7

ಹೆಲ್ಮೆಟ್ ಜಾಗೃತಿ ಮೂಡಿಸಲು ಬಂದ ಯಮ!

Published:
Updated:
ಹೆಲ್ಮೆಟ್ ಜಾಗೃತಿ ಮೂಡಿಸಲು ಬಂದ ಯಮ!

ಕಲಬುರ್ಗಿ: ‘ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಿ. ಇಲ್ಲವಾದರೆ ನನ್ನ ಜತೆ ಯಮಲೋಕಕ್ಕೆ ಬನ್ನಿ..! ಹೀಗೆಂದು ಹೇಳಿದ್ದು ಬೇರೆ ಯಾರೂ ಅಲ್ಲ, ಸ್ವತಃ ಯಮ. ಸಾರ್ವಜನಿಕರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸರು ಕೈಗೊಂಡಿರುವ ಹೊಸ ಉಪಾಯಗಳಲ್ಲಿ ಇದೂ ಒಂದು. ಕಲಾವಿದ ರೇವಣಸಿದ್ದಯ್ಯ ಹಿರೇಮಠ ಅವರಿಗೆ ಯಮನ ವೇಷ ಹಾಕಿಸಿದ ಪೊಲೀಸರು ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಸೂಪರ್ ಮಾರ್ಕೆಟ್ ಮತ್ತು ಶರಣಬಸವೇಶ್ವರ ದೇವಸ್ಥಾನದ ಬಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಎಲ್ಲಕ್ಕೂ ತಲೆ ಮುಖ್ಯ. ಅಪಘಾತವಾದಾಗ ಕೈ, ಕಾಲು ಮುರಿಯುವುದು ಒಂದೆಡೆಯಾದರೆ ತಲೆಗೆ ಪೆಟ್ಟು ಬೀಳುವುದು ಸಾಮಾನ್ಯ. ದೇಹದ ಯಾವುದೇ ಅಂಗಗಳಿಗೆ ಪೆಟ್ಟಾದರೂ ಬದುಕಬಹುದು. ಆದರೆ ತಲೆಗೆ ಪೆಟ್ಟಾದರೆ ಜೀವಹಾನಿ ಸಂಭವಿಸುತ್ತದೆ. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಮನವಿ ಮಾಡಿದರು.

‘ನನ್ನ ಜತೆ ಬರಲು ನಿಮಗೆ ಇಷ್ಟವೇ?’ ಎಂದು ರೇವಣಸಿದ್ದಯ್ಯ ಪ್ರಶ್ನಿಸಿದರೆ, ‘ಇಲ್ಲ, ಬರಲು ಇಷ್ಟವಿಲ್ಲ’ ಎಂದು ವಾಹನ ಸವಾರರು ನಗುತ್ತಲೇ ಉತ್ತರಿಸಿದರು. ‘ಗಡಿಬಿಡಿಯಲ್ಲಿ ಹೆಲ್ಮೆಟ್‌ ಮನೆಯಲ್ಲಿ ಬಿಟ್ಟು ಬಂದಿದ್ದೇನೆ’, ಮನೆ ಸಮೀಪ ಇರುವುದರಿಂದ ಹೆಲ್ಮೆಟ್ ಧರಿಸಿಲ್ಲ’, ‘ನೆನಪಾಗಿಲ್ಲ’ ಎಂದು ಸವಾರರು ಉತ್ತರಿಸಿದರು. ಅಷ್ಟೇ ಅಲ್ಲ ಹೆಲ್ಮೆಟ್ ಖರೀದಿಸುವ ವಾಗ್ದಾನ ಮಾಡಿದರು.

ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ಅವರು ಸುಗಮ ಮತ್ತು ಸುರಕ್ಷತಾ ಸಂಚಾರ ಜಾಗೃತಿಗಾಗಿ ನ.24ರಿಂದ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಹೆಲ್ಮೆಟ್, ಸೀಟ್ ಬೆಲ್ಟ್ ಮತ್ತು ಆಟೊ ಚಾಲಕರಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸಿದ್ದಾರೆ.ನಿಯಮ ಉಲ್ಲಂಘಿಸುವ ಸವಾರರಿಗೆ ದಂಡ ವಿಧಿಸಲಾಗುತ್ತಿದೆ.

ರೇವಣಸಿದ್ದಯ್ಯ ಸ್ವಾಮಿ ಅವರು ಬೀದರ್ ಜಿಲ್ಲೆ ಹುಮನಾಬಾದ್‌ನವರು. ಅಂಜನಾದೇವಿ ಕಾಲೇಜಿನಲ್ಲಿ ಬಿ.ಇಡಿ ಓದುತ್ತಿದ್ದಾರೆ. ಕೆಲಸದ ನಿಮಿತ್ತ ಸೋಮವಾರ ಕಲಬುರ್ಗಿಗೆ ಬಂದಿದ್ದ ಅವರು ಪೊಲೀಸರ ಕಠಿಣ ಕ್ರಮ ನೋಡಿ ವಾಹನ ಸವಾರರಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸಲು ಮುಂದಾದರು.

‘ಅಪಘಾತ ಎಲ್ಲಿ, ಯಾವಾಗ ಮತ್ತು ಹೇಗೆ ಸಂಭವಿಸುತ್ತವೆ ಎಂಬುದು ಗೊತ್ತಾಗದು. ಹೆಲ್ಮೆಟ್ ಒಡೆದರೆ ಮತ್ತೆ ಖರೀದಿಸಬಹುದು. ಆದರೆ, ತಲೆಯೇ ಒಡೆದರೆ ಜೀವ ಉಳಿಯುವುದಿಲ್ಲ. ಮನೆಯಲ್ಲಿ ಅಪ್ಪ, ಅಮ್ಮ, ಮಕ್ಕಳು, ಸಂಬಂಧಿಕರು ಕಾಯುತ್ತಿರುತ್ತಾರೆ. ಅವರಿಗೆ ಉತ್ತರ ನೀಡುವವರು ಯಾರು?’ ಎಂದು ಪ್ರಶ್ನಿಸುತ್ತಾರೆ ಕಲಾವಿದ ರೇವಣಸಿದ್ದಸ್ವಾಮಿ.

ಕಲಬುರ್ಗಿಯಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯೋಗ ಮಾಡಿರುವೆ. ಬೀದರ್, ರಾಯಚೂರು, ಯಾದಗಿರಿ ಸೇರಿ ರಾಜ್ಯದ ಯಾವುದೇ ಜಿಲ್ಲೆಗೆ ಕರೆದರೂ ಸ್ವಯಂ ಪ್ರೇರಣೆಯಿಂದ ತೆರಳಿ ಸಂಚಾರ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸುತ್ತೇನೆ’ ಎಂದು ಖುಷಿಯಿಂದಲೇ ಹೇಳುತ್ತಾರೆ.

‘ರೇವಣಸಿದ್ದಯ್ಯ ಅವರು ವಾಹನ ಸವಾರರಿಗೆ ತಿಳಿವಳಿಕೆ ನೀಡಲು ಪೊಲೀಸರ ಜೊತೆ ಸಾಥ್‌ ನೀಡಿದ್ದಾರೆ. ಅಪಘಾತವಾದಾಗ ತಲೆಗೆ ಪೆಟ್ಟು ಬಿದ್ದರೆ ಸಾವು ಸಂಭವಿಸುತ್ತದೆ. ಸುರಕ್ಷಿತ ಸಂಚಾರ ವ್ಯವಸ್ಥೆಗೆ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಹೆಚ್ಚುವರಿ ಸಂಚಾರ ಠಾಣೆ ಪಿಎಸ್‌ಐ ಭಾರತಿ ಎಂ.ಧನ್ನಿ ಹೇಳಿದರು.

* * 

ಯಮನ ವೇಷದಲ್ಲಿ ಜಾಗೃತಿ ಮೂಡಿಸುವೆ ಎಂದು ಎಸ್‌ಪಿ ಮತ್ತು ಐಜಿಪಿ ಅವರಲ್ಲಿ ಮನವಿ ಮಾಡಿದೆ. ಅವರು ಒಪ್ಪಿಗೆ ನೀಡಿದರು.

ರೇವಣಸಿದ್ದಯ್ಯ ಸ್ವಾಮಿ ಹಿರೇಮಠ ಯಮಧರ್ಮನ ವೇಷದಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry