ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳ ತುಂಬಾ ಗುಂಡಿಗಳದ್ದೇ ಕಾರುಬಾರು

Last Updated 30 ಅಕ್ಟೋಬರ್ 2017, 9:07 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸ್ಮಾರ್ಟ್‌ ಸಿಟಿ’ ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಅರ್ಧ ಅಡಿಯಷ್ಟು ಆಳದ ಗುಂಡಿಗಳು ನಿರ್ಮಾಣಗೊಂಡಿವೆ. ವಾಹನ ಸವಾರರು ರಸ್ತೆಯ ಗುಂಡಿ ತಪ್ಪಿಸಿ ಸಾಗಲು ಪ್ರತಿದಿನವೂ ಹರಸಾಹಸ ಪಡುವಂತಾಗಿದೆ. ಈ ರಸ್ತೆಗಳು ಸಂಚರಿಸಲು ಸಾಧ್ಯವಾಗದ ರೀತಿಯಲ್ಲಿ ಹಾಳಾಗಿವೆ. ರಸ್ತೆಗಳ ತುಂಬಾ ಗುಂಡಿಗಳದ್ದೇ ಕಾರುಬಾರು. ಸಾರ್ವಜನಿಕರು, ವಾಹನ ಸವಾರರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ಸಂಚರಿಸುತ್ತಿದ್ದಾರೆ.

ಸವಳಂಗ ರಸ್ತೆ, ಹೊಳೆಹೊನ್ನೂರು ರಸ್ತೆ, ಬೈಪಾಸ್‌ ರಸ್ತೆ, ಬಿ.ಎಚ್.ರಸ್ತೆ (ಸಹ್ಯಾದ್ರಿ ಕಾಲೇಜು), ಸಾಗರರಸ್ತೆ, ತೀರ್ಥಹಳ್ಳಿ ರಸ್ತೆ ಹಾಗೂ ಇನ್ನೂ ಕೆಲವು ಪ್ರಮುಖ ರಸ್ತೆಗಳು ಹಾಳಾಗಿವೆ. ಇದರ ಜೊತೆಗೆ ಅಲ್ಲಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬು ನಿರ್ಮಿಸಲಾಗಿದೆ. ವಾಹನ ಸವಾರರಿಗೆ ಸವಾಲು: ಸವಳಂಗ ರಸ್ತೆಯಲ್ಲಿ ನಿತ್ಯ ನೂರಾರು ಬಸ್‌ಗಳು ಶಿಕಾರಿಪುರ, ಹೊನ್ನಾಳಿಗೆ ಸಂಚರಿಸುತ್ತವೆ.

ನವುಲೆ ಕೆರೆಯಬಳಿ ರಸ್ತೆ ಕಿರಿದಾಗಿದ್ದು, ರಸ್ತೆಯೂ ಹಾಳಾಗಿದೆ. ಹಾಳಾಗಿರುವ ರಸ್ತೆಯಲ್ಲೇ ನಾಗರಿಕರು ಅನಿವಾರ್ಯವಾಗಿ ಸಂಚರಿಸುತ್ತಿದ್ದಾರೆ. ಬಿ.ಎಚ್.ರಸ್ತೆ, ಸಹ್ಯಾದ್ರಿ ಕಾಲೇಜಿಗೆ ಹೋಗುವ ರಸ್ತೆಯನ್ನು ವಿಸ್ತರಿಸಲಾಗಿದೆ. ಒಂದು ಬದಿಗೆ ಮಾತ್ರ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಬೈಪಾಸ್‌ ರಸ್ತೆ ಕಾಮಗಾರಿಯೂ ಪೂರ್ಣಗೊಳ್ಳದ ಕಾರಣ ಬೆಂಗಳೂರು ಮಾರ್ಗದ ಬಸ್‌ಗಳು ಅಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ.

ಸಾಗರ ರಸ್ತೆಯ ವಿಸ್ತರಣೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೊಳೆಹೊನ್ನೂರು ರಸ್ತೆಯು ಚನ್ನಗಿರಿ, ದಾವಣಗೆರೆ, ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವುದರಿಂದ ವಾಹನ ದಟ್ಟಣೆ ಅಧಿಕವಾಗಿರುತ್ತದೆ. ಈ ರಸ್ತೆಯೂ ಸಂಪೂರ್ಣ ಹಾಳಾಗಿದೆ. ಸವಾರರು ಪ್ರಯಾಸದಿಂದಲೇ ವಾಹನ ಚಲಾಯಿಸುತ್ತಿದ್ದಾರೆ.

ಹೆಚ್ಚುತ್ತಿರುವ ಅಪಘಾತ: ವಾಹನ ಸಂಚರಿಸುವಾಗ ಏಳುವ ದೂಳಿನಿಂದ, ಬಸ್‌ ಚಾಲಕರು ವೇಗವಾಗಿ ಬರುವುದರಿಂದ ಹಾಗೂ ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತವಾಗುವ ಸಂಭವ ಹೆಚ್ಚು. ರಸ್ತೆಯಲ್ಲಿ ಹಾಕಿರುವ ಜಲ್ಲಿ, ಕಲ್ಲುಗಳು ರಾತ್ರಿ ಸಮಯದಲ್ಲಿ ಕಾಣದೇ ಇರುವುದರಿಂದಲೂ ಅಪಘಾತವಾಗುತ್ತಿವೆ. ಸಾಗರ ರಸ್ತೆಯಲ್ಲಿ ಇಂಥ ಹಲವು ಅಪಘಾತಗಳು ನಡೆದಿವೆ. ಸೂಚನಾ ಫಲಕಗಳನ್ನು ಅಳವಡಿಸದೆ ಇರುವುದೂ ಅಪಘಾತ ಹೆಚ್ಚಲು ಮತ್ತೊಂದು ಕಾರಣವಾಗಿದೆ.

‘ರಸ್ತೆಯ ತುಂಬಾ ಗುಂಡಿಗಳಿರುವುದರಿಂದ ವಾಹನ ಚಲಾಯಿಸುವುದು ಕಷ್ಟವಾಗುತ್ತಿದೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಗುಂಡಿಗಳು ಕಾಣದೆ ಅಪಘಾತವಾಗುತ್ತದೆ. ಹೀಗಾಗಿ ಕೂಡಲೇ ರಸ್ತೆ ದುರಸ್ತಿಗೊಳಿಸಬೇಕು’ ಎಂದು ವ್ಯಾಪಾರಿ ಮನ್ಸೂರ್ ಪಾಷಾ ಒತ್ತಾಯಿಸಿದ್ದಾರೆ.

‘ರಸ್ತೆಗಳನ್ನು ನಿರ್ಮಿಸುವಾಗ ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಕಳಪೆ ಕಾಮಗಾರಿ ಕೈಗೊಳ್ಳುವುದರಿಂದಲೇ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣಗೊಳ್ಳುತ್ತಿವೆ. ಗುಂಡಿಗಳನ್ನು ಮುಚ್ಚುವುದೇ ಕೆಲಸವಾಗಬಾರದು’ ಎಂಬುದು ವಾಹನ ಸವಾರ ಪ್ರಕಾಶ್ ಗುಜ್ಜಾರ್‌ ಅವರ ಅಭಿಪ್ರಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT