7

ಒಂದು ವಾರ ಮಳೆ ಸಾಧ್ಯತೆ ಇಲ್ಲ; ಭತ್ತ, ರಾಗಿ ಕಟಾವು ಮುಂದುವರಿಸಿ

Published:
Updated:

ಮೈಸೂರು: ಜಿಲ್ಲೆಯಲ್ಲಿ ನ. 29ರಿಂದ ಡಿ. 3ರವರೆಗೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಆದರೆ, ಮಳೆಯಾಗುವ ಸಾಧ್ಯತೆ ಇಲ್ಲ. ಹೀಗಾಗಿ, ರಾಗಿ ಹಾಗೂ ಭತ್ತದ ಕಟಾವು ಕೆಲಸವನ್ನು ಮುಂದುವರಿಸಬಹುದು. ಅಲ್ಲದೇ, ಕೋಳಿ ಹಾಗೂ ರೇಷ್ಮೆ ಸಾಕಣೆ ಕೇಂದ್ರದಲ್ಲಿ ಉಷ್ಣಾಂಶವನ್ನು ಕಾಪಾ ಡಿಕೊಳ್ಳಬೇಕು ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಾರದಲ್ಲಿ ವಿವಿಧ ಬೆಳೆಗಳಿಗೆ ರೋಗ ಹಾಗೂ ಕೀಟಬಾಧೆ ತಗುಲುವ ಸಾಧ್ಯತೆ ಇದ್ದು, ಇದರ ನಿಯಂತ್ರಣಕ್ಕಾಗಿ ರೈತರಿಗೆ ಸಲಹೆ ನೀಡಲಾಗಿದೆ. ಟೊಮೆಟೊ ಮತ್ತು ದೊಡ್ಡ ಮೆಣಸಿನಕಾಯಿ ಬೆಳೆಗೆ ಹಣ್ಣು ಕೊಳೆರೋಗ ಬರುವ ಸಾಧ್ಯತೆ ಹೆಚ್ಚು. ಇದರ ನಿಯಂತ್ರಣಕ್ಕೆ ಇಂಡೊಫಿಲ್‌ ಎಂ–45 ಔಷಧಿಯನ್ನು ಒಂದು ಲೀಟರ್‌ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಅದೇ ರೀತಿ, ಬದನೆ ಬೆಳೆಗೆ ಟೊಂಗೆ ಮತ್ತು ಕಾಯಿ ಕೊರಕ ಹುಳುಬಾಧೆ ಸಾಧ್ಯತೆ ಇದೆ.

ಇದರ ನಿಯಂತ್ರಣಕ್ಕೆ ಒಣಗಿದ ಟೊಂಗೆಯನ್ನು ಹುಳುವಿನ ಸಮೇತ ಕಿತ್ತು ನಾಶಪಡಿಸಬೇಕು. ನಂತರ ಪ್ರತಿ ಲೀಟರ್‌ ನೀರಿಗೆ 0.6 ಗ್ರಾಂ ಇಮಿಡೊಕ್ಲೋಪ್ರಿಡ್‌ ಅಥವಾ ಸಿಂಬಿಸಿಡಿನ್‌ 5 ಮಿ.ಲೀ. ಔಷಧಿ ಬೆರೆಸಿ ಸಿಂಪಡಿಸಬೇಕು. ಭತ್ತಕ್ಕೆ ಅಂಟಿಕೊಂಡ ಸೈನಿಕ ಹುಳು ಬಾಧೆಯಿಂದ ಪಾರಾಗಲು, 2 ಮಿ.ಲೀ. ಕ್ಲೋರೋಫೈರಿಫಸ್‌ ಔಷಧಿಯನ್ನು ಒಂದು ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ಮೊ: 8095227713 ಸಂಪರ್ಕಿಸಲು ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry