7

ತೂಕತಪ್ಪಿದ ಮಾತುಗಳಿಗೆ ಬೇಕು ಕಡಿವಾಣ

Published:
Updated:

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳ ಆವೇಶಭರಿತ ಮಾತಿನ ಧಾಟಿ, ಹಾವಭಾವ, ನಡೆನುಡಿ ಎಲ್ಲವೂ ನಾಗರಿಕ ಸಮಾಜ ನಾಚಿಕೆಯಿಂದ ತಲೆತಗ್ಗಿಸುವಂತಿದೆ. ಜೊತೆಗೆ ಪಕ್ಷಾಂತರದ ಅವಾಂತರ ರಾಜ್ಯದ ಘನತೆ-ಗೌರವಗಳನ್ನು ಬೀದಿಪಾಲು ಮಾಡುತ್ತಿದೆ.

ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಪರಿವರ್ತನಾ ರ್‍ಯಾಲಿ, ವಿಕಾಸ ಯಾತ್ರೆ, ಸಭೆ-ಸಮಾರಂಭ, ಗ್ರಾಮ ವಾಸ್ತವ್ಯ, ಇತ್ಯಾದಿಗಳಲ್ಲಿ ರಾಜಕೀಯ ನಾಯಕರು ಎಲುಬಿಲ್ಲದ ನಾಲಿಗೆಯಿಂದ ಆಡುವ ಮಾತುಗಳಿಂದ ಪ್ರೇರಿತರಾಗಿ ಅವರ ಸುತ್ತಮುತ್ತ ನೆರೆದ ಅಭಿಮಾನಿಗಳು ಚಪ್ಪಾಳೆ ತಟ್ಟಿ ಕೇಕೆ ಹಾಕುವುದನ್ನು ಟಿ.ವಿ.ಯಲ್ಲಿ ನೋಡಿದರೆ ‘ಇದೇನಾ ನಮ್ಮ ಸಂಸ್ಕೃತಿ’ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ರಾಜ್ಯದಲ್ಲಿ ಅಧಿಕಾರ ನಡೆಸಿವೆ. ತಮ್ಮ ಆಡಳಿತದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಸಾಧನೆಗಳನ್ನು ಮತದಾರರಿಗೆ ಮನದಟ್ಟು ಮಾಡಿ ಅವರ ಮನ ಗೆದ್ದು ಮತ ಕೇಳುವುದು ಗೌರವದ ಮಾರ್ಗ. ಆದರೆ ಈಗ ನಡೆಯುತ್ತಿರುವುದಾದರೂ ಏನು? ತಾವು ಮಾಡಿದ ಘನ ಕಾರ್ಯಗಳನ್ನು ಜನತೆಗೆ ತಿಳಿಸುವ ಪ್ರಯತ್ನ ಬಿಟ್ಟು ತಮ್ಮ ಸ್ಥಾನಮಾನ ಮರೆತು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ಮುಳುಗಿರುವುದು ನೋವಿನ ಸಂಗತಿ.

ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ‘ಭ್ರಷ್ಟ, ಜೈಲಿಗೆ ಹೋಗಿ ಬಂದವರು, ಬಿ.ಜೆ.ಪಿ.ಯ ಇನ್ನಿಬ್ಬರು ಮಾಜಿ ಮುಖ್ಯಮಂತ್ರಿಗಳು ಸಾಚಾಗಳೇ? ಬಿ.ಜೆ.ಪಿ.ಯಲ್ಲಿ ಭ್ರಷ್ಟಾಚಾರ ಇಲ್ಲವೇ? ದೆಹಲಿಯ ನಾಯಕರ ಮೇಲೆ ಆರೋಪಗಳಿಲ್ಲವೇ?’ ಎಂದು ಪ್ರತ್ಯಾರೋಪ ಮಾಡುವ ಮೂಲಕ ತಮ್ಮ ಸರ್ಕಾರದ ಹಾಗೂ ಸಚಿವರ ಭ್ರಷ್ಟಾಚಾರವನ್ನು  ಸಮರ್ಥಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸಮಂಜಸ?

ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪನವರು, ಮುಖ್ಯಮಂತ್ರಿಗಳ ಸ್ಥಾನಮಾನಕ್ಕೂ ಗೌರವ ಕೊಡದೆ ಮಾತನಾಡುತ್ತಾ ‘ಸಿದ್ದರಾಮಯ್ಯ ರಾಷ್ಟ್ರ ಕಂಡ ಅತ್ಯಂತ ಭ್ರಷ್ಟ ಸಿ.ಎಂ.’ ಎನ್ನುವುದು ಸೂಕ್ತವಲ್ಲ. ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ‘ಸಿದ್ದರಾಮಯ್ಯ ಮೈಯಲ್ಲಿ ಕನಕನ ರಕ್ತದ ಬದಲು ಟಿಪ್ಪುವಿನ ರಕ್ತ ಹರಿಯುತ್ತಿದೆ’ ಎಂದು ಹೇಳುವುದು, ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿಗಳು ‘ಈಶ್ವರಪ್ಪನವರ ಶರೀರದಲ್ಲಿ ಪಿಶಾಚಿ ರಕ್ತ ಹರಿಯುತ್ತಿದೆ’ ಎನ್ನುವುದು, ಹೀಗೆ ಎಲ್ಲರೂ ಲಂಗುಲಗಾಮು ಇಲ್ಲದೆ ಮಾತನಾಡುವುದು, ‘ಮುಖ್ಯಮಂತ್ರಿ ಒಬ್ಬ ಹುಚ್ಚ, ತಲೆತಿರುಕ’ ಎಂದು ಬಿ.ಜೆ.ಪಿ. ನಾಯಕರು ಟೀಕಿಸುವುದು ಅವರಿಗೆ ಶೋಭೆ ತರುವ ವಿಚಾರವಲ್ಲ. ಇದರಂತೆ ಸಿದ್ದರಾಮಯ್ಯನವರು ಕೂಡ ಬಿ.ಜೆ.ಪಿ. ನಾಯಕರ ವಿರುದ್ಧ ಹಾವಭಾವದೊಂದಿಗೆ ಏಕವಚನದಲ್ಲಿ ಮಾತನಾಡುವುದು ಇವೆಲ್ಲ ಮತದಾರರ ಮನಸ್ಸನ್ನು ಕಲುಷಿತಗೊಳಿಸುವ ಪ್ರಯತ್ನ ಹಾಗೂ ಎರಡೂ ಪಕ್ಷಗಳ ನಾಯಕರ ಹತಾಶ ಭಾವನೆಗೆ ಸಾಕ್ಷಿ.

‘ಸಚಿವ ಕೆ.ಜೆ. ಜಾರ್ಜ್ ಮುಖ್ಯಮಂತ್ರಿಗಳ ಎ.ಟಿ.ಎಂ.’ ಎಂದು ಬಿ.ಜೆ.ಪಿ. ಟೀಕಿಸುವುದು, ‘ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಬಿ.ಎಸ್.ವೈ. ಅವರ ಎ.ಟಿ.ಎಂ.’ ಎಂದು ಜಾರ್ಜ್ ಪ್ರತ್ಯಾರೋಪ ಮಾಡುವುದು ನಡೆದಿದೆ. ಎ.ಐ.ಸಿ.ಸಿ. ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಹೆಣ್ಣು ಹುಡುಕಿ ಕೊಡುವುದಾಗಿ ಬಿ.ಜೆ.ಪಿ. ನಾಯಕರು ಗೇಲಿ ಮಾಡಿದರೆ, ಶೋಭಾ ಅವರಿಗೆ ಸೂಕ್ತ ಗಂಡು ಹುಡುಕುವುದಾಗಿ ಕಾಂಗ್ರೆಸ್ ಹೇಳುವುದು ನೋಡುವವರ ಮುಂದೆ ಇಬ್ಬರೂ ನಗೆಪಾಟಲು ಎಂಬುವುದನ್ನು ಮರೆಯಬಾರದು.

ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ಟೀಕಿಸಿದರೆ, ಆರೋಪ ಮಾಡಿದರೆ, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತಕ್ಕ ಉತ್ತರ ನೀಡುವುದು ಆಡಳಿತ ನಡೆಸುವವರ ಜವಾಬ್ದಾರಿ. ಅದನ್ನು ಬಿಟ್ಟು ಏಕವಚನದಲ್ಲಿ ಮಾತನಾಡುತ್ತಾ ಉದ್ಧಟತನದ ಉತ್ತರ ನೀಡುವುದು ಸರಿಯಲ್ಲ. ಬದಲಿಗೆ, ಸರ್ಕಾರದ ಹಗರಣಗಳ ಬಗ್ಗೆ  ದಾಖಲೆಗಳಿದ್ದರೆ ಅದನ್ನು ಬಿ.ಜೆ.ಪಿ. ನಾಯಕರು ಸಾಬೀತುಪಡಿಸಿ  ಕ್ರಮಕ್ಕೆ ಒತ್ತಾಯಿಸಲಿ.

ಬಿ.ಜೆ.ಪಿ. ಹಾಗೂ ಕಾಂಗ್ರೆಸ್ ನಾಯಕರು ಹೀಗೆ ಬಹಿರಂಗವಾಗಿ ಪರಸ್ಪರ  ಅವಾಚ್ಯ ಶಬ್ದಗಳಿಂದ ಬೈದಾಡಿಕೊಳ್ಳುತ್ತಿದ್ದರೆ, ಜೆ.ಡಿ.ಎಸ್. ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಹಾಗೂ ರಾಜ್ಯ ಘಟಕದ ಅಧ್ಯಕ್ಷರಾದ ಕುಮಾರಸ್ವಾಮಿಯವರು ಹದ್ದುಮೀರಿ ಮಾತನಾಡದೆ ಇದುವರೆಗೆ ಮೌನವಾಗಿದ್ದರು. ಆದರೆ ಈಗ  ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ಹಾದಿ ಹಿಡಿದು ‘ಮುಖ್ಯಮಂತ್ರಿಗಳಿಗೆ ಕಾಮನ್‌ಸೆನ್ಸ್ ಇಲ್ಲ, ಸಚಿವ ರಮೇಶ್ ಕುಮಾರ್‌ಗೆ ತಲೆ ಸರಿಯಿಲ್ಲ ಪರೀಕ್ಷೆಗೆ ಒಳಪಡಿಸಬೇಕು’ ಹೀಗೆಲ್ಲ ಟೀಕಿಸುತ್ತಿದ್ದಾರೆ.

ದೇಶದೆಲ್ಲೆಡೆ  ಕರ್ನಾಟಕದ ರಾಜಕೀಯ ಹಾಗೂ ರಾಜಕಾರಣಿಗಳ ಬಗ್ಗೆ ಅಪಾರ ಗೌರವವಿತ್ತು. ಮಾಜಿ ಮುಖ್ಯಮಂತ್ರಿಗಳಾದ ಕೆ.ಸಿ. ರೆಡ್ಡಿ,

ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಹಾಗೂ ಎಸ್.ಎಂ.ಕೃಷ್ಣ ಅವರ ಬಗ್ಗೆ ರಾಜ್ಯ ಮಾತ್ರವಲ್ಲ, ದೇಶದೆಲ್ಲೆಡೆ ಗೌರವವಿದೆ. ಅವರುಗಳ ಮಾತು, ನಡೆ ತೂಕದಿಂದ ಕೂಡಿರುತ್ತಿತ್ತು. ‘ನುಡಿದರೆ ಮುತ್ತಿನ ಹಾರದಂತಿ

ರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು’ ಎನ್ನುವುದು ಈ ಮೇಲಿನ ದಿಗ್ಗಜರಿಗೆ ಅನ್ವಯಿಸುತ್ತದೆ. ಆದರೆ ಏಕಾಏಕಿ ರಾಜಕೀಯ ಇಷ್ಟು ಹೊಲಸಾಗಲು ಕಾರಣವೆಂದರೆ ವರ್ಷಗಳು ಉರುಳಿದಂತೆ ಅಬಕಾರಿ ದೊರೆಗಳು, ಗುತ್ತಿಗೆದಾರರು, ಕಲ್ಲು ಮತ್ತು ಖನಿಜ ಸಂಪತ್ತಿನ ಗಣಿ ಮಾಲಿಕರು, ರಿಯಲ್ ಎಸ್ಟೇಟ್ ದಂಧೆಕೋರರು, ಸುಲಿಗೆಕೋರ ಶಿಕ್ಷಣ ಸಂಸ್ಥೆಗಳ ಮಾಲೀಕರು, ಭ್ರಷ್ಟ ಅಧಿಕಾರಿಗಳು ಹೀಗೆ ಹಣವಂತರೆಲ್ಲ ಸ್ವಾರ್ಥಕ್ಕಾಗಿ ರಾಜಕೀಯಕ್ಕೆ ಬಂದು ರಾಜಕಾರಣವನ್ನು ಹೊಲಸು ಮಾಡಿದ್ದಾರೆ.  ರಾಜಕೀಯಕ್ಕೆ ಬರುತ್ತಿರುವವರ ಮುಖ್ಯ ಉದ್ದೇಶ ಜನಸೇವೆಗಿಂತ ಅಧಿಕಾರ ಪಡೆದುಕೊಳ್ಳುವುದಾಗಿದೆ.  ಹಣದ ವ್ಯಾಮೋಹ ಹಾಗೂ ಭ್ರಷ್ಟಾಚಾರದಿಂದ ಮಾಡಿದ ಸಂಪತ್ತಿನ ರಕ್ಷಣೆಯೇ ಇವರ ಗುರಿ. ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗಾಲಾಗಿರುವ ರೈತ ಸಮುದಾಯ, ಯುವಕರನ್ನು ಕಾಡುತ್ತಿರುವ ನಿರುದ್ಯೋಗ, ಬೆಲೆ ಏರಿಕೆ ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ರಾಜಕೀಯ ಮುಖಂಡರಿಗೆ ಕಾಳಜಿ ಇಲ್ಲ. ಇದರ ಬದಲು ಮುಖ್ಯಮಂತ್ರಿಗಳು ಮಾಂಸ ತಿಂದು ದೇವರ ದರ್ಶನ ಪಡೆದಿದ್ದು, ಟಿಪ್ಪು ಜಯಂತಿ ಬೇಕೇ ಬೇಡವೇ - ಇಂತಹ ಅನಗತ್ಯ ಚರ್ಚೆಗೆ ಕಾರಣವಾಗಿರುವುದು ಶೋಚನೀಯ.

ಮೊದಲೇ ಹೊಲಸಾಗಿರುವ ರಾಜಕೀಯಕ್ಕೆ ತಾ ಮುಂದು ನಾ ಮುಂದು ಎಂದು ನುಗ್ಗುತ್ತಿರುವ ಪಕ್ಷಾಂತರಿಗಳು ಸೃಷ್ಟಿಸುವ ಅವಾಂತರ ಅಷ್ಟಿಷ್ಟಲ್ಲ. ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷದಿಂದ ಪಕ್ಷಕ್ಕೆ ಹಾರುವವರು ಹಾಗೂ ಪಕ್ಷಗಳಿಗೆ ಹೊಸತಾಗಿ ಸೇರ್ಪಡೆಯಾಗತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅವರೆಲ್ಲರೂ ಯಾವುದಾದರೂ ಒಂದು ಪಕ್ಷ ಅಧಿಕಾರಕ್ಕೆ ಬರುವ ಸಂಭವವಿದೆಯೆಂಬ ವಾಸನೆ ಸಿಕ್ಕರೆ ಸಾಕು, ಸಾಲುಕಟ್ಟಿ ನಿಲ್ಲುತ್ತಾರೆ. ಇಂತಹವರಿಗೆ ಮಣೆ ಹಾಕುವ ಮೂಲಕ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವುದರಿಂದ, ಅವರು ತಿರುಗಿ ಬಿದ್ದರೆ ಪಕ್ಷವೇ ಅಧಿಕಾರಕ್ಕೆ ಬರುವುದಿಲ್ಲ ಎಂಬ ಎಚ್ಚರಿಕೆ ಎಲ್ಲಾ ಪಕ್ಷಗಳಿಗೂ ಇರಬೇಕು. ಸದ್ಯದ ತಾಜಾ ನಿದರ್ಶನ ಎಂದರೆ ಮಾಜಿ ಸಚಿವ ಚನ್ನಪಟ್ಟಣದ ಶಾಸಕ ಸಿ.ಪಿ. ಯೋಗೇಶ್ವರ್ ಅವರ ಬಿ.ಜೆ.ಪಿ. ಸೇರ್ಪಡೆ, ಅವರು ಯಾವಯಾವ ಪಕ್ಷದಲ್ಲಿದ್ದರು, ನಂತರ ಹೇಗೆ ಬಣ್ಣ ಬದಲಾಯಿಸಿ ವಿವಿಧ ಪಕ್ಷಗಳಿಗೆ ಸೇರಿ, ಕೊನೆಗೆ ಪಕ್ಷೇತರರಾಗಿ ಗೆದ್ದು, ಅದನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಭವಿಷ್ಯ ರೂಪಿಸಿಕೊಂಡರು ಎಂಬುದನ್ನು ಜನ ಮರೆತಿಲ್ಲ. ಈಗ ಬಿ.ಜೆ.ಪಿ.ಗೆ ಮರಳಿದ್ದಾರೆ. ಇಂತಹವರು ಹಲವಾರು ಮಂದಿ ಇದ್ದಾರೆ. ಇದೊಂದು ನಿದರ್ಶನ ಅಷ್ಟೆ. ಇವರ ಹಿನ್ನೆಲೆ ಗೊತ್ತಿದ್ದೂ, ಮತ್ತೆ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವುದಕ್ಕೆ ಬಿ.ಜೆ.ಪಿ.ಗೆ ಬರ ಬಂದಿದೆಯೇ? ಇಲ್ಲವೇ ಅಧಿಕಾರಕ್ಕೆ ಬರುವುದರಲ್ಲಿ (ಮಿಷನ್ 150) ಅವರಿಗೆ ನಂಬಿಕೆ ಇಲ್ಲವೇ?

ಇವರ ಜೊತೆಗೆ ಹಲವು ಮಂದಿ ನಿವೃತ್ತ ಐ.ಎ.ಎಸ್.- ಐ.ಪಿ.ಎಸ್. ಅಧಿಕಾರಿಗಳು ವಿವಿಧ ಪಕ್ಷಗಳನ್ನು ಸೇರುತ್ತಿರುವುದು ಸಮಾಜಸೇವೆಗಾಗಿ ಅಲ್ಲ. ಅವರು ದಕ್ಷರೂ, ಪ್ರಾಮಾಣಿಕರೂ, ಜನಪ್ರಿಯ ಅಧಿಕಾರಿಗಳೂ ಆಗಿದ್ದರೆ ರಾಜಕೀಯ ಪಕ್ಷಗಳೇ ಅವರನ್ನು ಹುಡುಕಿಕೊಂಡು ಹೋಗಿ ಆಹ್ವಾನಿಸಬೇಕಿತ್ತು. ಆದರೆ ಇಲ್ಲಿ ಅಧಿಕಾರಿಗಳೇ ದುಂಬಾಲು ಬಿದ್ದು ಸಮಾಜಸೇವೆಯ ಹೆಸರಿನಲ್ಲಿ ವಿವಿಧ ಪಕ್ಷಗಳನ್ನು ಸೇರುತ್ತಿರುವ ಉದ್ದೇಶ ಭ್ರಷ್ಟಾಚಾರದ ಮೂಲಕ ಅವರು ಗಳಿಸಿದ್ದನ್ನು ರಕ್ಷಿಸಿಕೊಳ್ಳುವುದೇ ಆಗಿದೆ. ಈ ಹಿಂದೆ ಯಾವುದೇ ಒಬ್ಬ ವ್ಯಕ್ತಿ ರಾಜಕೀಯ ಪಕ್ಷ ಸೇರಿದರೆ, ಕೆಲದಿನಗಳು ಪಕ್ಷದ ಸಂಘಟನೆಗಾಗಿ ದುಡಿದು ಮೇಲೆ ಹಂತ ಹಂತವಾಗಿ ಸ್ಥಾನಮಾನ ನೀಡುವ ಪರಿಪಾಠ ಇತ್ತು. ಈಗ ಎಲ್ಲವೂ ದಿಢೀರ್. ಪಕ್ಷದ ತತ್ವ, ಸಿದ್ಧಾಂತ, ಸಂಘಟನೆ ಹಿನ್ನೆಲೆ ಏನೂ ಗೊತ್ತಿಲ್ಲದ ಇಂತಹವರಿಗೆ ಹಣ, ಜಾತಿ ನೋಡಿ, ಗೆಲ್ಲುವ ಕುದುರೆ ಎಂದು ಹಣೆಪಟ್ಟಿ ಕಟ್ಟಿ, ಟಿಕೆಟ್ ನೀಡುವುದು, ನಿಷ್ಠಾವಂತ ಕಾರ್ಯಕರ್ತರಿಗೆ ಮಾಡುವ ದ್ರೋಹ.

ಲೇಖಕ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಮಾಧ್ಯಮ ಸಲಹೆಗಾರರಾಗಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry