ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ವಚನಧರ್ಮ

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ವರ್ಣಭೇದವೆಂದರೆ ಕಪ್ಪು-ಬಿಳುಪಿನ ಮೈ ಬಣ್ಣಕ್ಕೆ ಸಂಬಂಧಿಸಿದ್ದು. ಆದರೆ ಇಂಡಿಯಾದ ಸಂದರ್ಭದಲ್ಲಿ ವರ್ಣನೀತಿ ಹುಟ್ಟಿನ ಮೂಲಕ್ಕೆ ಸಂಬಂಧಿಸಿದ್ದು. ಸ್ಪೃಶ್ಯ-ಅಸ್ಪೃಶ್ಯ ಎಂಬ ಅಮಾನವೀಯ ಅಸಹ್ಯದಿಂದ ಕೂಡಿರುವುದು. ಜಾತಿವ್ಯವಸ್ಥೆಗೆ ಕಾರಣಮೂಲ ಈ ವರ್ಣವ್ಯವಸ್ಥೆ.

ಇಂಥ ಅಸಹ್ಯದ ವಿರುದ್ಧ ನಡೆದ ಹೋರಾಟಗಳು ಪರ್ಯಾಯವನ್ನು ಹುಟ್ಟು ಹಾಕಿವೆ. ಆದರೆ ಆ ಪರ್ಯಾಯಗಳು ಬೆಳೆಯಬಾರದೆಂದು ಹವಣಿಸಿದ ವರ್ಣವ್ಯವಸ್ಥೆ ಎರಡು ರೀತಿಯಲ್ಲಿ ಅವುಗಳ ವಿರುದ್ಧ ಷಡ್ಯಂತ್ರಗಳನ್ನು ರೂಪಿಸಿದೆ. ಒಂದು, ಅಂಥ ಪರ್ಯಾಯವನ್ನು ಈ ದೇಶದಿಂದಲೇ ಓಡಿಸುವುದು. ಇದಕ್ಕೆ ಬೌದ್ಧಧರ್ಮ ಉದಾಹರಣೆ. ಇನ್ನೊಂದು, ಆ ಪರ್ಯಾಯ ತನ್ನದೇ ಭಾಗವೆಂದು ಅದನ್ನು ವೈದಿಕೀರಣಗೊಳಿಸುವುದು. ಇದಕ್ಕೆ ವಚನ ಧರ್ಮ ಅರ್ಥಾತ್ ಲಿಂಗಾಯತ ಧರ್ಮ ಬಹಳ ದೊಡ್ಡ ಉದಾಹರಣೆ. ಆದರೆ ಇಡೀ ವಚನ ಸಂಸ್ಕೃತಿಯೇ ವೈದಿಕ ವಿರೋಧಿ ನಿಲುವಿನಲ್ಲಿ ಅರಳಿದ್ದು. ಶರಣ ವೀರಶಂಕರದಾಸಯ್ಯಗಳ ದೀರ್ಘವಚನದೊಳಗಿನ ಕೆಲವು ಸಾಲುಗಳು ಇಂತಿವೆ:

ಶಿವ ಶಿವಾ ದ್ವಿಜರೆಂಬ ನೀವು ಕೇಳಿ ಭೋ
ನೀವು ಎಲ್ಲಾ ಜಾತಿಗೂ ನಾವೇ ಮಿಗಿಲೆಂದು
ವರ್ಣಾನಾಂ ಬ್ರಾಹ್ಮಣೋ ಗುರುಃ ಎಂದು
ಬಳ್ಳಿಟ್ಟು ಬಾಸ್ಕಳ ಗೆಡುವುತ್ತಿಪ್ಪಿರಿ ನೋಡಾ
’ಆದಿ ಬಿಂದುದ್ಭವೇ ಬೀಜಂ’ ಎಂಬ ಶ್ರುತಿಯಿಂ ತಿಳಿದು ನೋಡಲು
ಆದಿಯಲ್ಲಿ ನಿಮ್ಮ ಮಾತಾಪಿತರ ಕೀವು ರಕ್ತದ ಮಿಶ್ರದಿಂದ
ನಿಮ್ಮ ಪಿಂಡ ಉದಯಿಸಿತ್ತು, ಆ ಕೀವು ರಕ್ತಕ್ಕೆ ಆವ ಕುಲ ಹೇಳಿರೆ?
ಮೇಲು ಜಾತಿಯ ದೇಹದೊಳಗೆ ಹಾಲು ಉಳ್ಳಡೆ
ಕೀಳು ಜಾತಿಯ ದೇಹದೊಳಗೆ ರಕ್ತ ಉಳ್ಳಡೆ ಅದು ಕುಲವಹುದು
ಅಂಥಾ ಗುಣ ನಿಮಗಿಲ್ಲವಾಗಿ ಎಲ್ಲಾ ಜೀವರಾಶಿಯ ದೇಹವೂ
ನಿಮ್ಮ ದೇಹವೂ ಸಮಾನವಾದ ಕಾರಣ ನಿಮಗೆ ಕುಲವಿಲ್ಲ.
ಅಣೋರಣೀಯಾನ್ ಮಹತೋ ಮಹೀಯಾನ್ ಎಂಬುದ ನೀವೇ ಓದಿ
ಪ್ರಾಣಿಯಂಕೊಂದು ಯಾಗವನಿಕ್ಕಿ
ದೇವರ್ಕಳುಗಳಿಗೆ ಹೋಮದ ಹೊಗೆಯಂ ತೋರಿ
ಕೊಬ್ಬುಬೆಳೆದ ಸವಿಯುಳ್ಳ ಖಂಡವನೆ ತಿಂದು
ಸೋಮಪಾನವೆಂಬ ಸುರೆಯನೆ ಕುಡಿದು
ನೀವೇ ಪಂಚ ಮಹಾಪಾತಕರು.
ನಿಮ್ಮಿಂದ ಏಳು ಬೇಲಿ ಹೊರಗಾದ ಹೊಲೆಯನೆ
ಉತ್ತಮ ಕುಲಜನೆಂದು ಮುಂಡಿಗೆಯ ಹಾಕಿದೆನು
ಎತ್ತಿರೋ ಸತ್ಯವುಳ್ಳಡೆ ?
ಎಂದು ಸವಾಲು ಹಾಕಿ ಉದ್ಘೋಷಿಸುತ್ತಾನೆ. ಈ ವಚನ ವೈದಿಕ ವಿರೋಧಿ ನಿಲುವಿನ ವಚನ ಎಂದು ಕಡೆಗಣಿಸುವಂತಿಲ್ಲ. ಲಿಂಗಾಯತ ಧರ್ಮದ ಜೀವನ ದೃಷ್ಠಿಯನ್ನು ಇಡೀ ವಚನ ಅಧ್ಯಾಹಾರ ಭಾವದಲ್ಲಿ ಅಂತರ್ಗತಗೊಳಿಸಿಕೊಂಡು ಮಾತಾಡಿದೆ. ಮಾನವ ಕುಲವನ್ನು ಹಲವು ಜಾತಿಗಳಾಗಿ ಒಡೆದು ಸ್ವಾರ್ಥ ಸಾಧಿಸಿಕೊಳ್ಳುತ್ತಿರುವ ವೈದಿಕ ವಿದ್ಯಮಾನವನ್ನು, ಅದರ ಹುನ್ನಾರದ ನಿಲುವನ್ನು ನಿಷ್ಠುರವಾಗಿ ತರಾಟೆಗೆ ತೆಗೆದುಕೊಂಡಿದೆ. ಅಷ್ಟೇ ಅಲ್ಲ ಲಿಂಗಾಯತವೆಂಬುದು ಎಂದಿಗೂ ವೈದಿಕಕ್ಕೆ ಪರ್ಯಾಯವೇ ಹೊರತು ವೈದಿಕದ ಭಾಗವಲ್ಲ ಎಂಬ ಸತ್ಯವನ್ನು ಸೂರ್ಯಪ್ರಕಾಶಿತ ಭಾವದಲ್ಲಿ ಸ್ಪಷ್ಟಪಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT