ’ ಎಂದರು.

ಮಾತು-ಕತೆಯ ಜೊತೆಗೆ ಬರವಣಿಗೆ, ಪ್ರತಿಕೋದ್ಯಮ, ಚಿತ್ರಕಲೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಕಮ್ಮಟಗಳು ನಡೆಯಲಿವೆ. ಮಕ್ಕಳಿಗೆ ಕೂಡ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ವಿವರಗಳು bangaloreliteraturefestival.org ಜಾಲತಾಣದಲ್ಲಿ ಲಭ್ಯ.

ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ಕುಮಾರಕೃಪಾ ರಸ್ತೆಯಲ್ಲಿರುವ ಹೋಟೆಲ್‍ ಅಶೋಕದಲ್ಲಿ ಬೆಳಗ್ಗೆ 10ರಿಂದ ಗೋಷ್ಠಿಗಳು ನಡೆಯಲಿವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry