7
ಭಟ್ಕಳ: 131 ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಬಿಜೆಪಿ ಧರ್ಮ ರಾಜಕಾರಣ: ಧರ್ಮ ಪರಿಪಾಲನೆ ಮಾಡುತ್ತಿಲ್ಲ

Published:
Updated:
ಬಿಜೆಪಿ ಧರ್ಮ ರಾಜಕಾರಣ: ಧರ್ಮ ಪರಿಪಾಲನೆ ಮಾಡುತ್ತಿಲ್ಲ

ಭಟ್ಕಳ: ರಾಜಕಾರಣದಲ್ಲಿ ಧರ್ಮ ಪರಿಪಾಲನೆ ಮಾಡಬೇಕು, ಆದರೆ ಬಿಜೆಪಿ ಪಕ್ಷದವರು ಬರೀ ಭಾಷಣ ಮಾಡುವುದು ಬಿಟ್ಟರೆ ಕೆಲಸ ಮಾಡಿ ಗೊತ್ತಿಲ್ಲ, ಅವರು ಧರ್ಮ ರಾಜಕಾರಣ ಮಾಡುತ್ತ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದ ಸುಮಾರು 131 ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ರಿಮೋಟ್ ಮೂಲಕ ನೆರವೇರಿಸಿ ಮಾತನಾಡಿದರು.

‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರದ್ದು ಡೋಂಗಿತನ. ಅಚ್ಚೇ ದಿನ್ ಆಯೇಗ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯಿಂದ ಯಾರಿಗೆ ಅಚ್ಚೆದಿನ್ ಬಂದಿದೆ. ಉಳಿದ ಒಂದೂವರೆ ವರ್ಷದಲ್ಲಿ ಅಚ್ಚೇದಿನ್ ತರಲು ಸಾಧ್ಯವೇ ಎಂದು ಜರಿದರು.

ಬಿಜೆಪಿಯ ಯಡಿಯೂರಪ್ಪ ಸೇರಿದಂತೆ ಹೆಚ್ಚಿನವರೆಲ್ಲ ಜೈಲಿಗೆ ಹೋಗಿ ಬಂದವರು. ಅವರ ನಾಲಿಗೆಗಳು ಅವರ ಸಂಸ್ಕೃತಿ ತೋರಿಸುತ್ತದೆ. ಯಡಿಯೂರಪ್ಪ ಮತ್ತು ಅನಂತಕುಮಾರ್ ಹೆಗಡೆ ಅಂಥಹವರು ಎಷ್ಟು ಜನ ಬಂದರೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದಿಕ್ಕೆ ಬಿಡಲ್ಲ ಎಂದು ಹೇಳಿದ ಅವರು, ತಾವು ಅಧಿಕಾರ ವಹಿಸಿಕೊಂಡ ಅರ್ಧ ಗಂಟೆಯೊಳಗೆ ಜಾರಿಗೆ ತಂದ ಅನ್ನಭಾಗ್ಯ ಯೋಜನೆ ಸೇರಿದಂತೆ ಜನ ಸಾಮಾನ್ಯರಿಗಾಗಿ ಅನುಷ್ಠಾನಗೊಳಿಸಿದ ಯೋಜನೆಗಳ ಕುರಿತು ವಿವರಿಸಿದರು.

ಯಾವುದೇ ಭ್ರಷ್ಟಾಚಾರವಿಲ್ಲದೇ ಆಡಳಿತ ನೀಡಿದ ಕೀರ್ತಿ ನಮ್ಮ ಸರ್ಕಾರಕ್ಕೆ ಇದೆ. ನಮ್ಮ ಸರ್ಕಾರ ಎಲ್ಲ ವರ್ಗದ ಜನರ ಅಭಿವೃದ್ದಿಗೆ ಕಾರ್ಯಕ್ರಮ ರೂಪಿಸಿದೆ. ಆದರೆ ಬಿಜೆಪಿಯವರಿಗೆ ಅಧಿಕಾರ ನಡೆಸುವ, ಮತ ಕೇಳಲು ಯಾವುದೇ ನೈತಿಕತೆ ಉಳಿದಿಲ್ಲ ಎಂದು ಹೇಳಿದ ಅವರು, ಸಮಾಜದಲ್ಲಿ ಶಾಂತಿ ಸೌಹಾರ್ದ ಮುಖ್ಯ, ಅದಿಲ್ಲದಿದ್ದರೆ ಅಭಿವೃದ್ದಿ ಅಸಾಧ್ಯ ಎಂದರು.

ಲೋಕೋಪಯೋಗಿ ಸಚಿವ ಡಾ. ಎಚ್. ಸಿ ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿದರು.

ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಜಿಲ್ಲಾಧಿಕಾರಿ ಎಸ್‌. ಎಸ್ ನಕುಲ್‌ ಸ್ವಾಗತಿಸಿದರು. ಮನೋಹರ ಪ್ರಸಾದ್ ನಿರೂಪಿಸಿದರು. ಉಪವಿಭಾಗಾಧಿಕಾರಿ ಎಂ. ಎನ್ ಮಂಜುನಾಥ ವಂದಿಸಿದರು. ಜಿಲ್ಲಾಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ್, ಮೀನುಗಾರಿಕಾ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ, ಪುರಸಭೆ ಅಧ್ಯಕ್ಷ ಮಟ್ಟಾ ಸಾಧಿಕ್‌, ಜಾಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಅಬ್ದುಲ್ ರಹೀಂ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry