ಶುಕ್ರವಾರ, ಮಾರ್ಚ್ 5, 2021
27 °C

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

‌ಸಾಂತೇನಹಳ್ಳಿ ಕಾಂತರಾಜ್‌ Updated:

ಅಕ್ಷರ ಗಾತ್ರ : | |

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಬಂಗಾರಪೇಟೆ: ಕುಬ್ಜರಾಗಿದ್ದರೂ ಏನನ್ನಾದರು ಸಾಧಿಸಲೇ ಬೇಕು ಎನ್ನುವ ಛಲದಿಂದ ತನ್ನ ಅಂಗವಿಕಲತೆ ಮೆಟ್ಟಿನಿಂತಿರುವ ತಾಲ್ಲೂಕಿನ ಕದರೀಪುರ ಗ್ರಾಮದ ಎನ್.ನಾಗೇಶ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.

ಕದರೀಪುರ ಗ್ರಾಮದ ನಾರಾಯಣಪ್ಪ, ಶಾಂತಮ್ಮ ದಂಪತಿಯ ಮಗನಾದ ಈತ ಆರ್ಥಿಕ ಸಂಕಷ್ಟದಲ್ಲಿಯೂ ದ್ವಿತೀಯ ಪಿಯುಸಿ ಮುಗಿಸಿದ್ದಾರೆ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಯಂ ಸೇವಕ ಶಿಕ್ಷಕರಾಗಿ ಕೆಲಸ ನಿರ್ವಹಿಸಿದ್ದಾರೆ. ಜತೆಗೆ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಿ, ಕೋರಿಕೆ ಮೇರೆಗೆ ಕೆಲ ಶಾಲೆಗಳಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ.

ಕ್ರೀಡೆ, ನೃತ್ಯ, ಹಾಡುಗಾರಿಕೆ ಸೇರಿದಂತೆ ವಿವಿಧ ಕಲೆ ಮೈಗೂಡಿಸಿಕೊಂಡಿರುವ ನಾಗೇಶ್ ಬಹುಮುಖ ಪ್ರತಿಭೆ ಉಳ್ಳವರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಮಾರು 30ಕ್ಕಿಂತ ಹೆಚ್ಚು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

3.4ಅಡಿ ಎತ್ತರ ಹೊಂದಿರುವ ನಾಗೇಶ್ ಅವರಿಗೆ ಈಗ 33 ವರ್ಷ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ 4 ಬಾರಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾರತದ ಪತಾಕೆ ಹಾರಿಸಿರುವುದು ವಿಶೇಷ.

ಕಳೆದ ಆಗಸ್ಟ್‌ನಲ್ಲಿ ಕೆನಡಾ ದೇಶದಲ್ಲಿ ನಡೆದ ವಿಶ್ವ ಕುಬ್ಜರ ಕ್ರೀಡಾಕೂಟದ ಚಕ್ರ ಎಸೆತದಲ್ಲಿ ಚಿನ್ನದ ಪದಕ, ಗುಂಡು ಮತ್ತು ಜಾವಲಿನ್ ಎಸೆತದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಬೆಂಗಳೂರಿನಲ್ಲಿ 2015ರಲ್ಲಿ ಭಾರತೀಯ ಕುಬ್ಜರ ಫೆಡರೇಶನ್ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಜಾವಲಿನ್ ಮತ್ತು ಗುಂಡು ಎಸೆತದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಚನೈನಲ್ಲಿ 2008ರಲ್ಲಿ ಸವಾಲಿನ ಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರಥಮ ಅಂತರರಾಷ್ಟ್ರೀಯ ಮಟ್ಟದ ಪ್ರತಿಭೆ ಪ್ರದರ್ಶನ ಮತ್ತು ಕ್ರೀಡಾಕೂಟದ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಮೊದಲನೇ ಸ್ಥಾನ ಹಾಗೂ ಅದೇ ವರ್ಷ ಬೆಂಗಳೂರಿನಲ್ಲಿ ನಡೆದ ಏಷಿಯನ್ ಪ್ಯಾರಾಲಿಂಪಿಕ್ ಕಪ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

2006ರಲ್ಲಿ ಅಂಗವಿಕಲರಿಗಾಗಿ ಏರ್ಪಡಿಸಿದ್ದ 8ನೇ ಸೀನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್ ಕ್ರೀಡಾಕೂಟದ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ, 2012ರಲ್ಲಿ ಬಳ್ಳಾರಿಯಲ್ಲಿ ನಡೆದ 3ನೇ ದಕ್ಷಣ ವಲಯ ಅಥ್ಲೆಟಿಕ್ ಕ್ರೀಡಾಕೂಟದ ಚಕ್ರ ಎಸೆತದಲ್ಲಿ ಮೊದಲನೇ ಸ್ಥಾನ, ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಏಳನೇ ರಾಷ್ಟೀಯ ಕ್ರೀಡಾಕೂಟದ ಅಂಗವಿಕಲರ ಓಟದಲ್ಲಿ 2ನೇ ಸ್ಥಾನ ಪಡೆದಿರುವುದು ಇವರ ಪ್ರತಿಭೆಗೆ ಸಾಟಿ.

‘ಸಾಧನೆಗೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಿದೆ. ಸರ್ಕಾರ ಹಾಗೂ ಸಮಾಜ ಕೂಡ ತನ್ನನ್ನು ನಿರ್ಲಕ್ಷಿಸಿದೆ. ಕುಬ್ಜರ ಕ್ರೀಡಾಕೂಟದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರೂ ಸ್ಥಳೀಯವಾಗಿ ತನ್ನನ್ನು ಗುರುತಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ನಾಗೇಶ್‌.

ಅಂಗವಿಕಲರಾದರೂ ಸ್ವಂತ ದುಡಿಮೆಯಿಂದ ಜೀವನ ಸಾಗಿಸಬೇಕು. ಕೀಳರಿಮೆ ತೊರೆದು ಇತರ ಅಂಗವಿಕಲರಿಗೆ ಮಾದರಿಯಾಗಬೇಕು ಎನ್ನುವುದು ನಾಗೇಶ್ ಅವರ ಆಶಯದ ನುಡಿ.

ಬಹುಮುಖ ಪ್ರತಿಭೆ

ಕ್ರೀಡೆ ಅಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಇವರ ಪ್ರತಿಭೆ ಅರಳಿದೆ. 2010ರಲ್ಲಿ ರೋಟರಿ ಕ್ಲಬ್ ಆಯೋಜಿಸಿದ್ದ ‘ನ್ಯಾಷನಲ್ ಫೆಡರೇಷನ್ ಫಾರ್ ಡಿಫೆರೆಂಟ್ಲಿ ಏಬಲ್ಡ್’ ಕ್ರೀಡಾಕೂಟದಲ್ಲಿ ಆಯೋಜಿಸಿದ್ದ ನೃತ್ಯದಲ್ಲಿ ಮೊದನೇ ಸ್ಥಾನ ಪಡೆದಿದ್ದಾರೆ. 2012ರಲ್ಲಿ ಬಳ್ಳಾರಿಯಲ್ಲಿ ನಡೆದ 3ನೇ ದಕ್ಷಿಣ ವಲಯ ಅಥ್ಲೆಟಿಕ್ ಕ್ರೀಡೆಗಳಲ್ಲಿ ಆಯೋಜಿಸಿದ್ದ ಏಕಪಾತ್ರಾಭಿನಯದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಇಷ್ಟಾದರೂ ಇನ್ನೂ ಹೆಚ್ಚಿನ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎನ್ನುವ ಆಕಾಂಕ್ಷೆ ಇದೆ ಎನ್ನುತ್ತಾರೆ ನಾಗೇಶ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.