ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊತ್ತಂಬರಿ ಸೊ‍‍ಪ್ಪು ಈಗಲೂ ದುಬಾರಿ

Last Updated 11 ನವೆಂಬರ್ 2017, 15:42 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿ ತರಕಾರಿ ಧಾರಣೆಯಲ್ಲಿ ಕೊಂಚ ಇಳಿಕೆಯಾಗಿದೆ. ದಸರಾ ನಂತರ ಸತತ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಲ್ಲಿ ಸ್ವಲ್ಪ ಸಮಾಧಾನ ಮೂಡಿದೆ.

ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಬಂದ ಮಳೆಯಿಂದಾಗಿ ಬೆಳೆ ಹಾನಿಯಾಗಿತ್ತು. ಅಗತ್ಯ ಪ್ರಮಾಣದ ತರಕಾರಿ ಮಾರುಕಟ್ಟೆಗೆ ಪೂರೈಕೆಯಾಗದ ಕಾರಣ ಬೇಡಿಕೆ ಹೆಚ್ಚಿ ಬೆಲೆ ಏರಿಕೆಯಾಗಿತ್ತು.

ಕಳೆದ ತಿಂಗಳು ಒಂದು ಕೆ.ಜಿ. ನುಗ್ಗೆಕಾಯಿ, ಕೋಸು, ಬೀನ್ಸ್, ಕ್ಯಾಪ್ಸಿಕಂ ಬೆಲೆ ₹100 ರ ಗಡಿದಾಟಿದ್ದವು. ಕೋಲಾರ, ತುಮಕೂರು, ರಾಮನಗರಗಳಿಂದ ಹೆಚ್ಚಿನ ತರಕಾರಿ ಪೂರೈಕೆ ಯಾಗಿರುವುದರಿಂದ ಹಾಗೂ ರೈತರು ಮಾರುಕಟ್ಟೆಗೆ ತರಕಾರಿ ತಂದಿರುವುದರಿಂದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.

ಕ್ಯಾಪ್ಸಿಕಂ ಕೆಜಿಗೆ ₹60, ಹುರುಳಿಕಾಯಿ ₹60, ಗೆಡ್ಡೆಕೋಸು ₹ 50, ನುಗ್ಗೆಕಾಯಿ ₹ 60, ಹಿರೇಕಾಯಿ ₹ 60, ಟೊಮೆಟೊ ₹ 40 ಧಾರಣೆ
ಇದೆ.

ಕೊತ್ತಂಬರಿ ಸೊಪ್ಪಿನ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಒಂದು ಕಟ್ಟು ₹20ಕ್ಕೆ ಮಾರಾಟವಾಗುತ್ತಿದೆ. ಮೆಂತ್ಯೆ, ಕರಿಬೇವು, ಪುದಿನ ಸೊಪ್ಪು ಕಟ್ಟಿಗೆ ₹ 5ರಂತೆ ಬಿಕರಿಯಾಗುತ್ತಿವೆ.

‘ಹೊಸ ಫಸಲು ಈಗ ಮಾರುಕಟ್ಟೆ ಪ್ರವೇಶಿಸಿವೆ. ಹಾಗಾಗಿ ಬೆಲೆಗಳು ಕೊಂಚ ಇಳಿಮುಖವಾಗಿವೆ. ಚಳಿಗಾಲದಲ್ಲಿ ಇಳುವರಿ ಕಡಿಮೆ ಇರುವುದರಿಂದ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಈಗಿನ ಬೆಲೆಯೇ ಮುಂದುವರೆಯುತ್ತದೆ. ಜನವರಿಯ ನಂತರ ತರಕಾರಿ ಮತ್ತು ಸೊಪ್ಪಿನ ಧಾರಣೆಯಲ್ಲಿ ಕಡಿಮೆಯಾಗುತ್ತದೆ’ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ವಿಶ್ವನಾಥ್ ತಿಳಿಸಿದರು.

‘ಕಳೆದ ವಾರ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ಹಾಗಾಗಿ ಈ ವಾರ ಎಲ್ಲ ತರಕಾರಿಗಳನ್ನು ಮಾರುಕಟ್ಟೆಗೆ ತಂದಿದ್ದೇನೆ. ಕಳೆದ ವಾರದಷ್ಟು ಬೆಲೆ ಇಲ್ಲದಿದ್ದರೂ, ನಷ್ಟವಂತೂ ಆಗುತ್ತಿಲ್ಲ’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ರೈತ ಮಧುಸೂಧನ್.

‘ಬೆಲೆ ಏರಿಕೆಯಾದಾಗ ಗ್ರಾಹಕರು ಖರೀದಿಸಲು ಹಿಂಜರಿಯುತ್ತಿದ್ದರು. ಹಾಗಾಗಿ ತರಕಾರಿಗಳು ಹಾಳಾಗಿ ನಷ್ಟವಾಗಿತ್ತು. ಈ ವಾರ ಗ್ರಾಹಕರ ಸಂಖ್ಯೆ ಹೆಚ್ಚಿದ್ದು, ಉತ್ತಮ ವ್ಯಾಪಾರದ ನಿರೀಕ್ಷೆ ಇದೆ’ ಎಂದು ತರಕಾರಿ ವ್ಯಾಪಾರಿ ಸೆಲ್ವಿ ತಿಳಿಸಿದರು.

ತರಕಾರಿ (ಕೆ.ಜಿ.ಗಳಲ್ಲಿ) ಬೆಲೆ (₹ಗಳಲ್ಲಿ)

ಅಲೂಗಡ್ಡೆ–20

ಬೀನ್ಸ್ –60

ಬೆಂಡೆಕಾಯಿ–40

ಬೀಟ್‌ರೂಟ್–40

ಕೋಸು–60

ಕ್ಯಾಪ್ಸಿಕಂ–60

ಕ್ಯಾರೆಟ್–60

ಹೂಕೋಸು–50

ಮೂಲಂಗಿ–40

(ಕೆ.ಆರ್.ಮಾರುಕಟ್ಟೆ ಧಾರಣೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT