ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯೋತ್ಸವವನ್ನು ಧಿಕ್ಕರಿಸುವವರನ್ನು ಚುನಾವಣೆಯಲ್ಲಿ ಧಿಕ್ಕರಿಸಿ’

Last Updated 2 ನವೆಂಬರ್ 2017, 6:03 IST
ಅಕ್ಷರ ಗಾತ್ರ

ಖಾನಾಪುರ: ನಾಡಹಬ್ಬವಾದ ರಾಜ್ಯೋತ್ಸವವನ್ನು ಧಿಕ್ಕರಿಸುವವರನ್ನು ಚುನಾವಣೆಯಲ್ಲಿ ಧಿಕ್ಕರಿಸುವ ಮೂಲಕ ಈ ಭಾಗದ ಜನಪ್ರತಿನಿಧಿಗಳಿಗೆ ತಕ್ಕ ಪಾಠವನ್ನು ಕನ್ನಡಿಗರು ಕಲಿಸಬೇಕು ಎಂದು ಉದ್ಯಮಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ನಾಸೀರ ಬಾಗವಾನ ಅಭಿಪ್ರಾಯಪಟ್ಟರು.

ಬುಧವಾರ ಪಟ್ಟಣದ ಮಲಪ್ರಭಾ ತೀರದ ಹಳೆಯ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ತಾಯಿ ಭುವನೇಶ್ವರಿಯ ವಿಗ್ರಹದ ಮೆರವಣಿಗೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ರಾಜ್ಯೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಈ ಭಾಗದ ಶಾಸಕರು, ತಾಲ್ಲೂಕು ಹಾಗೂ ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಜನಪ್ರತಿನಿಧಿಗಳು, ಸಂಸದರು ಮತ್ತು ರಾಜ್ಯ ಬಾಲಭವನದ ಅಧ್ಯಕ್ಷರ ಹೆಸರು ಮುದ್ರಿಸಿ ಹಂಚಲಾಗಿದೆ. ಆದರೆ ಆಹ್ವಾನ ಪತ್ರಿಕೆಯಲ್ಲಿ ಹೆಸರಿಸಿದ ಯಾರೊಬ್ಬರೂ ಕಾರ್ಯಕ್ರಮದತ್ತ ಸುಳಿಯದಿರುವುದು ಅವರಲ್ಲಿರುವ ಕನ್ನಡದ ಬಗೆಗಿನ ಕಾಳಜಿಯನ್ನು ಎತ್ತಿ ತೋರುತ್ತದೆ ಎಂದು ಆರೋಪಿಸಿದರು.

ರಾಜ್ಯೋತ್ಸವದ ಅಂಗವಾಗಿ ನಡೆದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಟ್ಟಣದ ವಿವಿಧ ಶಾಲಾ ಕಾಲೇಜುಗಳ 8 ರೂಪಕಗಳು, ಹಾಗೂ ಅಶೋಕನಗರದ ಕಲಾವಿದರು ಸಿದ್ಧಪಡಿಸಿದ್ದ ಹಲಸಿ ಗ್ರಾಮದ ಐತಿಹಾಸಿಕ ನರಸಿಂಹ ಮಂದಿರದ ರೂಪಕ ಸೇರಿದಂತೆ ರಾಜ್ಯೋತ್ಸವ ಸಮಿತಿಯ ಬ್ಯಾಂಡ್, ಕರಡಿ ಮಜಲು, ಕುದುರೆಯ ಮೇಲಿನ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ವೇಷಧಾರಿಗಳು ರಾಜ್ಯೋತ್ಸವ ಮೆರವಣಿಗೆಯ ಮುಖ್ಯ ಆಕರ್ಷಣೆಗಳಾಗಿದ್ದವು.

ಮೆರವಣಿಗೆಯುದ್ದಕ್ಕೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಕನ್ನಡಾಭಿಮಾನಿಗಳು ಕನ್ನಡಾಭಿಮಾನವನ್ನು ಸೂಚಿಸುವ ಜನಪ್ರಿಯ ಕನ್ನಡ ಗೀತೆಗಳಿಗೆ ಹೆಜ್ಜೆ ಹಾಕಿದ ಕುಣಿದು ಕುಪ್ಪಳಿಸಿದರು. ಛತ್ರಪತಿ ಶಿವಾಜಿ ವೃತ್ತದಲ್ಲಿ ಕನ್ನಡಾಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸರ್ವೋದಯ ವಿದ್ಯಾಲಯ ಆವರಣದಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾತಂಡಗಳಿಗೆ ಹಾಗೂ ರೂಪಕಗಳಿಗೆ ಬಹುಮಾನ ವಿತರಿಸಲಾಯಿತು. ಸಂಗೊಳ್ಳಿ ರಾಯಣ್ಣನ ಇತಿಹಾಸವನ್ನು ಸಾರಿದ ರೂಪಕವನ್ನು ಪ್ರಸ್ತುತಪಡಿಸಿದ ಪಟ್ಟಣದ ಸರಸ್ವತಿ ವಿದ್ಯಾಲಯಕ್ಕೆ ಪ್ರಥಮ ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಶಿವಾನತಂದ ಉಳ್ಳೇಗಡ್ಡಿ, ರಾಜ್ಯೋತ್ಸವ ಆಚರಣೆ ಸಮಿತಿಯ ಅಧ್ಯಕ್ಷ ರೇವಣಸಿದ್ಧಯ್ಯ ಹಿರೇಮಠ ಸೇರಿದಂತೆ ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು. ಎಂ.ಪಿ ಚೋಟಣ್ಣವರ ಸ್ವಾಗತಿಸಿದರು, ಸಿದ್ದಣ್ಣ ಸಾಣಿಕೊಪ್ಪ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT