5

ನಕಲಿ ರಸೀದಿ ತಂದು ಸಿಕ್ಕಿಬಿದ್ದರು

Published:
Updated:
ನಕಲಿ ರಸೀದಿ ತಂದು ಸಿಕ್ಕಿಬಿದ್ದರು

ಮೈಸೂರು: ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳಿಗೆ ನೀಡುವ ಕಿಟ್‌ ಪಡೆಯಲು ನಕಲಿ ರಸೀದಿ ಹಿಡಿದು ಬಂದಿದ್ದವರು ನೋಂದಣಿ ಸಮಿತಿಯ ಸ್ವಯಂ ಸೇವಕರಿಗೆ ಸಿಕ್ಕಿಬಿದ್ದಿದ್ದಾರೆ.

ನಕಲಿ ರಸೀದಿ ವಿತರಿಸಿದ ಅನುಮಾನದ ಮೇರೆಗೆ ಕೆ.ಆರ್‌.ನಗರದ ಶಿಕ್ಷಕರೊಬ್ಬರನ್ನು ಲಕ್ಷ್ಮಿಪುರಂ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ಕೃತ್ಯದಲ್ಲಿ ಕೈವಾಡ ಇಲ್ಲ ಎಂಬುದು ಖಚಿತವಾದ ಬಳಿಕ ಬಿಡುಗಡೆ ಮಾಡಲಾಯಿತು.

ಸಾಹಿತ್ಯ ಸಮ್ಮೇಳನಕ್ಕೆ 15 ಸಾವಿರ ಪ್ರತಿನಿಧಿಗಳು ಹೆಸರು ನೋಂದಾಯಿಸಿದ್ದರು. ಈ ಪೈಕಿ ಸಾವಿರಕ್ಕೂ ಹೆಚ್ಚು ಮಂದಿಗೆ ಶುಕ್ರವಾರ ಕಿಟ್‌ ಲಭ್ಯವಾಗಿರಲಿಲ್ಲ. ಉತ್ತಮ ಗುಣಮಟ್ಟದ ಬ್ಯಾಗ್‌, ನೋಟ್‌ ಪುಸ್ತಕ, ಪೆನ್‌ ಹಾಗೂ ಒಒಡಿ ಚೀಟಿ ಇರುವ ಕಿಟ್‌ ಅನ್ನು ಉಳಿದವರಿಗೆ ಶನಿವಾರ ಬೆಳಿಗ್ಗೆ ವಿತರಿಸಲಾಗುತ್ತಿತ್ತು. ಕಿಟ್‌ಗಳು ಖಾಲಿಯಾದರೂ ರಸೀದಿ ಹಿಡಿದು ಕೌಂಟರ್ ಬಳಿ ಬರುತ್ತಿದ್ದವರ ಸಂಖ್ಯೆ ಕಡಿಮೆಯಾಗಲಿಲ್ಲ. ಅನುಮಾನಗೊಂಡ ಸ್ವಯಂಸೇವಕರು ಪರಿಶೀಲಿಸಿದಾಗ ನಕಲಿ ರಸೀದಿ ತಂದಿರುವುದು ಖಚಿತವಾಗಿದೆ.

ರಸೀದಿ ಪರಿಶೀಲಿಸಿದ ನೋಂದಣಿ ಸಮಿತಿ ಇದು ನಕಲಿ ಎಂಬುದನ್ನು ದೃಢಪಡಿಸಿತು. ಆದರೆ, ಇದನ್ನು ಪ್ರತಿನಿಧಿಗಳು ಒಪ್ಪಲು ಸಿದ್ಧರಿರಲಿಲ್ಲ. ‘₹ 250 ಹಣ ನೀಡಿದ್ದೇವೆ. ಕಿಟ್‌ ಕೊಡುವುದಿಲ್ಲ ಎಂದರೆ ಹೇಗೆ’ ಎಂದು ಗಲಾಟೆ ನಡೆಸಿದರು. ಹೀಗಾಗಿ, ಪ್ರಧಾನ ವೇದಿಕೆಯ ಬಲಬದಿಯಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

‘ಕಿಟ್‌ ಪಡೆಯುವ ಉದ್ದೇಶಕ್ಕಾಗಿ ನಕಲಿ ರಸೀದಿಯನ್ನು ಮುದ್ರಣ ಮಾಡಲಾಗಿದೆ. ಕೆಲವು ರಸೀದಿಗಳನ್ನು ಕಲರ್‌ ಜೆರಾಕ್ಸ್‌ ಮಾಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಅವರಿಗೆ ದೂರು ನೀಡಲಾಗಿದೆ’ ಎಂದು ನೋಂದಣಿ ಸಮಿತಿ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry