ಬುಧವಾರ, ಮಾರ್ಚ್ 3, 2021
19 °C

ಎರಡು ಡಜನ್‌ ಕಾಂಗ್ರೆಸ್‌ ಶಾಸಕರಿಗೆ ಟಿಕೆಟ್‌ ಇಲ್ಲ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡು ಡಜನ್‌ ಕಾಂಗ್ರೆಸ್‌ ಶಾಸಕರಿಗೆ ಟಿಕೆಟ್‌ ಇಲ್ಲ?

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್‌ ನೀಡಲು ನಿರ್ಧರಿಸಿರುವ ಕಾಂಗ್ರೆಸ್‌ ಪಕ್ಷ, ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಎರಡು ಡಜನ್‌ ಹಾಲಿ ಶಾಸಕರನ್ನು ಕೈ ಬಿಡುವ ಸಾಧ್ಯತೆ ಇದೆ.

ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ನಡೆಸಿದ ಆಂತರಿಕ ಸಮೀಕ್ಷೆ ಸಂದರ್ಭದಲ್ಲಿ ಶಾಸಕರ ಸಾಮರ್ಥ್ಯ ಅಳೆಯಲಾಗಿದೆ. ಜೊತೆಗೆ ಶಾಸಕರ ಬಗೆಗಿನ ಜನಾಭಿಪ್ರಾಯ ಸಂಗ್ರಹಿಸಲಾಗಿದೆ. 24ಕ್ಕೂ ಹೆಚ್ಚು ಶಾಸಕರ ವಿರುದ್ಧ ಜನವಿರೋಧಿ ಅಭಿಪ್ರಾಯ ವ್ಯಕ್ತವಾಗಿದ್ದು, ಅಂಥವರಿಗೆ ಟಿಕೆಟ್‌ ನೀಡದಿರಲು ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ.

2013ರ ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು 5 ಸಾವಿರಕ್ಕೂ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದಾರೆ. ಈ ಪೈಕಿ 2–3 ಅಭ್ಯರ್ಥಿಗಳು 1,000 ಮತಗಳಿಗೂ ಕಡಿಮೆ ಅಂತರದಲ್ಲಿ ಸೋತಿದ್ದಾರೆ. 16 ಕ್ಷೇತ್ರಗಳ ಅಭ್ಯರ್ಥಿಗಳು 10 ಸಾವಿರಕ್ಕೂ ಕಡಿಮೆ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಈ 26 ಕ್ಷೇತ್ರಗಳ ಕಡೆಗೆ ಪಕ್ಷ ಹೆಚ್ಚಿನ ಗಮನಹರಿಸಲಿದೆ. ಈ ಕ್ಷೇತ್ರಗಳ ಪೈಕಿ ಕೆಲವು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಅಂಥವರಿಗೆ ಮತ್ತೆ ಟಿಕೆಟ್‌ ಸಿಗುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.

‘ಸೋಲಿನ ಭೀತಿ ಎದುರಿಸುತ್ತಿರುವ ಶಾಸಕರು ಮತ್ತು 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲು ಅನುಭವಿಸಿರುವ

ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್‌ ನೀಡಲಾಗುವುದು. ಈ ಬಗ್ಗೆ ಈಗಾಗಲೇ ಪಕ್ಷದ ಹೈಕಮಾಂಡ್‌ ಜೊತೆ ಒಂದು ಸುತ್ತಿನ ಮಾತುಕತೆ ಕೂಡಾ ನಡೆದಿದೆ. ಒಟ್ಟಿನಲ್ಲಿ ಟಿಕೆಟ್‌ ಹಂಚಿಕೆಗೆ ಅಭ್ಯರ್ಥಿಗಳ ಗೆಲುವಿನ ಸಾಮರ್ಥ್ಯ ವನ್ನು ಮಾನದಂಡವಾಗಿ ಪರಿಗಣನೆಗೆ ಬರಲಿದೆ’ ಎನ್ನಲಾಗಿದೆ.

ಮೊದಲ ಸಮೀಕ್ಷೆ ಸಂದರ್ಭದಲ್ಲಿ ಪಕ್ಷದ ಶಾಸಕರ ವೈಯಕ್ತಿಕ ಸಾಧನೆ, ಕ್ಷೇತ್ರದ ಜನರ ಒಲವು, ರಾಜ್ಯ ಸರ್ಕಾರದ ಸಾಧನೆ ಮತ್ತಿತರ ಅಂಶಗಳನ್ನು ಪ್ರಮುಖವಾಗಿಟ್ಟುಕೊಂಡು ಮೌಲ್ಯಮಾಪನ ಮಾಡಲಾಗಿದೆ. ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಅಗತ್ಯವಾದ ಸೀಟು ಗೆಲ್ಲಲು ಪೂರಕವಾದ ವಾತಾವರಣ ಈಗ ಇದೆ. ಆದರೆ, ಕೆಲವು ಶಾಸಕರು ಮತ್ತು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಮತ್ತೊಂದು ಸುತ್ತು ಸಮೀಕ್ಷೆ ಆರಂಭಗೊಂಡಿದ್ದು, ಅದರ ಫಲಿತಾಂಶ ಆಧರಿಸಿ ಜನವರಿ ಅಂತ್ಯಕ್ಕೆ ಅಥವಾ ಫೆಬ್ರುವರಿ ತಿಂಗಳಲ್ಲಿ ಹೈಕಮಾಂಡ್‌ ಟಿಕೆಟ್‌ ಅಂತಿಮಗೊಳಿಸಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.

ಸಿ.ವಿ.ರಾಮನ್‌ನಗರ ಕ್ಷೇತ್ರದಿಂದ ಮಹದೇವಪ್ಪ?

ಮೈಸೂರು ಜಿಲ್ಲೆಯ ಟಿ. ನರಸೀಪುರ (ಪರಿಶಿಷ್ಟ ಜಾತಿ ಮೀಸಲು) ಕ್ಷೇತ್ರವನ್ನು ಪುತ್ರ ಸುನಿಲ್ ಬೋಸ್‌ಗೆ ಬಿಟ್ಟು ಕೊಡಲು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಚಿಂತನೆ ನಡೆಸಿದ್ದಾರೆ. ಮಗನ ರಾಜಕೀಯ ಭವಿಷ್ಯವನ್ನು ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದಿಂದಲೇ ಆರಂಭಿಸುವ ಉಮೇದು ಅವರದ್ದು ಎಂದು ಗೊತ್ತಾಗಿದೆ.

ಬೆಂಗಳೂರಿನ ಸಿ.ವಿ. ರಾಮನ್‌ ನಗರದಿಂದ ಮಹದೇವಪ್ಪ ಕಣಕ್ಕಿಳಿಯುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ರಮೇಶ್‌ ಬಿಜೆಪಿಯ ಎಸ್‌.ರಘು ವಿರುದ್ಧ ಈ ಕ್ಷೇತ್ರದಲ್ಲಿ ಸೋತಿದ್ದರು.

ಮಹದೇವಪ್ಪ ಅವರನ್ನು ಕಣಕ್ಕಿಳಿಸಿದರೆ ಈ ಕ್ಷೇತ್ರವನ್ನು ಬಿಜೆಪಿಯಿಂದ ಸುಲಭವಾಗಿ ವಶಪಡಿಸಿಕೊಳ್ಳಬಹುದು ಎಂಬ ಚಿಂತನೆ ಮುಖ್ಯಮಂತ್ರಿ ಅವರಿಗಿದೆ. ಆದರೆ, ಸಿದ್ದರಾಮಯ್ಯನವರ ಒತ್ತಾಯಕ್ಕೆ ಅವರು ಮಣಿದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.