7

ಈತ ವಾನರ ಸೇನೆಯ ಕರ್ನಲ್‌!

Published:
Updated:
ಈತ ವಾನರ ಸೇನೆಯ ಕರ್ನಲ್‌!

ಮಂಗಗಳು ಎಂದರೆ ಹಲವರಿಗೆ ಭಯ. ಎಷ್ಟೋ ಪ್ರವಾಸಿ ತಾಣಗಳಿಗೆ ನಾವು ಭೇಟಿ ನೀಡಿದಾಗ ಅಲ್ಲಿರುವ ಕೋತಿಗಳು ನಮ್ಮ ಮೈಮೇಲೆ ಎಗರಿ ಕೈಯಲ್ಲಿರುವ ಪದಾರ್ಥಗಳನ್ನು ಕಸಿದುಕೊಳ್ಳುತ್ತವೆ. ಹೌದು, ಈ ವಾನರ ಸೇನೆಯನ್ನು ದೂರದಿಂದ ನೋಡುವುದು ಚೆಂದ, ಹತ್ತಿರಕ್ಕೆ ಹೋಗಬೇಕೆಂದರೆ ಹೆದರಿಕೆ. ಆದರೆ, ಈ ಎರಡು ವರ್ಷದ ಪೋರನನ್ನು ನೋಡಿ, ಮಂಗಗಳ ಜತೆ ಆಟ ಆಡುತ್ತಾನೆ; ಅವುಗಳ ಮರಿಗಳನ್ನು ಹಿಡಿದು ಮುದ್ದು ಮಾಡುತ್ತಾನೆ!

ರಜೆ ದಿನಗಳು ಬಂದರೆ ಸಾಕು ಅಜ್ಜಿಯ ಊರು ಮಕ್ಕಳ ಪಾಲಿನ ಸ್ವರ್ಗ. ಸಮರ್ಥ ಬಂಗಾರಿ ಎಂಬ ಈ ಪುಟಾಣಿ ಅಮ್ಮನೊಂದಿಗೆ ತನ್ನ ಅಜ್ಜಿಯ ಊರು ಕುಂದಗೋಳ ತಾಲ್ಲೂಕಿನ ಅಲ್ಲಾಪುರಕ್ಕೆ ಬಂದ. ಬಂದವನೇ ಕಪಿಸೈನ್ಯದ ಸ್ನೇಹ ಗಳಿಸಿ, ಮನೆಯ ಪಡಸಾಲೆಯವರೆಗೂ ಅವುಗಳನ್ನು ಕರೆತಂದ.

ಒಂದುದಿನ ಅಜ್ಜಿ ಬೇಯಿಸಿಕೊಟ್ಟ ಬಿಸಿ ರೊಟ್ಟಿಯನ್ನು ಹಿಡಿದುಕೊಂಡು ಹೊರಗೆ ತಿನ್ನಲು ಹೋದ ಸಮರ್ಥನಿಗೆ ವಾನರ ಸೈನ್ಯ (ಕಪ್ಪು ಮೂತಿಯ ಈ ವಾನರಿಗೆ ಮುಸುವ ಎಂದು ಹೆಸರು) ಕಂಡನಂತೆ. ಕೂಡಲೇ ಆತ ತನ್ನದೆ ಆದ ತೊದಲು ನುಡಿಯಲ್ಲಿ ಬಾ... ಬಾ... ಎಂದು ಕರೆಯುತ್ತ ಕೈಯಲ್ಲಿದ್ದ ರೊಟ್ಟಿಯನ್ನು ತೋರಿಸಿದನಂತೆ.

ಮನೆಯ ಸೂರಿನ ಮೇಲಿರುವ ಮುಸುವಗಳ ಹಿಂಡೇ ಈ ಪುಟಾಣಿಯ ಸುತ್ತುವರೆದು, ಈತನ ಕೈಯಲ್ಲಿನ ರೊಟ್ಟಿ ತಿನ್ನುತ್ತಿರುವಾಗ, ಮನೆಯ ಮಂದಿ ನೋಡಿ ಗಾಬರಿಯಿಂದ ಕೂಗಿದರೂ ಸಮರ್ಥ ಹೆದರದೆ ಅವುಗಳೊಂದಿಗೆ ಆಟವಾಡುತ್ತಾ ಕುಳಿತನಂತೆ. ಆ ಮಂಗಗಳನ್ನು ಹೊಡೆದೋಡಿಸಲು ಪ್ರಯತ್ನಿಸಿದಾಗ ಕೋಲು ಹಿಡಿದು ಬಂದವರನ್ನೇ ಅವುಗಳು ಹಿಮ್ಮೆಟ್ಟಿಸಿದವಂತೆ.

ಆದರೆ, ಈ ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆಯನ್ನು ಉಂಟುಮಾಡದೆ ಬಿಟ್ಟೂ ಹೋಗದೇ ಸಲಿಗೆಯಿಂದ ಆಟವಾಡತ್ತಾ ಕುಳಿತವಂತೆ. ಮಂಗಗಳು ಮತ್ತು ಈ ಪೋರನಿಗೆ ಯಾವುದೋ ಜನುಮದ ಸಂಬಂಧ ಇರಬೇಕು ಎಂದುಕೊಂಡ ಊರಿನ ಜನ ಸ್ನೇಹಕ್ಕೆ ಚ್ಯುತಿ ತರುವ ಗೋಜಿಗೆ ಹೋಗಲಿಲ್ಲ. ಈಗ ದಿನ ಬೆಳಗಾದರೆ ಸಾಕು ವಾನರ ಸೈನ್ಯ ಈ ಪುಟಾಣಿಯ ಮನೆಮುಂದೆ ಠಳಾಯಿಸುತ್ತವೆ. ಅಷ್ಟೇ ಅಲ್ಲ, ಈತ ಮಲಗಿರುವ ಹಾಸಿಗೆಯನ್ನು ಎಳೆದು ಎಚ್ಚರಗೊಳಿಸುತ್ತವೆ. ಎದೆಯ ಮೇಲೆ ಗಟ್ಟಿಯಾಗಿ ಹಿಡಿದು ಅವಚಿಕೊಂಡು ಮಲಗುತ್ತವೆ.

ಈತನನ್ನು ಮಂಗಗಳಿಂದ ದೂರ ಇಡಬೇಕು. ಪ್ರಾಣಿಗಳು ಯಾವಾಗ ಹೇಗೆ ಬೇಕಾದರೂ ನಡೆದುಕೊಳ್ಳಬಹುದು ಎಂದುಕೊಂಡು ಒಂದು ವಾರದವರೆಗೆ ಸಮರ್ಥನನ್ನು ಬೇರೆ ಊರಿಗೆ ಕರೆದುಕೊಂಡು ಹೋಗಿ ನೋಡಿದರು ಪಾಲಕರು. ಬೆಳಗಿನ ಜಾವ ಬಂದ ಮುಸುವಗಳು ಸಮರ್ಥನ ಸುಳಿವು ಸಿಗದಿದ್ದಾಗ ಅಜ್ಜಿಯ ಮನೆಯಲ್ಲಿನ ಎಲ್ಲ ಹಾಸಿಗೆ ಕಿತ್ತುಹಾಕಿವೆ. ಊರಿನ ಮನೆಗಳಿಗೆ ನುಗ್ಗಿ ಗಲಾಟೆ ಮಾಡಿವೆ. ಈತನನ್ನು ಮರಳಿ ಊರಿಗೆ ಕರೆತಂದು ತೋರಿಸಿದಾಗ ಇವುಗಳ ಚೇಷ್ಟೆ ಕಡಿಮೆ ಆಗಿದೆ! ಈಗ ಚಿಕ್ಕ ಮಂಗಗಳಿಂದ ದೊಡ್ಡ ಮಂಗಗಳು ಸಹ ಈತನೊಂದಿಗೆ ಮನೆಯ ಒಳಗೆ ಬಂದು ಆಟವಾಡಲು ಪ್ರಾರಂಭಿಸಿವೆ.

ಮುಸುವಗಳಿಗೆ ಮೊದಲು ಊಟಕೊಟ್ಟು ನಂತರ ತಾನು ತಿನ್ನುತ್ತಾನೆ ಸಮರ್ಥ. ದಿನವಿಡೀ ಇವರ ಮನೆಗಾಗಿ ಸ್ವಲ್ಪ ಜೋಳದ ರೊಟ್ಟಿ ಬೇಯಿಸುತ್ತಿದ್ದವರು, ಈಗ ಮನೆಯ ಬಂಧುಗಳಂತೆ ಇರುವ ಈ ಹನುಮಂತನ ಸೈನ್ಯಕ್ಕೂ ನೀಡುತ್ತಿದ್ದಾರೆ. ಅದೇ ರೀತಿ ಈ ಊರಿನ ರೈತರ ಹೊಲಗಳಲ್ಲಿ ಬೆಳೆಗಳನ್ನು ತಿನ್ನುತ್ತವೆ. ಆದರೂ ಇಲ್ಲಿನ ಜನರಿಗೆ ಯಾವುದೇ ರೀತಿಯ ಕೋಪವಿಲ್ಲ.

‘ಎಷ್ಟೋ ಜನ ಕೋತಿಗಳನ್ನು ಸಾಕಿದ್ದನ್ನು ನೋಡಿದ್ದೇನೆ. ಆದರೆ ಈ ರೀತಿಯ ದೃಶ್ಯವನ್ನು ನಾನು ಮೊದಲ ಬಾರಿಗೆ ಕಂಡದ್ದು, ಪವಾಡದಂತೆ ಗೋಚರಿಸುತ್ತಿದೆ’ ಎನ್ನುತ್ತಾರೆ ಅಲ್ಲಾಪುರ ಗ್ರಾಮದ ಚನ್ನಪ್ಪ ಮಸನಾಳ.

‘ಈ ಭಾಗದಲ್ಲಿ ಕೋತಿಗಳ ಎರಡು ದಂಡುಗಳಿವೆ. ಒಂದು ಕಡಪಟ್ಟಿ ಊರಿನದು, ಇನ್ನೊಂದು ಅಲ್ಲಾಪುರ ಗ್ರಾಮದ್ದು. ಒಂದು ಗ್ರಾಮದ ಮಂಗಗಳು ಮತ್ತೊಂದು ಗ್ರಾಮಕ್ಕೆ ಕಾಲು ಇಡುವಂತಿರಲಿಲ್ಲ. ಆದರೆ ಈಗ ಸಮರ್ಥನ ಸ್ನೇಹವಾದ ನಂತರ ಎರಡೂ ಹಿಂಡುಗಳು ಯಾವುದೇ ರೀತಿಯಲ್ಲಿ ಗಲಾಟೆ ಮಾಡಿಲ್ಲ’ ಎಂದು ಅವರು ಹೇಳುತ್ತಾರೆ.

ಚಿಕ್ಕ ವಯಸ್ಸಿನ ಮಂಗವೆಂದರೆ ಸಮರ್ಥನಿಗೆ ತುಂಬಾ ಇಷ್ಟ. ಒಂದು ಕೋತಿ ಈತನನ್ನು ವಿಶೇಷ ಕಾಳಜಿಯಿಂದ ಕಾಣುತ್ತದೆ. ಈ ಸ್ನೇಹಕ್ಕೆ ಯಾವ ರೀತಿಯಲ್ಲಿ ಅಭಿನಂದನೆ ಸಲ್ಲಿಸಿವುದು ಎಂಬುದು ತಿಳಿಯದ ಸಂಗತಿಯಾಗಿದೆ ಎನ್ನುತ್ತಾರೆ ಊರಿನ ಜನ. ಇವನ ಹೊರತು ಬೇರೆ ಮಕ್ಕಳು ಅವುಗಳನ್ನು ಮುಟ್ಟುವ ಹಾಗಿಲ್ಲ. ಹಲವರು ಈ ಸಾಹಸ ಮಾಡಲು ಹೋಗಿ, ಪರಚಿಸಿಕೊಂಡಿದ್ದಾರೆ. ಆತ ಚಿಕ್ಕ ಮಗು, ಆತನೇ ಅವುಗಳನ್ನು ಮುಟ್ಟವಾಗ ನಾವು ಏಕೆ ಮುಟ್ಟಬಾರದು ಎಂದು ಹೋದ ಹಿರಿಯರಿಗೂ ತಕ್ಕಪಾಠ ಕಲಿಸಿವೆ.

ಬೇರೆ ಬೇರೆ ಊರಿನ ಜನ ಈ ಸ್ನೇಹವನ್ನು ಕಣ್ಣ ತುಂಬಿಕೊಳ್ಳುಲು ಅಲ್ಲಾಪುರಕ್ಕೆ ಬರುತ್ತಿದ್ದಾರೆ.

ಚಿತ್ರಗಳು: ಲೇಖಕರವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry