ಸಕಲ ಸಿದ್ಧತೆ: ಬಿಗಿ ಬಂದೋಬಸ್ತ್

ಶನಿವಾರ, ಮೇ 25, 2019
33 °C

ಸಕಲ ಸಿದ್ಧತೆ: ಬಿಗಿ ಬಂದೋಬಸ್ತ್

Published:
Updated:

ಬೀದರ್: ಬೀದರ್‌–ಕಲಬುರ್ಗಿ ಮಧ್ಯದ 110 ಕಿ.ಮೀ. ಉದ್ದದ ನೂತನ ರೈಲು ಮಾರ್ಗ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ರೈಲ್ವೆ ಇಲಾಖೆ ಹಾಗೂ ಜಿಲ್ಲಾ ಆಡಳಿತ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿವೆ.

ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಪೂರ್ವದ ಕಡೆಗೆ ಮುಖ ಮಾಡಿ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ. ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ 35 ರಿಂದ 40 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಸಮಾರಂಭದ ಸ್ಥಳದಲ್ಲಿ 35 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಎಲ್‌ಇಡಿ ಟಿವಿ, ಪ್ಲಾಸ್ಮಾ ಟಿವಿಗಳ ಅಳವಡಿಕೆಗೆ ತಯಾರಿ ನಡೆದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ರೈಲು ಮಾರ್ಗ ಉದ್ಘಾಟನೆಗೆ ನಗರಕ್ಕೆ ಬರುತ್ತಿರುವ ಪ್ರಯುಕ್ತ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿದೆ. ಕ್ರೀಡಾಂಗಣಕ್ಕೆ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ನಗರ ಪ್ರವೇಶ ಮಾಡುವ ಪ್ರಮುಖ ರಸ್ತೆ ಸೇರಿ ಒಟ್ಟು ಒಂಬತ್ತು ಕಡೆ ನಾಕಾ ಬಂದಿ ಮಾಡಲಾಗಿದೆ. ಎಂಟ್ರಿ ಪಾಯಿಂಟ್‌ಗಳನ್ನು ಮಾಡಿ ನಗರಕ್ಕೆ ಬರುವ ವಾಹನಗಳ ಸಂಖ್ಯೆ, ಚಾಲಕರ ವಿವರ ಪಡೆಯಲಾಗುತ್ತಿದೆ.

ಆಯಕಟ್ಟಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗಿದೆ. ಬಂದೋಬಸ್ತ್‌ಗಾಗಿಯೇ 300 ಪೊಲೀಸ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕಲಬುರ್ಗಿ ಹಾಗೂ ಯಾದಗಿರಿಯಿಂದ 1,200 ಪೊಲೀಸ್‌ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಜಿಲ್ಲೆಯ 700 ಪೊಲೀಸ್‌ ಕಾನ್‌ಸ್ಟೆಬಲ್, 500 ಗೃಹ ರಕ್ಷಕ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದರೊಂದಿಗೆ ಕ್ಷಿಪ್ರ ಕಾರ್ಯಾಚರಣೆ ಪಡೆಯೂ ಇರಲಿದೆ.

‘ಈಶಾನ್ಯ ವಲಯ ಪೊಲೀಸ್‌ ಮಹಾನಿರೀಕ್ಷಕ ಅಲೋಕಕುಮಾರ ಶನಿವಾರ ಬೀದರ್‌ಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಹಾಗೂ ಸಂಚಾರ ವ್ಯವಸ್ಥೆ ಪರಿಶೀಲಿಸಲಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಹೇಳಿದರು.

ಕ್ರೀಡಾಂಗಣದ ಸಮೀಪದ ಸಾಯಿ ಆದರ್ಶ ಶಾಲೆಯ ಆವರಣದಲ್ಲಿ ಹಾಕಲಾಗಿದ್ದ 35 ಪಟಾಕಿಗಳ ಮಳಿಗೆಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಪಟಾಕಿ ಅಂಗಡಿಗಳ ಲೈಸನ್ಸ್‌ಗಳನ್ನು ರದ್ದುಗೊಳಿಸಲಾಗಿದೆ. ಗಣೇಶ ಮೈದಾನದಲ್ಲಿ ಖಾದಿ ಉತ್ಸವ ನಡೆಯುತ್ತಿರುವ ಕಾರಣ ಪಾರ್ಕಿಂಗ್‌ಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಪೊಲೀಸರು ಈವರೆಗೂ ಪಾರ್ಕಿಂಗ್‌ಗೆ ಜಾಗ ಗೊತ್ತುಪಡಿಸಿಲ್ಲ. ರಸ್ತೆ ಬದಿಯಲ್ಲೇ ವಾಹನಗಳು ನಿಲುಗಡೆ ಆಗಲಿವೆ.

ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿ ಮುಖಂಡರು ಜಿಲ್ಲೆಯಲ್ಲಿ ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ವಾಹನಗಳನ್ನು ಅಲಂಕರಿಸಿ ರಥದ ಹೆಸರಿಟ್ಟು ಗ್ರಾಮಗಳಿಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.

85 ವರ್ಷಗಳ ನಂತರ ಹೊಸ ಮಾರ್ಗ: ನಿಜಾಮ ಆಡಳಿತದ ಅವಧಿಯಲ್ಲಿ ಬೀದರ್‌ ಜಿಲ್ಲೆಯಲ್ಲಿ ಮೊದಲ ರೈಲು ಮಾರ್ಗ ನಿರ್ಮಾಣಗೊಂಡಿದೆ. ಮೊದಲು ರೈಲು ಸಂಚಾರ ಆರಂಭವಾದದ್ದು 1932ರಲ್ಲಿ. ಎನ್‌ಜಿಎಸ್‌ಆರ್‌ ಕಂಪೆನಿಯ ರೈಲು ತೆಲಂಗಾಣದ ವಿಕಾರಾಬಾದ್‌ನಿಂದ ಮಹಾರಾಷ್ಟ್ರದ ಪರಳಿಗೆ ಬೀದರ್ ಮಾರ್ಗವಾಗಿ ಪ್ರಯಾಣ ಬೆಳೆಸಿತ್ತು. 85 ವರ್ಷಗಳ ನಂತರ ಇನ್ನೊಂದು ರೈಲು ಮಾರ್ಗ ನಿರ್ಮಾಣವಾಗಿದೆ.

ಸಿ.ಕೆ.ಜಾಫರ್‌ ಷರೀಫ್‌ ಅವರು ರೈಲ್ವೆ ಸಚಿವರಾಗಿದ್ದಾಗ ಬೀದರ್‌–ಕಲಬುರ್ಗಿ ರೈಲು ಮಾರ್ಗದ ಸಮೀಕ್ಷೆ ನಡೆಸಲಾಗಿತ್ತು. 2000ರ ಜುಲೈ 29ರಂದು ಅಂದಿನ ರೈಲ್ವೆ ರಾಜ್ಯ ಸಚಿವ ಬಂಗಾರು ಲಕ್ಷ್ಮಣ ಶಂಕುಸ್ಥಾಪನೆ ನೆರವೇರಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry