5

ಗಾಲ್ಫ್‌ ಕ್ಷಿತಿಜದ ಮಿನುಗು ತಾರೆ

Published:
Updated:
ಗಾಲ್ಫ್‌ ಕ್ಷಿತಿಜದ ಮಿನುಗು ತಾರೆ

ರ್ನಾಟಕದ ಅದಿತಿ ಅಶೋಕ್‌, ಗಾಲ್ಫ್‌ ಲೋಕದ ಭರವಸೆಯ ತಾರೆಯಾಗಿದ್ದಾರೆ.  ಬಾಲ್ಯದಿಂದಲೇ ಈ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದ  ಅದಿತಿ, ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಆಟದ ಪಟ್ಟುಗಳನ್ನು ಕಲಿತು ಅವುಗಳನ್ನು ಮೈಗೂಡಿಸಿಕೊಂಡು ಸಾಗುತ್ತಿದ್ದಾರೆ. ಜೂನಿಯರ್‌ ಹಂತದಲ್ಲೇ ಮೋಡಿ ಮಾಡಿದ್ದ ಅವರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಜಯದ ‘ಹ್ಯಾಟ್ರಿಕ್‌’  ದಾಖಲಿಸಿದ್ದರು. 2012, 2013 ಮತ್ತು 2014ರಲ್ಲಿ ಅವರಿಂದ ಪ್ರಶಸ್ತಿಯ ಸಾಧನೆ ಮೂಡಿ ಬಂದಿತ್ತು. 2013ರ ಏಷ್ಯನ್‌ ಯೂತ್‌ ಕ್ರೀಡಾಕೂಟ, 2014ರಲ್ಲಿ ಜರುಗಿದ್ದ ಯೂತ್ ಒಲಿಂಪಿಕ್ಸ್‌ ಮತ್ತು ಏಷ್ಯಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಭಾರತದ ಮೊದಲ ಗಾಲ್ಫರ್‌ ಎಂಬ ಹಿರಿಮೆಯೂ ಅದಿತಿ ಅವರದ್ದು. ಅಮೆಚೂರ್‌ ವಿಭಾಗದ ಟೂರ್ನಿಗಳಲ್ಲೂ ಅವರು ಛಾಪು ಒತ್ತಿದ್ದರು. 2011 ಮತ್ತು 2014ರಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದು ಇದಕ್ಕೆ ಸಾಕ್ಷಿ.

ಬೆಂಗಳೂರಿನ ಅದಿತಿ, 2015ರಲ್ಲಿ ಲೀಡ್ಸ್‌ನಲ್ಲಿ ನಡೆದಿದ್ದ ಮಹಿಳಾ ಬ್ರಿಟಿಷ್‌ ಅಮೆಚೂರ್‌ ಸ್ಟ್ರೋಕ್‌ ಫ್ಲೇ ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ ಎತ್ತಿಹಿಡಿದು ಹೊಸ ಭಾಷ್ಯ ಬರೆದಿದ್ದರು. ಅವರು ಈ ಸಾಧನೆ ಮಾಡಿದ ಭಾರತದ ಮೊದಲ ಗಾಲ್ಫರ್‌. ಪ್ರತಿಷ್ಠಿತ ಸೇಂಟ್‌ ರೂಲ್‌ ಟ್ರೋಫಿ ಗೆದ್ದು ಬೀಗಿದ್ದ ಅವರು ಅದೇ ವರ್ಷ ಯುರೋಪಿಯನ್‌ ಮಹಿಳಾ ಅಮೆಚೂರ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿ ಪ್ರತಿಭೆಯನ್ನು ಜಗಜ್ಜಾಹೀರು ಮಾಡಿದ್ದರು, ಇಷ್ಟೇ ಅಲ್ಲದೆ ‘ದಿ ನಿಕೋಲ್ಸ್‌ ಟ್ರೋಫಿ’ ಮತ್ತು ‘ದಿನ್‌ವಿಡ್ಡಿ ಟ್ರೋಫಿ’ಗಳನ್ನೂ ಎತ್ತಿ ಹಿಡಿದು ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದರು.

ಹೀಗೆ ಸಾಧನೆಯ ಶಿಖರದ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತಿದ್ದ ಅದಿತಿ , 2016ರಲ್ಲಿ ನಡೆದಿದ್ದ ಆಸ್ಟ್ರೇಲಿಯನ್‌ ಓಟ್ಸ್‌ ವಿಕ್ಟೋರಿಯಾ ಓಪನ್‌ನಲ್ಲಿ ಭಾಗವಹಿಸುವ ಮೂಲಕ ವೃತ್ತಿಪರ ಗಾಲ್ಫ್‌ಗೆ ಅಡಿ ಇಟ್ಟಿದ್ದರು. ಪದಾರ್ಪಣೆಯ ವರ್ಷವೇ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿ ಮಿನುಗಿದ್ದರು. ಸತತ ನಾಲ್ಕು ಮಹಿಳಾ ಯುರೋಪಿಯನ್‌ ಟೂರ್‌ ಟೂರ್ನಿಗಳಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಗಳಿಸಿ ಸೈ ಎನಿಸಿಕೊಂಡಿದ್ದರು. 31 ಮಹಿಳಾ ಯುರೋಪಿಯನ್‌ ಟೂರ್ನಿಗಳಲ್ಲಿ ಆಡಿರುವ ಅದಿತಿ ಮೂರರಲ್ಲಿ ಪ್ರಶಸ್ತಿ ಜಯಿಸಿದ್ದು ಕೂಡ ವಿಶಿಷ್ಠ ಸಾಧನೆ.

ಒಲಿಂಪಿಕ್ಸ್‌ನಲ್ಲಿ ಮೋಡಿ

2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ ಕೂಟದಲ್ಲಿ ಕಣಕ್ಕಿಳಿದಿದ್ದ ಅದಿತಿ ದಿಟ್ಟ ಹೋರಾಟ ನಡೆಸಿ ಗಾಲ್ಫ್‌ ಪ್ರಿಯರ ಮನ ಗೆದ್ದಿದ್ದರು. ಎರಡನೇ ಸುತ್ತಿನಲ್ಲಿ ಅವರು ಅರಿಯಾ ಜುಟಾನುಗರ್ನ್ ಅವರೊಂದಿಗೆ ಜಂಟಿಯಾಗಿ ಮುನ್ನಡೆ ಗಳಿಸಿ ಗಮನ ಸೆಳೆದಿದ್ದರು. ಸಾಂಬಾ ನಾಡಿನಲ್ಲಿ ಅದಿತಿ ಅಂಗಳಕ್ಕಿಳಿದಾಗ ಅವರಿಗೆ 18 ವರ್ಷ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಕಿರಿಯ ಗಾಲ್ಫರ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದರು.

ನವೆಂಬರ್‌ 13 ರಂದು ಗುರುಗ್ರಾಮದಲ್ಲಿ ನಡೆದಿದ್ದ ಇಂಡಿಯಾ ಓಪನ್‌ನಲ್ಲಿ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ಚರಿತ್ರೆಯ ಪುಟಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಅಚ್ಚೊತ್ತಿದ್ದರು. ಜೊತೆಗೆ ಮಹಿಳಾ ಯರೋಪಿಯನ್‌ ಟೂರ್‌ನಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ ಕಿರಿಯ ಗಾಲ್ಫರ್‌ ಎನಿಸಿದ್ದರು. ಆ ನಂತರ ನಡೆದಿದ್ದ ಕತಾರ್‌ ಮಹಿಳಾ ಓಪನ್‌ನಲ್ಲೂ ಕೈಚಳಕ ತೋರಿದ್ದರು. ಫ್ಲೋರಿಡಾದಲ್ಲಿ ಜರುಗಿದ್ದ ಎಲ್‌ಪಿಜಿಎ ಟೂರ್ನಿಯಲ್ಲಿ ಜಂಟಿಯಾಗಿ 24ನೇ ಸ್ಥಾನ ಗಳಿಸಿದ್ದು ವಿಶೇಷ.  ಅವರ ಸಾಧನೆಗೆ ಹೋದ ವರ್ಷ ಎಲ್‌ಇಟಿ ವರ್ಷದ ಶ್ರೇಷ್ಠ ಗಾಲ್ಫರ್‌ ಗೌರವ ಸಂದಿತ್ತು.

ಇತ್ತೀಚೆಗೆ ನಡೆದಿದ್ದ ಫಾತಿಮಾ ಬಿನ್‌ ಮುಬಾರಕ್‌ ಓಪನ್‌ ಚಾಂಪಿಯನ್‌ಷಿಪ್‌ನಲ್ಲೂ ಅದಿತಿ ಕಿರೀಟ ಮುಡಿಗೇರಿಸಿಕೊಂಡು ಸಂಭ್ರಮಿಸಿದ್ದರು. ಹೋದ ವಾರ ನ್ಯಾಪ್‌ಲೆಸ್‌ನ ಟಿಬರೊನ್‌ ಗಾಲ್ಫ್‌ ಕ್ಲಬ್‌ನಲ್ಲಿ ನಡೆದಿದ್ದ ಪ್ರತಿಷ್ಠಿತ ಎಲ್‌ಪಿಜಿಎ ಸಿಎಂಇ ಟೂರ್‌ ಚಾಂಪಿಯನ್‌ಷಿಪ್‌ನಲ್ಲೂ ಅದಿತಿ ಆಡಿದ್ದರು. ಅವರು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ದೇಶದ ಮೊದಲ ಮಹಿಳಾ ಗಾಲ್ಫರ್‌ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry