ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಮರುಪೂರಣ; ಬತ್ತಿದ ಕೊಳವೆಬಾವಿಗಳಿಗೆ ಮರುಜೀವ !

Last Updated 28 ಅಕ್ಟೋಬರ್ 2017, 6:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಳೆದ ತಿಂಗಳು ಒಂದು ವಾರ ಸುರಿದ ಮಳೆಗೆ ಜಮೀನಿನಲ್ಲಿ ಬತ್ತಿ ಹೋಗಿದ್ದ ನಾಲ್ಕು ಕೊಳವೆಬಾವಿ­ಗಳು ಜಲಮರುಪೂರಣಗೊಂಡಿವೆ ! ಇದರಲ್ಲೇನು ವಿಶೇಷ ಎನ್ನುತ್ತೀರಾ? ಏನೆಂದರೆ, ಈ ನೀರಿಂಗುವ ಪ್ರಕ್ರಿಯೆ ಮಳೆಗಾಲಕ್ಕಷ್ಟೇ ಸೀಮಿತವಾಗದೇ ಮಳೆ ಸುರಿದಾಗಲೂ ಕೊಳವೆಬಾವಿಗಳು ನಿರಂತರವಾಗಿ ಜಲ ಮರುಪೂರ್ಣಗೊಳ್ಳುತ್ತಿರುತ್ತವೆ.

ಎಲ್ಲಿ ? ಹೇಗಾಯ್ತು ?
ಜೆ.ಎನ್.ಕೋಟೆ ಸಮೀಪದಲ್ಲಿರುವ ಚಿತ್ರದುರ್ಗದ ಸಿದ್ದೇಶ್ ಮತ್ತು ಅಶ್ವಿನ್ ಅವರ ಜಮೀನಿನಲ್ಲಿ ಈ ಜಲಮರುಪೂರಣದ ಚಮತ್ಕಾರ ನಡೆದಿದೆ. ಮಳೆಗಾಲಕ್ಕೆ ಮುನ್ನ ತಮ್ಮ ಒಂಬತ್ತೂವರೆ ಎಕರೆ ಜಮೀನಿನ ಮೂರು ಕೊಳವೆಬಾವಿಗಳಿಗೂ ಇವರು ‘ಮಳೆ ನೀರು ಸಂಗ್ರಹ ವಿಧಾನ’ ಅಳವಡಿಸಿ­ದ್ದಾರೆ. ಪರಿಣಾಮವಾಗಿ ಜಮೀನಿನ ಮೇಲೆ ಸುರಿದ ಹನಿ ಮಳೆ ನೀರು ಭೂಮಿಯಲ್ಲಿ ಇಂಗಿ, ಬತ್ತಿದ್ದ ಕೊಳವೆಬಾವಿಗಳಲ್ಲಿ ಮೇಲ್ಭಾಗದಲ್ಲೇ ನೀರು ಸಿಗುವಂತಾಗಿದೆ !

ನೀರಿನ ಕೊರತೆ ಬಿಸಿ ತಟ್ಟಿದಾಗ..!
ಎಂಟು ತಿಂಗಳ ಹಿಂದೆ ಈ ಜಮೀನು ಖರೀದಿಸಿದಾಗ, ಕೊಳವೆ ಬಾವಿ ಇತ್ತು. ಆದರೆ, ನೀರು ಕಡಿಮೆ ಇತ್ತು. ನಂತರ ಎರಡು ಕೊಳವೆ ಬಾವಿ ತೆಗೆಸಿದರು. ಎರಡರಲ್ಲೂ ಎರಡು ಇಂಚು ನೀರು ಸಿಕ್ಕಿತು. ಆದರೆ, ಬಹಳ ದಿನ ಆ ನೀರು ಉಳಿಯಲಿಲ್ಲ. ಅಂತಿಮ­ವಾಗಿ ಒಂದು ಕೊಳವೆಬಾವಿಯಲ್ಲಿ ಮಾತ್ರ ಬಿಕ್ಕಳಿಸುತ್ತಾ ನೀರು ಬರುವಂತಾಯಿತು. ಕೃಷಿ ಮಾಡಲು ಹೊರಟವರಿಗೆ ನೀರಿನ ಕೊರತೆ ಬಿಸಿ ತಟ್ಟಿತು !

ಇದೇ ವೇಳೆ ನೀರಿಗಿಂಸುವ ಬಗ್ಗೆ ಕೇಳಿದ್ದ ಅಶ್ವಿನ್ ಮತ್ತು ಸಿದ್ದೇಶ್ ಅವರಿಗೆ, ಜಮೀನಿನ ಕೊಳವೆಬಾವಿಗೆ ಜಲಮರುಪೂರಣ ವಿಧಾನ ಅಳವಡಿಸಬೇಕೆ­ನಿಸಿತು. ಈ ವೇಳೆ ಒಂದು ಹದ ಮಳೆ ಬಿತ್ತು. ಜಮೀನಿನ ಒಂದು ಭಾಗ ನೀರು ಇಂಗುತ್ತಿದ್ದನ್ನು ಕಂಡು, ಬೋರ್‌ವೆಲ್‌ ರೀಚಾರ್ಜ್‌ಗಾಗಿ ಜಲತಜ್ಞ ದೇವರಾಜರೆಡ್ಡಿ ಅವರ ಸಲಹೆ ಕೇಳಿದರು.

ಒಂದು ವಾರದೊಳಗೆ ರೆಡ್ಡಿಯವರ ಮಾರ್ಗದರ್ಶನದಲ್ಲಿ ಎರಡು ಕೊಳವೆಬಾವಿಗಳಿಗೆ ಮಳೆ ನೀರು ಇಂಗಿಸುವ ವಿಧಾನ ಅಳವಡಿಸಿದ್ದೂ ಆಯಿತು. ‘ಇದಾದ ಮರುದಿನವೇ ಮಳೆ ಬಂತು. ಜಮೀನಿ ಸುತ್ತ ಸುರಿದ ಮಳೆ ನೀಋಉ ಕೊಳವೆಬಾವಿಗಳಲ್ಲಿ ಇಂಗಿತು’ ಎಂದು ನೀರು ಇಂಗಿದ್ದನ್ನು ಅಶ್ವಿನ್ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಇಂಗುವ ಗುಂಡಿಗಳಿಗೆ ಕೊಂಡಿ : ಈ ಜಮೀನಿಗೆ ಸಮರ್ಪಕ ಇಳಿಜಾರು (ಸ್ಲೋಪ್) ಇರಲಿಲ್ಲ. ಹಾಗಾಗಿ ಮಳೆ ನೀರು ಇಂಗಿಸುವುದು ಕಷ್ಟ ಸಾಧ್ಯವಾಗಿತ್ತು. ಆದರೆ, ಮಳೆ ಬಂದಾಗ ರಸ್ತೆಯ ಮೇಲೆ ಹರಿದು ಹೋಗುತ್ತಿತ್ತು. ಇದೇ ನೀರನ್ನೇ ಜಮೀನಿಗೆ ತಿರುಗಿಸಿ, ಕೊಳವೆಬಾವಿಗೆ ಇಂಗಿಸಬಹುದು ಎಂಬ ಯೋಚನೆ ಬಂತು. ಅದು ಕಾರ್ಯರೂಪಕ್ಕೂ ಇಳಿಯಿತು. ರಸ್ತೆ ಮೇಲಿನ ನೀರು ಕಾಲುವೆ ಮೂಲಕ ಹರಿದು ಕೊಳವೆಬಾವಿಗಳ ಸುತ್ತ ಇಂಗುವಂತಾಯಿತು.

ಜಮೀನಿನ ಮೇಲೆ ಸುರಿದ ಮಳೆನೀರು ಎರಡು ಭಾಗವಾಗಿ, ಎರಡು ಕೊಳವೆಬಾವಿಗಳಲ್ಲಿ ಇಂಗುತ್ತದೆ. ಜತೆಗೆ, ರಸ್ತೆಯ ಮೇಲೆ ಹರಿಯುವ ನೀರು ಒಂದು ಕೊಳವೆಬಾವಿಯಲ್ಲಿ ಇಂಗಿ ಹೆಚ್ಚಾಗಿದ್ದು, ನೀರು ಟ್ರಂಚ್‌ ಮೂಲಕ ಮತ್ತೊಂದು ಕೊಳವೆಬಾವಿಗೆ ತಲುಪವ ವ್ಯವಸ್ಥೆ ಮಾಡಲಾಗಿದೆ.

ಅಲ್ಲಿ ಇಂಗಿ ಹೆಚ್ಚಾದ ನೀರು ಕೃಷಿ ಹೊಂಡ ತಲುಪುತ್ತದೆ. ನೀರು ಹರಿಯುವ ಟ್ರಂಚ್ ಪಕ್ಕದ ಬದುವಿನ ಮೇಲೆ ಸಾಲಾಗಿ ಹೆಬ್ಬೇವಿನ ಗಿಡಗಳನ್ನು ನಾಟಿ ಮಾಡಿದ್ದಾರೆ. ‘ಜಲಾನಯನ ಮಾದರಿಯಲ್ಲಿ ಮಳೆ ನೀರು ಇಂಗಿಸುವ ವಿಧಾನ ಅಳವಡಿಸಲಾಗಿದೆ’ ಎಂದು ದೇವರಾಜರೆಡ್ಡಿ ವಿವರಿಸುತ್ತಾರೆ.

ಸದ್ಯ ಜಮೀನಿನಲ್ಲಿ ಕಡ್ಲೆ ಹಾಕಿದ್ದಾರೆ. ಈರುಳ್ಳಿ ಕೊಯ್ಲಿಗೆ ಬಂದಿದೆ. ತುಂತುರು ಹನಿ ವಿಧಾನ ಅನುಸರಿಸಿ ರಸಬಾಳೆ ಹಾಕಲು ಭೂಮಿ ಸಿದ್ದ ಮಾಡುತ್ತಿದ್ದಾರೆ. ಜಮೀನಿಗೆ ರಸಗೊಬ್ಬರ ಹಾಕದೇ, ಕಡಿಮೆ ನೀರು ಬಳಸಿ ಕೃಷಿ ಮಾಡುವ ಸಿದ್ದತೆಯಲ್ಲಿದ್ದಾರೆ ಎನ್ನುತ್ತಾರೆ ಜಮೀನು ನೋಡಿಕೊಳ್ಳುತ್ತಿರುವ ಏಕಾಂತಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT