ಭಾನುವಾರ, ಫೆಬ್ರವರಿ 28, 2021
30 °C
ಎಫ್‌ಆರ್‌ಡಿಐ: ಹಣಕಾಸು ಸಚಿವಾಲಯ ಸ್ಪಷ್ಟನೆ

ಬ್ಯಾಂಕ್ ‘ಠೇವಣಿದಾರ ಸ್ನೇಹಿ’ ಮಸೂದೆ

ಪಿಟಿಐ Updated:

ಅಕ್ಷರ ಗಾತ್ರ : | |

ಬ್ಯಾಂಕ್ ‘ಠೇವಣಿದಾರ ಸ್ನೇಹಿ’ ಮಸೂದೆ

ನವದೆಹಲಿ: ‘ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆಯು’ (ಎಫ್‌ಆರ್‌ಡಿಐ) ಬ್ಯಾಂಕ್‌ ಠೇವಣಿದಾರರ ಸ್ನೇಹಿಯಾಗಿದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಸದ್ಯಕ್ಕೆ ಸಂಸತ್ತಿನ ಜಂಟಿ ಸಮಿತಿಯ ಪರಿಶೀಲನೆಯಲ್ಲಿ ಇರುವ ಈ ಮಸೂದೆಯು ಠೇವಣಿದಾರರಿಗೆ ಸದ್ಯದ ನಿಯಮಗಳಿಗಿಂತ ಹೆಚ್ಚಿನ ರಕ್ಷಣೆ ನೀಡಲಿದೆ ಎಂದೂ ಭರವಸೆ ನೀಡಲಾಗಿದೆ.

ತೀವ್ರ ನಷ್ಟಕ್ಕೆ ಗುರಿಯಾಗುವ  ಅಥವಾ ದಿವಾಳಿ ಅಂಚಿಗೆ ತಲುಪುವ ಬ್ಯಾಂಕ್‌ಗಳು ತಮ್ಮ ನಷ್ಟದ ತೀವ್ರತೆ ತಗ್ಗಿಸಲು ಠೇವಣಿದಾರರ ಹಣವನ್ನು ಬಳಸಿಕೊಳ್ಳಲು ಅವಕಾಶ ಇರುವ ಪ್ರಸ್ತಾವವನ್ನು (bail-in) ಈ ಮಸೂದೆ ಒಳಗೊಂಡಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವ ಕಾರಣಕ್ಕೆ ಸರ್ಕಾರ ಈ ಸ್ಪಷ್ಟನೆ ನೀಡಿದೆ.

ಸದ್ಯಕ್ಕೆ ಠೇವಣಿದಾರರ ಹಿತರಕ್ಷಣೆಗೆ ಇರುವ ನಿಯಮಗಳನ್ನು ಅವರ ಹಿತಕ್ಕೆ ಧಕ್ಕೆಯಾಗುವ ಬಗೆಯಲ್ಲಿ ಬದಲಿಸುವ ಯಾವುದೇ ಪ್ರಸ್ತಾವವನ್ನು ಮಸೂದೆ ಒಳಗೊಂಡಿಲ್ಲ. ಹೆಚ್ಚು ಪಾರದರ್ಶಕವಾದ ಮತ್ತು ಹೆಚ್ಚುವರಿ ರಕ್ಷಣೆ ನೀಡುವ ಬಗೆಯಲ್ಲಿ ಈ ನಿಯಮಗಳಿವೆ ಎಂದು ತಿಳಿಸಲಾಗಿದೆ.

ಈ ಮಸೂದೆಯನ್ನು ಈ ವರ್ಷದ ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಮಸೂದೆಯಲ್ಲಿನ ವಿವಿಧ ಪ್ರಸ್ತಾವನೆಗಳ ಬಗ್ಗೆ ಸಮಿತಿಯು ಎಲ್ಲ ಭಾಗಿದಾರರ ಜತೆ ಚರ್ಚೆ ನಡೆಸುತ್ತಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳೂ ಸೇರಿದಂತೆ ಎಲ್ಲ ಬ್ಯಾಂಕ್‌ಗಳಿಗೆ ಹಣಕಾಸು ಮತ್ತು ಪರಿಹಾರ ಬೆಂಬಲ ನೀಡುವ ಸರ್ಕಾರದ ಅಧಿಕಾರಕ್ಕೆ ನಿಯಂತ್ರಣ ವಿಧಿಸುವ ಯಾವುದೇ ಪ್ರಸ್ತಾವ ಒಳಗೊಂಡಿಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರದ ಖಾತರಿಗೆ ಯಾವುದೇ ಬಗೆಯಲ್ಲಿಯೂ ಧಕ್ಕೆ ಒದಗಲಾರದು.

ದೇಶಿ ಬ್ಯಾಂಕ್‌ಗಳು ಅಗತ್ಯ ಇರುವಷ್ಟು ಬಂಡವಾಳ ಹೊಂದಿವೆ. ನಿಯಂತ್ರಣ ಮತ್ತು ಮೇಲ್ವಿಚಾರಣೆಗೂ ಒಳಪಟ್ಟಿವೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸ್ಥಿರತೆಯೂ ಇದೆ. ಸದ್ಯಕ್ಕೆ ಜಾರಿಯಲ್ಲಿ ಇರುವ ಬ್ಯಾಂಕಿಂಗ್‌ ನಿಯಮಗಳು ಸಮಗ್ರತೆ, ಸುರಕ್ಷತೆಯ ಭರವಸೆ ನೀಡುತ್ತಿವೆ ಎಂದೂ ಸಚಿವಾಲಯ ತಿಳಿಸಿದೆ.

ಬ್ಯಾಂಕ್‌ ಠೇವಣಿಗೆ ಸರ್ಕಾರದ ಖಾತರಿ

ಮಸೂದೆಯಲ್ಲಿ ಇರುವ ಈ ’ಬೇಲ್‌ –ಇನ್‌’ ಪ್ರಸ್ತಾವವು, ನಷ್ಟದಲ್ಲಿ ಇರುವ ಬ್ಯಾಂಕ್‌ / ಹಣಕಾಸು ಸಂಸ್ಥೆಗಳಿಗೆ ಪರಿಹಾರ ಕೊಡುಗೆ ನೀಡುವ ಬದಲಿಗೆ, ನಷ್ಟ ಭರ್ತಿಗೆ ಠೇವಣಿದಾರರ ಹಣ ಬಳಸಿಕೊಳ್ಳಲು ಅವಕಾಶ ಒದಗಿಸಲಿದೆ.  ಠೇವಣಿದಾರರ ಹಣದ ಕೆಲ ಭಾಗವನ್ನು ಕಾನೂನು ಬದ್ಧವಾಗಿ ಕೊಳ್ಳೆ ಹೊಡೆಯುವುದು ಎಂದೂ ಇದರರ್ಥ.

ಸದ್ಯಕ್ಕೆ ಠೇವಣಿದಾರರ ಪ್ರತಿ ₹ 1 ಲಕ್ಷದ ಬ್ಯಾಂಕ್‌ ಠೇವಣಿಗೆ ಸರ್ಕಾರದ ಖಾತರಿ ಇದೆ. ಅಂದರೆ, ಒಂದು ವೇಳೆ ಬ್ಯಾಂಕ್‌ ದಿವಾಳಿ ಎದ್ದರೂ ಠೇವಣಿದಾರರಿಗೆ ₹ 1 ಲಕ್ಷವರೆಗಿನ ಠೇವಣಿ ಹಣ ಮರಳಿಸುವ ಜವಾಬ್ದಾರಿಯನ್ನು ಸರ್ಕಾರ ಹೊಂದಿದೆ.  ಈ ಹೊಣೆಗಾರಿಕೆ ನಿಭಾಯಿಸಲೆಂದೇ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವನ್ನು 1960ರ ಮುಂಚೆಯೇ ಸ್ಥಾಪಿಸಲಾಗಿದೆ. ಸರ್ಕಾರದ ಖಾತರಿಗೆ ಒಳಪಡುವ ಠೇವಣಿ ಮೊತ್ತ ಹೆಚ್ಚಿಸಲು ಒತ್ತಾಯಿಸಿದ್ದರೂ ಈ ಮಿತಿಯನ್ನು 1993 ರಿಂದ ಇದುವರೆಗೂ ಒಮ್ಮೆಯೂ ಪರಿಷ್ಕರಿಸಿಲ್ಲ.

ಆನ್‌ಲೈನ್‌ನಲ್ಲಿ ದೂರು

ಒಂದೆಡೆ ಸರ್ಕಾರ ಸ್ಪಷ್ಟನೆ ನೀಡಿದ್ದರೂ, ‘ಬೇಲ್‌–ಇನ್‌‍’ ಪ್ರಸ್ತಾವನೆ ವಿರುದ್ಧ ಆನ್‌ಲೈನ್‌ನಲ್ಲಿ ದೂರು ದಾಖಲಿಸುವುದಕ್ಕೆ ಸಾವಿರಾರು ಜನರು ಬೆಂಬಲ ಸೂಚಿಸಿದ್ದಾರೆ.

‘ಚೇಂಜ್‌ಡಾಟ್‌ಆರ್ಗ್‌’ (Change.org) ತಾಣದಲ್ಲಿನ ದೂರುಗಳಿಗೆ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಪ್ರಚಾರ ದೊರೆತಿದೆ. ಬ್ಯಾಂಕ್‌ಗಳನ್ನು ದಿವಾಳಿಯಿಂದ ಪಾರು ಮಾಡಲು ಠೇವಣಿದಾರರ ಹಣ ಬಳಸುವುದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಮಸೂದೆ ಅಂಗೀಕರಿಸದಂತೆ ಹಣಕಾಸು ಸಚಿವ ಅರುಣ್‌ ಜೈಟ್ಲಿ ಅವರನ್ನು ಒತ್ತಾಯಿಸಿ ಮುಂಬೈನ ಶಿಲ್ಪಾಶ್ರೀ ಅವರು ವೈಯಕ್ತಿಕ ನೆಲೆಯಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು. 24 ಗಂಟೆಗಳಲ್ಲಿ ಇದಕ್ಕೆ 40 ಸಾವಿರಕ್ಕೂ ಹೆಚ್ಚು ಜನರು ಬೆಂಬಲ ಸೂಚಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.