ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕಾರವಾಯಿತು ಸಾರಕ್ಕಿ ಕೆರೆ ಅಭಿವೃದ್ಧಿ ಕನಸು

ತಂತಿಬೇಲಿ ಅಳವಡಿಕೆ ಬಹುತೇಕ ಪೂರ್ಣ
Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಪಿ.ನಗರದ ಸಾರಕ್ಕಿ ಕೆರೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ.‌ ಇದರಿಂದ ಸ್ಥಳೀಯರ ಮೊಗದಲ್ಲಿ ಸಂತಸ ಮೂಡಿದೆ.

ಈ ಕೆರೆಯ ಒಡಲಿಗೆ ತ್ಯಾಜ್ಯನೀರು ಸೇರಿ, ಕೆರೆಯಂಗಳದಲ್ಲಿ ಕಳೆ ಸಸಿಗಳು ಬೆಳೆದು ಹಾಗೂ ಸುತ್ತಲಿನ ಜಾಗ ಒತ್ತುವರಿಯಾಗಿ ಕೆರೆ ವಿನಾಶದ ಅಂಚಿನಲ್ಲಿತ್ತು. ಹೈಕೋರ್ಟ್‌ ನಿರ್ದೇಶನದ ಮೇರೆಗೆ ನಗರ ಜಿಲ್ಲಾಡಳಿತವು 2015ರ ಏಪ್ರಿಲ್‌ನಲ್ಲಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವು ಮಾಡಿತ್ತು.

ರಾಜ್ಯ ಸರ್ಕಾರದ ಅನುದಾನದಲ್ಲಿ ಈಗ ಬಿಬಿಎಂಪಿಯ ಕೆರೆಗಳ ವಿಭಾಗವು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಜಲಮೂಲದ ಸುತ್ತಲೂ ತಂತಿಬೇಲಿ ಅಳವಡಿಸುವ, ವಾಯುವಿಹಾರ ಪಥ ನಿರ್ಮಾಣ ಕೆಲಸ ತ್ವರಿತವಾಗಿ ನಡೆಯುತ್ತಿದೆ.

‘ಕೆರೆಯ ಸುತ್ತಲಿನ ಬದುವಿಗೆ ಹೊಂದಿಕೊಂಡಂತೆ 3 ಮುಖ್ಯದ್ವಾರಗಳ ನಿರ್ಮಾಣ, ಉದ್ಯಾನ, 2 ಕಲ್ಯಾಣಿಗಳ ನಿರ್ಮಾಣ ಕಾರ್ಯವನ್ನು ಹಂತ–ಹಂತವಾಗಿ ಮಾಡುತ್ತೇವೆ. ಮಳೆ ನಿಂತ ಬಳಿಕ ಹೂಳು ತೆಗೆಯುವ ಕೆಲಸ ಆರಂಭಿಸುತ್ತೇವೆ’ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಜಲಮೂಲದ ಸುತ್ತಲೂ ವಾಯುವಿಹಾರ ಮಾಡಲು 2.3 ಕಿ.ಮೀ. ಉದ್ದದ ಪಥ ನಿರ್ಮಾಣ ಮಾಡಲಾಗುತ್ತಿದೆ. ಅದರ ಅಗಲ 4 ಮೀ. ಇರಲಿದೆ. ಕೆರೆಯಲ್ಲಿ ಮಳೆನೀರು ಸಂಗ್ರಹ ಮಾಡಿ ಸುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವುದು, ವಾಯುವಿಹಾರಕ್ಕೆ ಅನುವು ಮಾಡಿಕೊಡುವುದು ಹಾಗೂ ದೋಣಿ ವಿಹಾರದ ವ್ಯವಸ್ಥೆ ಕಲ್ಪಿಸಿ ನಗರದ ಪ್ರವಾಸಿ ತಾಣವನ್ನಾಗಿ ಮಾಡುವುದು ಅಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶ.

ಜಲಮೂಲದೊಳಗೆ ಎರಡು ಜೌಗು ಪ್ರದೇಶಗಳ ನಿರ್ಮಾಣ ಯೋಜನೆಯಲ್ಲಿ ಒಳಗೊಂಡಿದೆ.  ರಾಸಾಯನಿಕಗಳಾದ ನೈಟ್ರೇಟ್‌ ಮತ್ತು ಫಾಸ್ಟೇಟ್‌ಗಳನ್ನು ಹೀರಿಕೊಳ್ಳುವ ಸಸಿಗಳನ್ನು ಜೌಗು ಪ್ರದೇಶಗಳಲ್ಲಿ ಬೆಳೆಸಲು ಯೋಜನೆ ರೂಪಿಸಲಾಗಿದೆ. ಕೆರೆಯ ಮಧ್ಯದಲ್ಲಿ ಇರುವ ನಡುಗಡ್ಡೆಯನ್ನು ಹಾಗೆಯೇ ಉಳಿಸಿಕೊಂಡು, ಅದನ್ನು ಪಕ್ಷಿಗಳ ಆವಾಸ ಸ್ಥಾನವಾಗಿಸಲು ಯೋಜಿಸಲಾಗಿದೆ.

ಈ ಕೆರೆಯ ದಯನೀಯ ಸ್ಥಿತಿ ಕುರಿತು ‘ಸಾರಕ್ಕಿ: ಒತ್ತುವರಿ ತೆರವುಗೊಳಿಸಿದರೆ ಸಾಕೇ?’ ಎಂಬ ಶೀರ್ಷಿಕೆಯಡಿ ಈ ವರ್ಷದ ಮಾರ್ಚ್‌ 14ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

50 ಲಕ್ಷ ಲೀಟರ್‌ ಸಾಮರ್ಥ್ಯದ ಎಸ್‌ಟಿಪಿ ನಿರ್ಮಾಣ
‘ಜರಗನಹಳ್ಳಿ ಮತ್ತು ಆರ್‌ಬಿಐ ಬಡಾವಣೆಗಳಿಂದ ಕೆರೆಗೆ ಸೇರುತ್ತಿರುವ ತ್ಯಾಜ್ಯನೀರನ್ನು ಸಂಸ್ಕರಿಸುತ್ತೇವೆ. ಆ ನೀರನ್ನು ವಾಯುವಿಹಾರ ಪಥದ ಬದಿಯಲ್ಲಿ ಅಳವಡಿಸುವ ಕೊಳವೆಗಳ ಮೂಲಕ ಹರಿಸಿ, ಈಶಾನ್ಯ ಮತ್ತು ಆಗ್ನೇಯ ದಿಕ್ಕಿನಲ್ಲಿ ಇರುವ ನಾಲೆಗೆ ಬೀಡುತ್ತೇವೆ’ ಎಂದು ಅಧಿಕಾರಿ ತಿಳಿಸಿದರು.

‘ಜಲಮೂಲದ ನೈರುತ್ಯ ದಿಕ್ಕಿನಲ್ಲಿ ಜಲಮಂಡಳಿಯು ತ್ಯಾಜ್ಯನೀರನ್ನು ಸಂಸ್ಕರಿಸುವ ಘಟಕ (ಎಸ್‌ಟಿಪಿ) ಸ್ಥಾಪಿಸಲಿದೆ. ಇಲ್ಲಿ ಪ್ರತಿದಿನ 50 ಲಕ್ಷ ಲೀಟರ್‌ ತ್ಯಾಜ್ಯನೀರನ್ನು ಸಂಸ್ಕರಣೆ ಮಾಡಬಹುದು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT