ಶುಕ್ರವಾರ, ಫೆಬ್ರವರಿ 26, 2021
30 °C

29 ಕಡೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

29 ಕಡೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ದಾವಣಗೆರೆ: ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮೊದಲ ಹಂತದಲ್ಲಿ 29 ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದೆ. ಶೀಘ್ರವೇ ಮುಖ್ಯರಸ್ತೆಗೆ ಸಂಪರ್ಕ ಕಲ್ಲಿಸುವ ಎಲ್ಲ ವೃತ್ತಗಳಲ್ಲೂ ಹಾಕಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ಸಿಸಿಟಿವಿ ಕಣ್ಗಾವಲು ನಿರ್ವಹಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನಗರ ಶಾಂತಿಯುತವಾಗಿರಬೇಕು. ಅಪರಾಧ ಕೃತ್ಯಗಳಿಗೆ ತಡೆ ಬೀಳಬೇಕು ಎಂಬ ಉದ್ದೇಶದಿಂದ 1000 ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಯೋಜನೆ ಜಾರಿಗೊಳಿಸಲಾಗುವುದು’ ಎಂದರು.

ಪೊಲೀಸ್‌ ಇಲಾಖೆ ಹಿಂದೆ, ₹3.5 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿತ್ತು. ಪಾಲಿಕೆ ಕೂಡ ಅನುದಾನ ನೀಡಲು ಒಪ್ಪಿಗೆ ನೀಡಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆ ಅನುದಾನ ಬಳಸಲು ಅವಕಾಶ ನೀಡಲಿಲ್ಲ. ಈಗ ₹1 ಕೋಟಿ ನೀಡಲಾಗಿದೆ. ಅಗತ್ಯಬಿದ್ದರೆ ಹೆಚ್ಚಿನ ಅನುದಾನ ನೀಡುವುದಾಗಿ ಸಚಿವರು ಭರವಸೆ ನೀಡಿದರು.

ನಗರದಲ್ಲಿ ರಸ್ತೆ, ಒಳಚರಂಡಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಬರದಿಂದ ಸಾಗಿವೆ. ₹ 560 ಕೋಟಿ ವೆಚ್ಚದಲ್ಲಿ ‘ಜಲಸಿರಿ’ ಯೋಜನೆಯೂ ಶೀಘ್ರ ಅನುಷ್ಠಾನಕ್ಕೆ ಬರಲಿದೆ. 3 ವರ್ಷಗಳ ಅವಧಿಯಲ್ಲಿ ₹ 3,000 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ. ಸ್ಮಾರ್ಟ್‌ಸಿಟಿ ಕಾಮಗಾರಿ ಆರಂಭವಾದರೆ, ನಗರ ಸುಂದರವಾಗಿ ಕಂಗೊಳಿಸಲಿದೆ ಎಂದರು.

ನಗರ ಬೆಳೆಯುತ್ತಿದ್ದು, ಸಂಚಾರ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌.ಗುಳೇದ ಮಾತನಾಡಿ, ‘ನಗರಕ್ಕೆ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಬೇಕು ಎಂಬ ಬಹುದಿನಗಳ ಬೇಡಿಕೆ, ಸಚಿವರ ಸಹಕಾರದಿಂದ ಕಾರ್ಯಗತವಾಗಿದೆ. ₹ 1 ಕೋಟಿ ಅನುದಾನದಲ್ಲಿ ಸದ್ಯ ₹ 47.73 ಲಕ್ಷ ವೆಚ್ಚಾಗಿದ್ದು, 7 ಕಡೆಗಳಲ್ಲಿ 29 ಕ್ಯಾಮೆರಾ ಅಳವಡಿಸಲಾಗಿದೆ’ ಎಂದರು.

₹ 9.5 ಲಕ್ಷ ಅನುದಾನ ಬಳಸಿಕೊಂಡು ಟ್ರಾಫಿಕ್‌ ಆಟೊಮೆಟೆಡ್‌ ಚಲನಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ₹ 4.80 ಲಕ್ಷ ವೆಚ್ಚದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲು ಟೆಂಡರ್ ಕರೆಯಲಾಗಿದೆ. ₹ 28 ಲಕ್ಷ ವೆಚ್ಚದಲ್ಲಿ ಸೈನ್‌ ಬೋರ್ಡ್ಸ್‌, ಮಿರರ್‌, ಸೋಲಾರ್‌ ಬ್ಲಿಂಕರ್ಸ್‌ಗಳನ್ನು ಹಾಕಲಾಗುವುದು. ಮತ್ತಷ್ಟು ಅನುದಾನ ದೊರೆತರೆ ‘ಸ್ಮಾರ್ಟ್‌’ ಸಂಚಾರ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು ಎಂದರು.

ಪೂರ್ವವಲಯ ಐಜಿಪಿ ಡಾ.ಎಂ.ಎ.ಸಲೀಂ ಮಾತನಾಡಿ, ಆಧುನಿಕ ನಗರಕ್ಕೆ ಅತ್ಯುತ್ತಮ ಸಂಚಾರ ವ್ಯವಸ್ಥೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಬೆಂಗಳೂರು ಹಾಗೂ ಮೈಸೂರು ಮಾದರಿಯನ್ನು ದಾವಣಗೆರೆಯಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.

‘ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 16 ನಂಬರ್‌ಪ್ಲೇಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳು 60ರಿಂದ 70 ಕಿ.ಮೀ ವೇಗದಲ್ಲಿ ಚಲಿಸಿದರೂ ನಂಬರ್‌ಗಳನ್ನು ಸೆರೆಹಿಡಿಯುವಂತಹ ಸಾಮರ್ಥ್ಯವನ್ನು ಈ ಕ್ಯಾಮೆರಾಗಳು ಹೊಂದಿರುತ್ತವೆ ಎಂದು ಎಸ್‌ಪಿ ತಿಳಿಸಿದರು.

ಜತೆಗೆ, ಕಳುವಾದ ವಾಹನಗಳ ನೋಂದಣಿ ಸಂಖ್ಯೆಯನ್ನು ನೂತನ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್‌ ಮಾಡಿದರೆ, ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ ಯಾವ ಭಾಗದಲ್ಲಾದರೂ ಕಳುವಾದ ವಾಹನ ಸಂಚರಿಸಿದರೆ ಕೂಡಲೇ ಸಂದೇಶ ರವಾನೆಯಾಗುತ್ತದೆ ಎಂದರು.

13 ಕಡೆ 4 ‘ಕೆ’ ಟೆಕ್ನಾಲಜಿಯ ಕ್ಯಾಮೆರಾ ಅಳವಡಿಸಲಾಗಿದ್ದು, ಅತ್ಯಂತ ಸ್ಪಷ್ಟವಾಗಿ ಚಿತ್ರಗಳನ್ನು ಸೆರೆ ಹಿಡಿಯಬಹುದು. ಅಪರಾಧಿಗಳನ್ನು ಕಂಡುಹಿಡಿಯಲು ಈ ಕ್ಯಾಮೆರಾಗಳು ಹೆಚ್ಚು ಸಹಕಾರಿ ಎಂದು ಎಸ್‌ಪಿ ಮಾಹಿತಿ ನೀಡಿದರು.

* * 

ಅಪರಾಧ ಕೃತ್ಯಗಳನ್ನು ಎಸಗುವವರ ವಿರುದ್ಧ ಪೊಲೀಸ್‌ ಇಲಾಖೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿ. ಯಾರ ಪರವೂ ಶಿಫಾರಸು ಮಾಡುವುದಿಲ್ಲ. ಎಸ್‌.ಎಸ್‌.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.