ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವ ವೈವಿಧ್ಯ ಸಂರಕ್ಷಣೆ ಅಗತ್ಯ’

Last Updated 21 ನವೆಂಬರ್ 2017, 6:38 IST
ಅಕ್ಷರ ಗಾತ್ರ

ಬಳ್ಳಾರಿ: ’ಜೀವ ವೈವಿಧ್ಯಗಳ ಗುರುತಿಸುವಿಕೆ ಮತ್ತು ಸಂರಕ್ಷಣೆ ಅತ್ಯಗತ್ಯ’ ಎಂದು ಸಂಡೂರು ಪರಿಸರ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಜಿ.ವಿಶ್ವಮೂರ್ತಿ ಪ್ರತಿಪಾದಿಸಿದರು.

ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯರಿಗೆ ನಗರದ ತಾಲ್ಲೂಕು ಪಂಚಾಯಿತಿಯಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ಸೋಮವಾರದಿಂದ ಏರ್ಪಡಿಸಿರುವ ತರಬೇತಿಯಲ್ಲಿ ಮಾತನಾಡಿದ ಅವರು, ‘ಮನುಷ್ಯ ಕುಲವೊಂದೇ ವೈವಿಧ್ಯಮಯ ಜೀವ ಸಂಕುಲ ಎಂಬುದ ಎಲ್ಲರ ತಿಳಿವಳಿಕೆ. ಆದರೆ ಸದ್ದಿಲ್ಲದೆ ಜೀವಿಸುತ್ತಿರುವ ಸಂಕುಲಗಳು ಬಹಳಷ್ಟಿವೆ’ ಎಂದರು.

‘ಜೈವಿಕ ವೈವಿಧ್ಯ ಅಧಿನಿಯಮ ಪ್ರಕಾರ ಪ್ರತಿ ಸ್ಥಳೀಯ ಸಂಸ್ಥೆಯಲ್ಲೂ ಜೀವವೈವಿಧ್ಯ ನಿರ್ವಹಣಾ ಸಮಿತಿ ರಚಿಸುವುದು ಕಡ್ಡಾಯ. ಆಯಾ ಪ್ರದೇಶದ ಜೀವ ವೈವಿಧ್ಯ ಸಂರಕ್ಷಣೆ, ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಜೀವವೈವಿಧ್ಯಗಳನ್ನು ದಾಖಲೆ ಮಾಡುವುದು, ಜೀವಿಗಳ ಆವಾಸ ಸ್ಥಾನಗಳ ಗುರುತಿಸುವಿಕೆ ಹಾಗೂ ಅವುಗಳ ಸಂರಕ್ಷಣೆ ಸಮಿತಿಗಳ ಹೊಣೆ’ ಎಂದರು.

‘ಪರಿಸರದ ಸಮತೋಲನ ಕಾಪಾಡುವ ಸಲುವಾಗಿಯೇ ಕೇಂದ್ರ ಸರ್ಕಾರ 2002ರಲ್ಲಿ ಜೈವಿಕ ವೈವಿಧ್ಯ ಅಧಿನಿಯಮವನ್ನು ರೂಪಿಸಿ ಜಾರಿಗೊಳಿಸಿದೆ. ಆದರೆ ಒಂದು ದಶಕಕ್ಕೂ ಹೆಚ್ಚು ಕಾಲವಾದರೂ ಹಲವು ಪಂಚಾಯಿತಿಗಳಲ್ಲಿ ಈ ಸಮಿತಿಗಳು ರಚನೆಯೇ ಆಗಿಲ್ಲ. ಇನ್ನೂ ಕೆಲವೆಡೆ ರಚನೆಯಾಗಿದ್ದರೂ ನಿರೀಕ್ಷೆಯಂತೆ ಕಾರ್ಯನಿರ್ವಹಿಸುತ್ತಿಲ್ಲ. ಜೀವವೈವಿಧ್ಯಗಳ ಕುರಿತು ಕುತೂಹಲ ಮತ್ತು ಕಾಳಜಿ ಇರುವುದು ಅಗತ್ಯ. ಈ ನಿಟ್ಟಿನಲ್ಲಿ ಪಂಚಾಯಿತಿ ಸದಸ್ಯರಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ’ ಎಂದರು.

‘ತರಬೇತಿಯಲ್ಲಿ ಪಾಲ್ಗೊಂಡವರು ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಜೀವ ಸಂಕುಲಗಳನ್ನು ಪತ್ತೆ ಹಚ್ಚಬೇಕು. ಗುರುತಿಸಬೇಕು. ಸಂರಕ್ಷಿಸಬೇಕು. ಅದಕ್ಕಾಗಿ ನಿಯಮಿತವಾಗಿ ಕಾರ್ಯಾಚರಣೆ ನಡೆಸಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ, ಕಾರ್ಯನಿರ್ವಹಣಾಧಿಕಾರಿ ಜಾನಕಿ ರಾಮ್, ಗ್ರಾಮೀಣ ಉದ್ಯೋಗ ಯೋಜನೆಯ ಸಹಾಯಕ ನಿರ್ದೇಶಕ ಬಸವರಾಜ ಉಪಸ್ಥಿತರಿದ್ದರು.

ತಾಲ್ಲೂಕಿನ ದಮ್ಮೂರು, ಏಳುಬೆಂಚಿ, ಎಮ್ಮಿಗನೂರು, ಎತ್ತಿನಬೂದಿಹಾಳು, ಗೆಣಕಿಹಾಳು, ಹೆಚ್‌.ವೀರಾಪುರ ಹಾಗೂ ಹಲಕುಂದಿಯ ಗ್ರಾಮ ಪಂಚಾಯಿತಿ ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.

ಇಂದು: ಕಾರ್ಯಾಗಾರದ ಎರಡನೇ ದಿನವಾದ ಮಂಗಳವಾರ ತಾಲ್ಲೂಕಿನ ಹಂದಿಹಾಳು, ಕಲ್ಲುಕಂಬ, ಕಪ್ಪುಗಲ್ಲು, ಕಾರೇಕಲ್ಲು, ಕೊಳಗಲ್ಲು, ಕೋಳೂರು ಗ್ರಾಮ ಪಂಚಾಯಿತಿಗಳ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT