ಮಕ್ಕಳೇ ಪಟಗಳಾದಾಗ...

ಮಂಗಳವಾರ, ಜೂನ್ 18, 2019
23 °C

ಮಕ್ಕಳೇ ಪಟಗಳಾದಾಗ...

Published:
Updated:
ಮಕ್ಕಳೇ ಪಟಗಳಾದಾಗ...

ಬೆಂಗಳೂರು: ಅಕ್ಕಪಕ್ಕದ ವೇದಿಕೆಗಳಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿದ್ದರೆ, ಆ ವೇದಿಕೆಗಳ ನಡುವಿನ ಪುಟಾಣಿ ಅಂಗಳದಲ್ಲಿ ಚಿಣ್ಣರ ಕಲವರ ತುಂಬಿಕೊಂಡಿತ್ತು. ಅವರೆಲ್ಲನ್ನು ಅಲ್ಲಿ ಒಟ್ಟುಗೂಡಿಸಿದ್ದುದು ಗಾಳಿಪಟದ ಸೂತ್ರ!

ಲೇಖಕಿ ಲೀಲಾ ಬ್ರೂಮ್‍ ಅವರು ಮಕ್ಕಳಿಗೆ ಗಾಳಿಪಟ ಮಾಡುವ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಹೆಸರಿಗಷ್ಟೇ ಅದು ಕಮ್ಮಟ. ನಿಂತಲ್ಲಿ ನಿಲ್ಲದ, ಕೂತಲ್ಲಿ ಕೂರದ ಮಕ್ಕಳು ತಾವೇ ಪಟಗಳಾದಂತಿದ್ದರು. ಗಾಳಿಪಟಕ್ಕೆ ಕಾಗದ ಕತ್ತರಿಸುವ, ಅದಕ್ಕೆ ಕಡ್ಡಿಗಳನ್ನು ಹಾಗೂ ಬಾಲಂಗೋಸಿಯನ್ನು ಅಂಟಿಸುವ ಸಂಭ್ರಮ ಅವರದಾಗಿತ್ತು.

ಗಾಳಿಪಟದ ಮೇಲೆ ವಿವಿಧ ಆಕೃತಿಗಳನ್ನು ಬರೆಯುವ ಮೂಲಕ ಪಟದ ಚೆಲುವನ್ನು ಹೆಚ್ಚಿಸುವ ಸಾಧ್ಯತೆಗಳನ್ನು ಲೀಲಾ ಮಕ್ಕಳಿಗೆ ಹೇಳಿಕೊಟ್ಟರು.

ಗೌರಿ ಲಂಕೇಶ್‍ಗೆ ಕಾವ್ಯ ನಮನ

ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಕಾರ್ಯಕ್ರಮದ ಆರಂಭದಲ್ಲಿ ವಿವಿಧ ಕವಿಗಳ ಕವಿತೆಗಳ ಮೂಲಕ ನುಡಿ ನಮನ ಸಲ್ಲಿಸಲಾಯಿತು. ಲೇಖಕರಾದ ನಿಮಿ ರವೀಂದ್ರನ್ ಮತ್ತು ಪದ್ಮಾವತಿ ರಾವ್ ಅವರು ಗೌರಿ ಲಂಕೇಶ್ ಹತ್ಯೆಯ ಬಳಿಕ ಬೇರೆ ಬೇರೆ ಕವಿಗಳು ಗೌರಿ ಬಗ್ಗೆ ರಚಿಸಿರುವ ಕವಿತೆಗಳನ್ನು ವಾಚಿಸಿದರು.

ಸಲೀಲ್ ಚತುರ್ವೇದಿ ಅವರ ‘ರಕ್ತ್ ರಕ್ತ್ ರಕ್ತ್', ರಮೇಶ್ ಪರಾಶರ್ ಅವರ ‘ಗೌರಿ ಲಂಕೇಶ್', ಕವಿತಾ ಲಂಕೇಶ್ ಅವರ ‘ಅಕ್ಕ' ಕವಿತೆಯನ್ನು ಪದ್ಮಾವತಿ ರಾವ್ ವಾಚಿಸಿದರು.

ಬಾಗಿಲನು ತೆರೆದು...

ಸಾಹಿತ್ಯ ಉತ್ಸವ ನಡೆಯುತ್ತಿದ್ದ ವೇದಿಕೆಗಳ ನಡುವೆ ಎದ್ದುನಿಂತಿದ್ದ ಗುಡಿಸಲಿನ ರೀತಿಯ ಪುಟ್ಟ ಕಲಾಕೃತಿಯೊಂದು ಸಹೃದಯರ ಆಕರ್ಷಣೆಯ ಕೇಂದ್ರವಾಗಿತ್ತು. ಕಥೆಗಾರ ಜಯಂತ ಕಾಯ್ಕಿಣಿ ಅವರ ಬರಹಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಬಾಗಿಲಿನ ರೂಪಕವನ್ನು ಬಳಸಿಕೊಂಡು ರೂಪುಗೊಂಡಿದ್ದ ಮಲ್ಟಿಮೀಡಿಯಾ ಇನ್‍ಸ್ಟಾಲೇಷನ್‍ ಅದು. ಈ ಕಲಾಕೃತಿಯ ರೂವಾರಿ ಕವಯಿತ್ರಿ ಪ್ರತಿಭಾ ನಂದಕುಮಾರ್‍.

ಮುಖ್ಯ ಬಾಗಿಲನ್ನು ದಾಟಿಕೊಂಡು ಒಳಹೋದರೆ ಅಲ್ಲಿ ಎರಡು ಬಾಗಿಲುಗಳು! ಎದುರಿಗಿದ್ದ ಟೀವಿ ಪರದೆಯ ಮೇಲೆ ತಮ್ಮ ಬರಹಗಳನ್ನು ವಾಚಿಸುವ ಜಯಂತ ಕಾಯ್ಕಿಣಿ. ಕಥನ-ಕವನಗಳಲ್ಲಿ ಬಳಕೆಯಾದ ಬಾಗಿಲಿನ ರೂಪಕಚಿತ್ರಗಳನ್ನು ಜಯಂತ್‍ ಸೊಗಸಾಗಿ ಓದುವ ಹನ್ನೆರಡು ನಿಮಿಷಗಳ ದೃಶ್ಯಗಳು ನೋಡುಗರನ್ನು ಸೆಳೆಯುವಂತಿದ್ದವು. ಕೆಲವರು ನಿಂತುಕೊಂಡು, ಮತ್ತೆ ಕೆಲವರು ಬಾಗಿಲಿನ ಮೆಟ್ಟಿಲುಗಳ ಮೇಲೆ ಕುಳಿತುಕೊಂಡು ಜಯಂತ್‍ ದನಿಗೆ ಕಿವಿಯಾಗಿದ್ದರು.

ಯುವಸಂಭ್ರಮದ ಉತ್ಸವ

ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ಯುವಜನರ ಸಂಖ್ಯೆ ಗಣನೀಯವಾಗಿತ್ತು. ಹೊಸ ತಲೆಮಾರಿನ ಭಾಗವಹಿಸುವಿಕೆ ಕನ್ನಡದ ಲೇಖಕರ ಕುತೂಹಲಕ್ಕೆ ಕಾರಣವಾಗಿತ್ತು.

ಉತ್ಸವದಲ್ಲಿನ ಯೌವನವನ್ನು ಆವಾಹಿಸಿಕೊಳ್ಳುವಂತೆ ವೇದಿಕೆಯಿಂದ ವೇದಿಕೆಗೆ ಓಡಾಡಿದ ಗಿರೀಶ ಕಾರ್ನಾಡರು ಹೆಚ್ಚಿನ ಸಂಖ್ಯೆಯ ತರುಣ ತರುಣಿಯರನ್ನು ನೋಡಿ ಉಲ್ಲಸಿತರಾಗಿದ್ದರು. 'ಇವರಲ್ಲಿ ಎಷ್ಟುಮಂದಿ ಚರ್ಚೆಗಳನ್ನು ಗಂಭೀರವಾಗಿ ಕೇಳಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಇಷ್ಟೊಂದು ಮಂದಿ ಸಾಹಿತ್ಯ-ಸಾಂಸ್ಕೃತಿಕ ಚರ್ಚೆಗಳಲ್ಲಿ ಭಾಗವಹಿಸುವುದೇ ಒಂದು ವಿಶೇಷ ಸಂಗತಿ' ಎನ್ನುವುದು ಅವರ ಅನಿಸಿಕೆ.

ಯುವಪೀಳಿಗೆಯ ಭಾಗವಹಿಸುವಿಕೆಯನ್ನು ಕಾದಂಬರಿಕಾರ ಬೊಳುವಾರು ಮಹಮ್ಮದ್ ಕುಂಞಿ ಕುತೂಹಲದಿಂದ ಗಮನಿಸುತ್ತಿದ್ದರು. ಕನ್ನಡದ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಇವರನ್ನೆಲ್ಲ ಕರೆತರುವುದು ಹೇಗೆ ಎನ್ನುವ ಪ್ರಶ್ನೆಗೆ ಅವರು ಉತ್ತರ ಹುಡುಕುತ್ತಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry