7

ಗುತ್ತಿಗೆದಾರರು ನಮ್ಮ ಬೀಗರಲ್ರೀ..!

Published:
Updated:

ಗುತ್ತಿಗೆದಾರರು ನಮ್ಮ ಬೀಗರಲ್ರೀ..!

ವಿಜಯಪುರ:
‘ಇಲಾಖೆಯ ಮುಖ್ಯಸ್ಥ ನಾನು. ಎಲ್ಲಿಯೇ ಕಳಪೆ ಕಾಮಗಾರಿ ಅಥವಾ ಲೋಪಗಳಾಗಿದ್ದರೆ ಅದಕ್ಕೆ ನಾನೇ ಹೊಣೆ. ಗುತ್ತಿಗೆದಾರರೇನು ನಮ್ಮ ಬೀಗರಲ್ರೀ... ಕಳಪೆ ಕಾಮಗಾರಿ ನಡೆದಿದ್ರೆ ನೀವೇ ದೂರು ಕೊಡ್ರೀ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವೆ...’

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿಜಯಪುರದಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳಪೆ ಕಾಮಗಾರಿ ನಡೆದಿವೆ ಎಂದು ಸ್ವಪಕ್ಷೀಯರೇ ದೂರಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಿಯಿದು.

‘ನಮ್‌ ಪಕ್ಷದ ಮುಖಂಡರು ಹೇಳಿಕೆ ನೀಡಿರೋ ವಿಷ್ಯಾ ನಂಗ ಗೊತ್ತಿಲ್ರೀ. ಅದೇನಿದ್ರೂ ಕಾಮಗಾರಿ ಕಳಪೆಯಾಗಿದ್ರೇ ಕ್ರಮ ಕೈಗೊಳ್ಳುವೆ’ ಎಂದರು.

ನೀರಾವರಿ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳನ್ನು ಬಹಿರಂಗಪಡಿಸಲಿಕ್ಕಾಗಿಯೇ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ವಿಜಯಪುರದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ರದ್ದುಪಡಿಸಿದ್ದಾರಲ್ಲ? ಎಂದು ಪತ್ರಕರ್ತರಿಂದ ಬಂದ ಇನ್ನೊಂದು ಪ್ರಶ್ನೆಗೆ ವ್ಯಂಗ್ಯದ ಧಾಟಿಯಲ್ಲಿ ಉತ್ತರಿಸುತ್ತ, ‘ತಪ್ಪಾಗಿ ಕೇಳಬೇಡ್ರೀ... ಅವರು ಪ್ರತಿಭಟನೆ ರದ್ದುಪಡಿಸಿಲ್ಲ, ಮುಂದೂಡಿದ್ದಾರಂತೆ. ಆದಷ್ಟು ಬೇಗ ಬಿಎಸ್‌ವೈ ಗುಣಮುಖರಾಗಲಿ. ಅವರ ಆರೋಗ್ಯ ಸುಧಾರಿಸಿಕೊಂಡ ಬಳಿಕ ಪ್ರತಿಭಟನೆ ನಡೆಸಲಿ ಎಂದು ನಾನು ಆಶಿಸುತ್ತೇನೆ’ ಎನ್ನುತ್ತಿದ್ದಂತೆ ಗೋಷ್ಠಿಯಲ್ಲಿ ಹಾಜರಿದ್ದ ಸಚಿವರ ಬೆಂಬಲಿಗರು ಗೊಳ್‌ ಎಂದು ನಕ್ಕರು. ಈ ನಗುವಿನ ಮರ್ಮ ಯಾರೊಬ್ಬರಿಗೂ ತಿಳಿಯಲಿಲ್ಲ.

– ಡಿ.ಬಿ.ನಾಗರಾಜ

ಮದ್ಯ ನಿಷೇಧ ಆಗಲ್ಲ, ಆದರೂ ಬೆಂಬಲ!

ಕಲಬುರ್ಗಿ: ಮದ್ಯ ನಿಷೇಧಕ್ಕೆ ಒತ್ತಾಯಿಸಿ ರಾಯಚೂರಿನಲ್ಲಿ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ನೇತೃತ್ವದಲ್ಲಿ ವಾರದ ಹಿಂದೆಯಷ್ಟೇ ಬೃಹತ್‌ ಸಮಾವೇಶ ನಡೆಯಿತು. ‘ಮದ್ಯ ನಿಷೇಧಿಸುವ ಪಕ್ಷಕ್ಕೆ ಚುನಾವಣೆಯಲ್ಲಿ ಮತ’ ಎಂದು ಸಮಾವೇಶವು ಘೋಷಿಸಿದ ಕಾರಣ ರಾಜಕೀಯ ವಲಯದಲ್ಲಿ ಚರ್ಚೆಗೆ ಆಸ್ಪದವಾಯಿತು.

ಆಳಂದ ಶಾಸಕ ಬಿ.ಆರ್.ಪಾಟೀಲ ಅವರು ಮದ್ಯ ನಿಷೇಧದ ಪರವಾಗಿದ್ದು, ಅವರ ನೇತೃತ್ವದಲ್ಲಿ ಆಗಾಗ್ಗೆ ಪ್ರತಿಭಟನೆಗಳು ನಡೆಯುತ್ತವೆ. ಈ ವಿಷಯವನ್ನು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿದ ಮಾಜಿ ಶಾಸಕ ಸುಭಾಷ ಗುತ್ತೇದಾರ, ‘ಮದ್ಯ ನಿಷೇಧ ಒಬ್ಬಿಬ್ಬರ ಕೈಯಲ್ಲಿ ಇಲ್ಲ. ಅದರ ನಿಷೇಧ ಸಾಧ್ಯವಿಲ್ಲ’ ಎಂದರು.

‘ಮದ್ಯ ನಿಷೇಧಿಸುವುದಾಗಿ ಹೇಳಿಕೊಂಡೇ ಬಿ.ಆರ್.ಪಾಟೀಲ ಶಾಸಕರಾದರು. ಆದರೆ ಆಳಂದದಲ್ಲೇ ಮದ್ಯ ಮಾರಾಟ ನಿಂತಿಲ್ಲ’ ಎಂದರು. ಪತ್ರಕರ್ತರು ತಡ ಮಾಡದೇ, ‘ಹಾಗಾದರೆ ಮದ್ಯವನ್ನು ನೀವು ನಿಷೇಧಿಸುವಿರಾ’ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಗುತ್ತೇದಾರ ಅವರು, ‘ಗುಜರಾತ್‌ನಲ್ಲೇ ಕದ್ದುಮುಚ್ಚಿ ಮದ್ಯ ಮಾರಾಟ ನಡೆದಿರುವಾಗ, ಎಲ್ಲಾ ಕಡೆ ಮದ್ಯ ನಿಷೇಧಿಸಲು ಆಗುವುದೇ? ಸರ್ಕಾರದಿಂದ ಮಾತ್ರ ಮದ್ಯ ನಿಷೇಧ ಸಾಧ್ಯ’ ಎಂದರು.

ಇಷ್ಟಕ್ಕೂ ಸುಮ್ಮನಾಗದ ಪತ್ರಕರ್ತರು, ‘ಮದ್ಯ ನಿಷೇಧಕ್ಕೆ ನಿಮ್ಮ ಬೆಂಬಲವಿದೆಯೇ’ ಎಂದು ಕೇಳಿದರು. ಕೆಲ ಕ್ಷಣ ಮೌನವಹಿಸಿದ ಅವರು, ‘ಮದ್ಯ ನಿಷೇಧವಾದರೆ ಒಳ್ಳೆಯದೇ. ಅದಕ್ಕೆ ನನ್ನ ಬೆಂಬಲವಿದೆ’ ಎಂದು ನಗೆ ಬೀರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry