‘ತಿಪ್ಪರಲಾಗ ಹಾಕಿದರೂ ಅಧಿಕಾರ ಸಿಗುವುದಿಲ್ಲ’

7

‘ತಿಪ್ಪರಲಾಗ ಹಾಕಿದರೂ ಅಧಿಕಾರ ಸಿಗುವುದಿಲ್ಲ’

Published:
Updated:
‘ತಿಪ್ಪರಲಾಗ ಹಾಕಿದರೂ ಅಧಿಕಾರ ಸಿಗುವುದಿಲ್ಲ’

ಗಜೇಂದ್ರಗಡ: ‘ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತೇವೆಂದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಹಗಲು ಕನಸು ಕಾಣುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

ಪಟ್ಟಣದ ಭೂಮರಡ್ಡಿ ಕಾಲೇಜು ಮೈದಾನದಲ್ಲಿ ಗಜೇಂದ್ರಗಡ ತಾಲ್ಲೂಕು ಘೋಷಣೆ ಮತ್ತು ಸುಮಾರು ₹246 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತ ಸಂಘದಿಂದ ಬಂದ ನಾನು ಇಂದಿಗೂ ಹಸಿರು ಶಾಲು ಹಾಕುವುದಿಲ್ಲ. ರೈತರ ಬಗ್ಗೆ ಕಾಳಜಿ ಅರಿಯದ ಯಡಿಯೂರಪ್ಪ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾ ಹಸಿರು ಶಾಲನ್ನು ಹಾಕಿಕೊಂಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ’ ಎಂದರು.

‘ರಾಜ್ಯ ಸರ್ಕಾರ ₹42 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮನ್ನಾ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

‘ಸರ್ಕಾರವು ಡಿ.1ರಿಂದ ಅನಿಲ ಭಾಗ್ಯವನ್ನು ಆರಂಭಿಸಲಿದೆ. ರಾಜ್ಯದಲ್ಲಿ ಸುಮಾರು 300 ಇಂದಿರಾ ಕ್ಯಾಂಟೀನ್‌ಗಳನ್ನು ಜನವರಿ 1ರಿಂದ ಆರಂಭಿಸಲಿದ್ದೇವೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಸರ್ಕಾರ ನಮ್ಮದು’ ಎಂದರು.

ಇಂಧನ ಸಚಿವ ಡಿ.ಕೆ. ಶಿವಕುಮಾರ, ಗ್ರಾಮೀಣ ಅಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ರೋಣ ತಾಲ್ಲೂಕಿನ ಶಾಸಕ ಜಿ.ಎಸ್.ಪಾಟೀಲ ಕಾರ್ಯಕ್ರಮದಲ್ಲಿ ಮಾತನಾಡಿದರು.

ನರಗುಂದ ಶಾಸಕ ಬಿ.ಆರ್.ಯಾವಗಲ್ಲ, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಗಡ್ಡದೇವರಮಠ, ಮಾಜಿ ಸಂಸದ ಐ.ಜಿ. ಸನದಿ, ಹಿರಿಯ ಮುಖಂಡರಾದ ಆರ್.ಎಸ್. ಪಾಟೀಲ, ವೀರಣ್ಣ ಮತ್ತಿಕಟ್ಟಿ, ಗದಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry