ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ‘ಶಾಂತಿದೂತ ರಾಷ್ಟ್ರ’: ಮೋದಿ ಬಣ್ಣನೆ

ವಿಶ್ವಕ್ಕೆ ಶಾಂತಿ, ಸಾಮರಸ್ಯ, ಏಕತೆ ಸಂದೇಶ ಸಾರಿದ ಹೆಗ್ಗಳಿಕೆ: ‘ಮನದ ಮಾತು’ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ
Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವಕ್ಕೆ ಸದಾ ಶಾಂತಿ, ಏಕತೆ ಮತ್ತು ಸಾಮರಸ್ಯದ ಸಂದೇಶ ಸಾರುತ್ತ ಬಂದಿರುವ ಭಾರತ ‘ಶಾಂತಿದೂತ’ ರಾಷ್ಟ್ರ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಭಾನುವಾರ ಪ್ರಸಾರವಾದ 37ನೇ ‘ಮನದ ಮಾತು’ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೌತಮ ಬುದ್ಧ ಮತ್ತು ಮಹಾತ್ಮ ಗಾಂಧಿ ಅವರ ಆಶಯವೂ ಅದೇ ಆಗಿತ್ತು ಎಂದರು.

ಭಾರತೀಯ ಸೇನೆ ದೇಶದ ಗಡಿಯನ್ನು ಮಾತ್ರ ಕಾಯುತ್ತಿಲ್ಲ. ‘ವಸುದೈವ ಕುಟುಂಬಕಂ’ದಲ್ಲಿ ಇಟ್ಟಿರುವ ನಂಬುಗೆಯಂತೆ ವಿಶ್ವದ ಮೂಲೆ, ಮೂಲೆಗಳಲ್ಲಿ ಶಾಂತಿ ಸ್ಥಾಪನೆಗಾಗಿ ಹಗಲಿರುಳು ಶ್ರಮಿಸುತ್ತಿದೆ ಎಂದರು.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಸಕ್ರಿಯವಾಗಿರುವ ಭಾರತೀಯ ಯೋಧರು ಜನಸ್ನೇಹಿ ಕಾರ್ಯಾಚರಣೆ ಮೂಲಕ ದೇಶಕ್ಕೆ ಹೆಸರು ತಂದಿದ್ದಾರೆ ಎಂದು ಶ್ಲಾಘಿಸಿದರು.

ಸದ್ಯ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಏಳು ಸಾವಿರ ಭಾರತೀಯ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. 85 ರಾಷ್ಟ್ರಗಳ ಭದ್ರತಾ ಸಿಬ್ಬಂದಿಗೆ ಕಾರ್ಯಾಚರಣೆ ತರಬೇತಿ ನೀಡುತ್ತಿದ್ದಾರೆ. ಜತೆಗೆ ಹಲವು ರಾಷ್ಟ್ರಗಳ ನಾಗರಿಕರಿಗೆ ವೈದ್ಯಕೀಯ ನೆರವಿನ ಹಸ್ತ ಚಾಚಿದ್ದಾರೆ. ಇದು ನಿಜಕ್ಕೂ ದೇಶ ಹೆಮ್ಮೆ ಪಡುವ ವಿಷಯ ಎಂದರು.

ವಿಶ್ವಸಂಸ್ಥೆಯ ಒಟ್ಟು 71 ಶಾಂತಿ ಪಾಲನಾ ಕಾರ್ಯಾಚರಣೆಗಳ ಪೈಕಿ 50ರಲ್ಲಿ ಭಾಗವಹಿಸಿದೆ. ಕಾಂಗೊ ಮತ್ತು ಸುಡಾನ್‌ನಲ್ಲಿ ಭಾರತೀಯ ಯೋಧರು 20 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಿ, ಜೀವ ಉಳಿಸಿದ್ದಾರೆ ಎಂದರು.

30 ನಿಮಿಷಗಳ ಭಾಷಣದಲ್ಲಿ ಪ್ರಧಾನಿ, ಛಟ್‌ ಹಬ್ಬ, ಸ್ವಚ್ಛತಾ ಆಂದೋಲನ, ಗುರುನಾನಕ್‌ ಜಯಂತಿ, ಮಕ್ಕಳ ದಿನಾಚರಣೆ, ಗಡಿ ನಿಯಂತ್ರಣ ರೇಖೆಯಲ್ಲಿ ಯೋಧರ ಜತೆ ದೀಪಾವಳಿ ಆಚರಣೆ ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.

ಮೋದಿಯಿಂದ ಖಾದಿಗೆ ಕುದುರಿದ ಬೇಡಿಕೆ

‘ಮನದ ಮಾತು’ ಕಾರ್ಯಕ್ರಮದಲ್ಲಿ ತಾವು ನಿರಂತರವಾಗಿ ಮಾಡಿಕೊಂಡ ಮನವಿಯ ಫಲವಾಗಿ ಕೈಮಗ್ಗ ಮತ್ತು ಖಾದಿ ಉತ್ಪನ್ನಗಳಿಗೆ ಭಾರಿ ಬೇಡಿಕೆ ಕುದುರಿದೆ ಎಂದು ಮೋದಿ ತಿಳಿಸಿದರು.

ದೀಪಾವಳಿ ಸಂದರ್ಭದಲ್ಲಿ ಖಾದಿ ಮತ್ತು ಕೈಮಗ್ಗ ಉತ್ಪನ್ನಗಳ ಮಾರಾಟ ಶೇ 90ರಷ್ಟು ದಾಖಲೆಯ ಏರಿಕೆ ಕಂಡಿದೆ. ಈ ಮೊದಲು ರಾಷ್ಟ್ರೀಯತೆಯ ಪ್ರತೀಕವಾಗಿದ್ದ ಖಾದಿ ಕ್ರಮೇಣ ಫ್ಯಾಶನ್‌ ಆಗಿ ಬದಲಾಯಿತು. ಈಗ ಬದಲಾವಣೆಯ ಸಂಕೇತವಾಗಿ ಹೊರಹೊಮ್ಮಿದೆ ಎಂದು  ಹರ್ಷ ವ್ಯಕ್ತಪಡಿಸಿದರು.

ಟೀಕೆಗಳ ಪ್ರಸ್ತಾಪ

‘ಮನದ ಮಾತು’ ರೆಡಿಯೊ ಕಾರ್ಯಕ್ರಮದ ಬಗ್ಗೆ ವ್ಯಾಪಕ ಮೆಚ್ಚುಗೆ ಜತೆ ಟೀಕೆಗಳೂ ವ್ಯಕ್ತವಾಗುತ್ತಿವೆ ಎಂದು ಪ್ರಧಾನಿ ಹೇಳಿದರು.

ಏನೇ ಆಗಲಿ ಮೂರು ವರ್ಷಗಳಲ್ಲಿ ಈ ಕಾರ್ಯಕ್ರಮ ಭಾರಿ ಬದಲಾವಣೆ ತಂದಿದೆ. ದೇಶದ ಜನರೊಂದಿಗೆ ಸಂಬಂಧ ಬೆಸೆಯುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಸಮರ್ಥಿಸಿಕೊಂಡರು.

ವೈದ್ಯರೊಬ್ಬರು ಕಳಿಸಿದ ಧ್ವನಿ ಸಂದೇಶಕ್ಕೆ ಸ್ಪಂದಿಸಿದ ಪ್ರಧಾನಿ, ಚಟುವಟಿಕೆರಹಿತ ಆಧುನಿಕ ಜೀವನ ಶೈಲಿಯಿಂದಾಗಿ ಮಕ್ಕಳಲ್ಲಿ ಸಕ್ಕರೆ ಕಾಯಿಲೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಮಕ್ಕಳನ್ನು ಆಟವಾಡಲು ಮೈದಾನಗಳಿಗೆ ಕರೆದುಕೊಂಡು ಹೋಗಿ ಎಂದು ಪೋಷಕರಿಗೆ ಸಲಹೆ ಮಾಡಿದರು.

ಇಂದಿರಾ, ಪಟೇಲ್‌ ಸ್ಮರಣೆ

ಇದೇ 31ರಂದು ನಡೆಯಲಿರುವ ಪುಣ್ಯಸ್ಮರಣೆಯ ಕಾರಣದಿಂದಾಗಿ ಮೋದಿ ತಮ್ಮ ಭಾಷಣದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸ್ಮರಿಸಿದರು.

ಸರ್ದಾರ್ ವಲ್ಲಭ ಭಾಯ್‌ ಪಟೇಲ್‌ ಜನ್ಮ ಶತಮಾನೋತ್ಸವ ಅಂಗವಾಗಿ ಆಯೋಜಿಸಿರುವ ‘ಏಕತೆಗಾಗಿ ಓಟ’ದಲ್ಲಿ ಪಾಲ್ಗೊಳ್ಳುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಹತ್ತು ವರ್ಷಗಳ ನಂತರ ಏಷ್ಯಾ ಕಪ್‌ ಹಾಕಿ ಪಂದ್ಯಾವಳಿ ಮತ್ತು ಡೆನ್ಮಾರ್ಕ್‌ ಓಪನ್‌ ಟೆನ್ನಿಸ್‌ ಪಂದ್ಯಾವಳಿಗಳಲ್ಲಿ ಗೆಲುವು ಸಾಧಿಸಿದ ಭಾರತದ ತಂಡಗಳನ್ನು ಅಭಿನಂದಿಸಿದರು.

ದೇಶದಲ್ಲಿ ಮೊದಲ ಬಾರಿಗೆ ನಡೆದ 17 ವರ್ಷದೊಳಗಿನವರ ಫಿಫಾ ಪುಟ್ಬಾಲ್‌ ವಿಶ್ವಕಪ್‌ ಭಾರತದಲ್ಲಿ ಫುಟ್ಬಾಲ್‌ ಭವಿಷ್ಯದ ಬೀಜ ಬಿತ್ತಿದೆ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT