ಬುಧವಾರ, ಮಾರ್ಚ್ 3, 2021
26 °C
ಸಂಭವಿಸದ ಅನಾಹುತ–ಮುಂಬೈ ಜನತೆ ನಿರಾಳ

ಒಖಿ: ಮಹಾರಾಷ್ಟ್ರ, ಗುಜರಾತ್‌ಗಳಲ್ಲಿ ಮಳೆ

ಪಿಟಿಐ Updated:

ಅಕ್ಷರ ಗಾತ್ರ : | |

ಒಖಿ: ಮಹಾರಾಷ್ಟ್ರ, ಗುಜರಾತ್‌ಗಳಲ್ಲಿ ಮಳೆ

ಮುಂಬೈ/ಅಹಮದಾಬಾದ್‌/ತಿರುವನಂತಪುರ: ಒಖಿ ಚಂಡಮಾರುತದ ಪ್ರಭಾವದಿಂದಾಗಿ ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಮತ್ತು ದಕ್ಷಿಣ ಗುಜರಾತ್‌ನಲ್ಲಿ ಮಳೆಯಾಗಿದೆ.

ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸೂರತ್‌ನಿಂದ 390 ಕಿ.ಮೀ ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ನೆಲೆಗೊಂಡಿದ್ದ ಚಂಡಮಾರುತ ರಾತ್ರಿ ಸೂರತ್‌ ಬಳಿಯ ದಕ್ಷಿಣ ಕರಾವಳಿಯನ್ನು ತಲುಪಿದೆ.

ದಕ್ಷಿಣ ಗುಜರಾತ್‌ಗೆ ಚಂಡಮಾರುತ ತಲುಪುವಾಗ ಗಾಳಿಯ ವೇಗ ಪ್ರತಿ ಗಂಟೆಗೆ 50 ಕಿ.ಮೀನಿಂದ 60 ಕಿ.ಮೀ ನಡುವೆ ಇತ್ತು. ಇದು 70 ಕಿ.ಮೀಗೆ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು.

ಮಹಾರಾಷ್ಟ್ರದ ಹಲವು ಜಿಲ್ಲೆಗಳು, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ ಹಲವು ಕಡೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಖಿಯ ಪರಿಣಾಮ ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಗೋಚರಿಸಲು ಆರಂಭವಾಗಿದೆ. ಹಲವು ಜಿಲ್ಲೆಗಳಲ್ಲಿ ಹದವಾಗಿ ಮಳೆ ಸುರಿಯುತ್ತಿದೆ.

ಆಯೋಗದ ಸೂಚನೆ: ಇದೇ 9ರಂದು ಗುಜರಾತ್‌ನಲ್ಲಿ ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಪ್ರತಿಕೂಲ ಹವಾಮಾನದ ಕಾರಣಕ್ಕೆ ಮತದಾನದ ಮೇಲೆ ಯಾವುದೇ ಪರಿಣಾಮ ಆಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ.

ಮುಂಬೈ ನಿರಾಳ: ಚಂಡಮಾರುತವು ಮುಂಬೈ ಕರಾವಳಿಯನ್ನು ದಾಟಿರುವುದರಿಂದ ಜನರು ನಿರಾಳರಾಗಿದ್ದಾರೆ. ಒಖಿಯಿಂದಾಗಿ ನಗರದಲ್ಲಿ ಮಳೆ ಮಾತ್ರ ಸುರಿದಿದ್ದು, ಅನಾಹುತ ಸಂಭವಿಸಿಲ್ಲ.

ಕಣ್ಮರೆಯಾದವರ ಹುಡುಕಾಟ: ಚಂಡಮಾರುತದ ಹೊಡೆತಕ್ಕೆ ಸಿಕ್ಕು ಸಮುದ್ರದಲ್ಲಿ ನಾಪತ್ತೆಯಾಗಿರುವ 92 ಮೀನುಗಾರರ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದು ಕೇರಳ ಸರ್ಕಾರ ಹೇಳಿದೆ.

‘ಆಪರೇಷನ್‌ ಸಿನರ್ಜಿ’ ಹೆಸರಿನಲ್ಲಿ ನೌಕಾಪಡೆ, ವಾಯುಪಡೆ, ಕರಾವಳಿ ಕಾವಲು ಪಡೆ ಮತ್ತು ರಾಜ್ಯ ಮೀನುಗಾರಿಕಾ ಇಲಾಖೆ ಜಂಟಿಯಾಗಿ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಇದುವರೆಗೆ 252 ಮೀನುಗಾರರನ್ನು ರಕ್ಷಿಸಲಾಗಿದೆ.

ಲಕ್ಷದ್ವೀಪಕ್ಕೆ ಪರಿಹಾರ ಸಾಮಗ್ರಿ: ಒಖಿಯಿಂದ ಸಂತ್ರಸ್ತರಾಗಿರುವ ಲಕ್ಷದ್ವೀಪದ ಜನರಿಗಾಗಿ ಭಾರತೀಯ ನೌಕಾಪಡೆಯು ಪರಿಹಾರ ಸಾಮಗ್ರಿಗಳನ್ನು ಪೂರೈಸಿದೆ.

‘ಅಕ್ಕಿ, ಬೇಳೆ, ಆಲೂಗಡ್ಡೆ, ನೀರು, ಹೊದಿಕೆ, ರೈನ್‌ಕೋಟ್‌, ಸೊಳ್ಳೆ ಪರದೆ ಸೇರಿದಂತೆ ನಾಲ್ಕು ಟನ್‌ಗಳಷ್ಟು ಪರಿಹಾರ ವಸ್ತುಗಳನ್ನು ಸ್ಥಳೀಯ ಆಡಳಿತಕ್ಕೆ ಹಸ್ತಾಂತರಿಸಲಾಗಿದೆ’ ಎಂದು ನೌಕಾ ಪಡೆಯ ವಕ್ತಾರರು ಹೇಳಿದ್ದಾರೆ.

ಭಾರಿ ಮಳೆಯ ಎಚ್ಚರಿಕೆ (ಭುವನೇಶ್ವರ ವರದಿ): ಬಂಗಾಳಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ಗಾಳಿಯ ಒತ್ತಡ ಕಡಿಮೆಯಾಗಿರುವುದರಿಂದ ಡಿಸೆಂಬರ್‌ 7ರಿಂದ ಒಡಿಶಾದಲ್ಲಿ ಭಾರಿ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಎಲ್ಲ ಮುನ್ನಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ನವೀನ್‌ ಪಟ್ನಾಯಿಕ್‌ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

‘ಮೂರು ದಿನ ಸಮುದ್ರಕ್ಕೆ ಇಳಿಯದಿರಿ’

ನವದೆಹಲಿ: ಒಖಿ ಚಂಡಮಾರುತದ ಪ್ರಭಾವದಿಂದ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂದಿನ ಮೂರು ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಪೂರ್ವ ಮತ್ತು ‍ಪಶ್ಚಿಮ ಕರಾವಳಿಯ ಮೀನುಗಾರರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಮಂಗಳವಾರ ಸೂಚಿಸಿದೆ.

ಈ ಸಂಬಂಧ ಸಲಹಾ ಟಿಪ್ಪಣಿ ಹೊರಡಿಸಿರುವ ಪ್ರಾಧಿಕಾರ, ಚಂಡಮಾರುತ ಅಪ್ಪಳಿಸುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ಸಂದೇಶ ಬಂದರೆ ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದೆ.

ಡಿಸೆಂಬರ್‌ 6ರಿಂದ (ಬುಧವಾರ) 8ರವರೆಗೆ ಮೀನುಗಾರಿಕೆಗೆ ತೆರಳದಂತೆ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಮೀನುಗಾರರಿಗೆ ಸೂಚಿಸಲಾಗಿದೆ.

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹದ ಕರಾವಳಿಯ ಮೀನುಗಾರರು ಗುರುವಾರದಿಂದ ಮೀನುಗಾರಿಕೆ ನಡೆಸಬಹುದು ಎಂದು ಎನ್‌ಡಿಎಂಎ ಹೇಳಿದೆ.‌

39 ಸಾವು, 167 ಮಂದಿ ನಾಪತ್ತೆ

ಒಖಿ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ಮತ್ತು ಕೇರಳಗಳಲ್ಲಿ  ಕ್ರಮವಾಗಿ 10 ಮತ್ತು 29 ಜನರು ಬಲಿಯಾಗಿದ್ದಾರೆ. 167 ಮೀನುಗಾರರು ಇನ್ನೂ ಪತ್ತೆಯಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಚಂಡಮಾರುತವು ದುರ್ಬಲಗೊಳ್ಳುತ್ತಿದ್ದು, ಗುಜರಾತ್‌ನಲ್ಲಿ ಯಾವುದೇ ಹಾನಿ ಮಾಡದು ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜೀವ್‌ ಕುಮಾರ್‌ ಜಿಂದಾಲ್‌ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.