ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ಬೇಡಿಕೆ: ಮದುವೆ ಧಿಕ್ಕರಿಸಿದ ವಧು

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೋಟಾ (ರಾಜಸ್ಥಾನ): ಮದುವೆಯ ದಿನ ವರನ ಕುಟುಂಬದವರು ನಗದು, ಒಡವೆ ಸೇರಿದಂತೆ ಒಂದು ಕೋಟಿ ಮೌಲ್ಯದ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದರಿಂದ ಯುವತಿಯೊಬ್ಬಳು, ವೈದ್ಯನೊಂದಿಗೆ ನಿಗದಿಯಾಗಿದ್ದ ತನ್ನ ಮದುವೆಯನ್ನೇ ಸ್ಥಗಿತಗೊಳಿಸಿದ್ದಾಳೆ. ಡಾ. ರಾಶಿ ವರದಕ್ಷಿಣೆ ವಿರುದ್ಧ ಹೀಗೆ ಸಿಡಿದೆದ್ದ ವಧು.

ಕೋಟಾದ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ. ಅನಿಲ್ ಸಕ್ಸೇನಾ ಅವರ ಮಗಳು ರಾಶಿ ಅವರ ಮದುವೆ, ಉತ್ತರ ಪ್ರದೇಶದ ಮೊರಾದಾಬಾದ್‌ನ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸಕ್ಷಮ್‌ ಮಧೋಕ್‌ ಅವರೊಂದಿಗೆ ಕಳೆದ ಭಾನುವಾರ ನಡೆಯಬೇಕಿತ್ತು. ಮದುವೆಗೆ ಕೆಲವೇ ಗಂಟೆಗಳಿದ್ದಾಗ ವರನ ಕಡೆಯವರು ದಿಢೀರನೆ ಹೊಸ ಬೇಡಿಕೆ ಇಟ್ಟಿದ್ದರಿಂದ ರಾಶಿ ಕುಟುಂಬದವರು ಆಘಾತಕ್ಕೆ ಒಳಗಾದರು.

‘ಶನಿವಾರ ನಡೆದಿದ್ದ ನಿಶ್ಚಿತಾರ್ಥದಂದು ಕಾರು ಹಾಗೂ ತಲಾ 10 ಗ್ರಾಂನ 5 ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದೆವು. ಅಲ್ಲದೆ ಮದುವೆಯ ವ್ಯವಸ್ಥೆಗಾಗಿ ಅದಾಗಲೇ 30– 35 ಲಕ್ಷ ರೂಪಾಯಿ ವ್ಯಯಿಸಿದ್ದೆವು. ಅಷ್ಟಾದರೂ ಕೊನೇ ಕ್ಷಣದಲ್ಲಿ ಮತ್ತೆ ಹಣ ಮತ್ತು ಭಾರಿ ಮೊತ್ತದ ವಸ್ತುಗಳಿಗೆ ಬೇಡಿಕೆ ಇಟ್ಟಾಗ ನಾವು ಮಗಳಿಗೆ ವಿಷಯ ತಿಳಿಸಿದೆವು. ಆಕೆ ವರನೊಂದಿಗೆ ಫೋನ್‌ನಲ್ಲಿ ಮಾತನಾಡಿದಳು. ಆತ ಪಟ್ಟು ಸಡಿಲಿಸದಿದ್ದಾಗ, ಮದುವೆಯಾಗದಿರಲು ರಾಶಿ ನಿರ್ಧರಿಸಿದಳು’ ಎಂದು ಡಾ. ಅನಿಲ್‌ ಸಕ್ಸೇನಾ ತಿಳಿಸಿದ್ದಾರೆ.

ಬಳಿಕ ರಾಶಿ ಕುಟುಂಬದವರು ಸಕ್ಷಮ್‌, ಆತನ ಪೋಷಕರು, ಸಹೋದರಿ ಹಾಗೂ ಆಕೆಯ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇಷ್ಟೆಲ್ಲಾ ಆದರೂ, ಊಟ ಮುಗಿದ ಬಳಿಕವೇ ಅತಿಥಿಗಳಿಗೆ ಮದುವೆ ಮುರಿದುಬಿದ್ದ ವಿಷಯವನ್ನು ತಿಳಿಸಿದ ರಾಶಿ ಕುಟುಂಬದವರ ಅತಿಥಿ ಸತ್ಕಾರ ಶ್ಲಾಘನೆಗೆ ಪಾತ್ರವಾಗಿದೆ. ‘ಇಂತಹ ಘಟನೆ ಮತ್ತಷ್ಟು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಲಿ’ ಎಂದು ಅತಿಥಿಗಳು ವಧುವಿನ ನಿರ್ಧಾರವನ್ನು ಹೊಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT