ಶನಿವಾರ, ಫೆಬ್ರವರಿ 27, 2021
25 °C
ಹನುಮ ಜಯಂತಿಯ ವೇಳೆ ಉಂಟಾದ ಘರ್ಷಣೆಯಿಂದ ಉದ್ವಿಗ್ನ

ಸಹಜ ಸ್ಥಿತಿಗೆ ಮರಳಿದ ಹುಣಸೂರು ನಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಹಜ ಸ್ಥಿತಿಗೆ ಮರಳಿದ ಹುಣಸೂರು ನಗರ

ಹುಣಸೂರು: ಹನುಮ ಜಯಂತಿಯ ವೇಳೆ ಉಂಟಾದ ಘರ್ಷಣೆಯಿಂದ ಉದ್ವಿಗ್ನಗೊಂಡಿದ್ದ ನಗರ ಸೋಮವಾರ ಸಹಜ ಸ್ಥಿತಿಗೆ ಮರಳಿದೆ. ಜೆಎಲ್‌ಬಿ ರಸ್ತೆಯನ್ನು ಹೊರತುಪಡಿಸಿ ಉಳಿದೆಡೆ ವಾಣಿಜ್ಯ ವಹಿವಾಟು ಎಂದಿನಂತೆ ನಡೆಯಿತು.

ನಿಷೇಧಾಜ್ಞೆ ಇರುವುದರಿಂದ ನಗರ ವ್ಯಾಪ್ತಿಯ ಶಾಲೆ ಮತ್ತು ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಆದರೆ, ಉಳಿದಂತೆ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಸಾರಿಗೆ ಸಂಚಾರವೂ ಸಹಜವಾಗಿತ್ತು.

ಹನುಮ ಜಯಂತಿಯ ಮೆರವಣಿಗೆ ವೇಳೆ ಉಂಟಾದ ಗಲಾಟೆಯಲ್ಲಿ ಸಂಘ ಪರಿವಾರದ 92 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಸಂಸದ ಪ್ರತಾಪ ಸಿಂಹ ಅವರ ಬಂಧನ ಖಂಡಿಸಿ ಬಿಜೆಪಿ ಸೋಮವಾರ ಹುಣಸೂರು ಬಂದ್‌ಗೆ ಕರೆ ನೀಡಿತ್ತು.

ಹೀಗಾಗಿ, ಬೆಳಿಗ್ಗೆ ನಗರದ ಎಲ್ಲೆಡೆ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಸಾರ್ವಜನಿಕರ ಸಂಚಾರವೂ ವಿರಳವಾಗಿತ್ತು. ಆದರೆ ಬಂದ್‌ ಕರೆಯನ್ನು ಬಿಜೆಪಿ ಮುಖಂಡರು ಹಿಂಪಡೆದರು. ಹೀಗಾಗಿ, ಮಧ್ಯಾಹ್ನದ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳಿತು.

ಎರಡೂವರೆ ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆ ಒದಗಿಸಿದ್ದಾರೆ. ನಗರ ಪ್ರವೇಶಿಸುವ ಎಲ್ಲ ವಾಹನಗಳನ್ನು ಪರಿಶೀಲಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

92 ಮಂದಿ ಬಂಧಿತರ ಬಿಡುಗಡೆ:

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ 92 ಮಂದಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ 58 ಬಂಧಿತರಿಗೆ ಸೋಮವಾರ ಜಾಮೀನು ಲಭಿಸಿತು. ಇದಕ್ಕೂ ಮುನ್ನ ಸಂಸದೆ ಶೋಭಾ ಕರಂದ್ಲಾಜೆ ಅವರು ಜೈಲಿಗೆ ತೆರಳಿ ಅವರ ಜತೆ ಮಾತುಕತೆ ನಡೆಸಿದರು. ಕೆ.ಆರ್‌.ನಗರ ಜೈಲಿನಲ್ಲಿದ್ದ 29 ಮಂದಿಯನ್ನು ಭಾನುವಾರ ತಡರಾತ್ರಿ ಬಿಡುಗಡೆ ಮಾಡಲಾಗಿತ್ತು. ಉಳಿದ ಐವರಿಗೆ ನೋಟಿಸ್‌ ನೀಡಿ ಪೊಲೀಸರು ಬಿಡುಗಡೆ ಮಾಡಿದ್ದರು.

ಸಂಸದರ ಕಾರು ತಾಗಿ ಎಎಸ್ಪಿಗೆ ಗಾಯ

ಮೈಸೂರು: ಸಂಸದ ಪ್ರತಾಪ ಸಿಂಹ ಅವರು ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆಸಿದ ಸಂದರ್ಭದಲ್ಲಿ ಚಾಮರಾಜನಗರ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ ಅವರ ಕಾಲಿಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.

ಹುಣಸೂರು ಪಟ್ಟಣಕ್ಕೆ ಸಾಗುತ್ತಿದ್ದ ಪ್ರತಾಪ ಸಿಂಹ ಅವರನ್ನು ಬಿಳಿಕೆರೆ ಬಳಿ ತಡೆದ ಪೊಲೀಸರು ನಿಷೇಧಾಜ್ಞೆ ಉಲ್ಲಂಘನೆ ಮಾಡದಂತೆ

ಕೋರಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡು, ಏರುಧ್ವನಿಯಲ್ಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಚಾಲಕನನ್ನು ಕೆಳಗಿಳಿಸಿ ತಾವೇ ಕಾರು ಚಲಾಯಿಸಿದ್ದರು.

ಕಾರು ತಡೆಯಲು ಪೊಲೀಸರು ಯತ್ನಿಸಿದರು. ಈ ಸಂದರ್ಭದಲ್ಲಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದು, ಸಮೀಪದಲ್ಲೇ ಇದ್ದ ಗೀತಾ ಅವರ ಕಾಲಿಗೆ ಕಾರಿನ ಚಕ್ರ ತಾಗಿ ತರಚಿದ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಾಪ ವಿಡಿಯೊ ವೈರಲ್‌

ಮೈಸೂರು: ಯುವ ಮೋರ್ಚಾ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ನೀಡಿದ ಸೂಚನೆಯನ್ನು ಹಂಚಿಕೊಂಡ ಸಂಸದ ಪ್ರತಾಪಸಿಂಹ ಅವರ ವಿಡಿಯೊ ವೈರಲ್‌ ಆಗಿದೆ.

‘ಈಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಷಾ ಅವರು ಯುವ ಮೋರ್ಚಾ ಹೋರಾಟದ ಬಗ್ಗೆ ಮಾಹಿತಿ ಕೇಳಿದರು. ಲಾಠಿ ಚಾರ್ಜ್‌ ಆಗುವಂತಹ ಹೋರಾಟಗಳನ್ನು ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಇಂತಹ ಪ್ರತಿಭಟನೆಗಳನ್ನು ಈವರೆಗೆ ಮಾಡಿಲ್ಲ, ಇನ್ನು ಮುಂದೆ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದ್ದೆ’ ಎಂದು ಪ್ರತಾಪಸಿಂಹ ಅವರೇ ಹೇಳಿಕೊಂಡಿರುವುದು ವಿಡಿಯೊದಲ್ಲಿದೆ.

ಹುಣಸೂರು ಗಲಾಟೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಇದು ಹರಿದಾಡುತ್ತಿದೆ. ಇದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.