ಸೋಮವಾರ, ಮಾರ್ಚ್ 8, 2021
25 °C
ವಿಚಾರಣೆ ನಡೆಸಲು ರಿಜಿಸ್ಟ್ರಾರ್ ಜನರಲ್‌ಗೆ ಹೈಕೋರ್ಟ್ ಆದೇಶ

ಆದೇಶವನ್ನೇ ತಿರುಚಿದ ಭೂಪರು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆದೇಶವನ್ನೇ ತಿರುಚಿದ ಭೂಪರು...!

ಬೆಂಗಳೂರು: ಎಂಜಿನಿಯರಿಂಗ್ ಪದವಿ ಪ್ರವೇಶ ಕುರಿತಂತೆ ನೀಡಲಾಗಿದ್ದ ಹೈಕೋರ್ಟ್‌ ಆದೇಶವನ್ನೇ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ರಿಜಿಸ್ಟ್ರಾರ್ ಜನರಲ್ ಅವರಿಗೆ ಹೈಕೋರ್ಟ್ ಆದೇಶಿಸಿದೆ.

ಆದೇಶ ತಿರುಚಲಾಗಿದೆ ಎಂದು ಆರೋಪಿಸಿ ನಗರದ ಚೇರುಕುರಿ ವೀರ ಅಜಯ್ ಸೇರಿದಂತೆ 13 ಜನ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ ನ್ಯಾಯಪೀಠ, ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಪ್ರಕರಣವೇನು?: ರಾಜ್ಯದ ವಿವಿಧ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 5 ಹಾಗೂ 7ನೇ ಸೆಮಿಸ್ಟರ್‌ ಪ್ರವೇಶಕ್ಕೆ ಸಂಬಂಧಿಸಿದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ‘ಒನ್ ಟೈಮ್ ಎಕ್ಸಿಟ್ ಸ್ಕೀಮ್’ ಯೋಜನೆ ಪರಿಚಯಿಸಿತ್ತು. ಈ ಯೋಜನೆಯಡಿ ಸಲ್ಲಿಸಲಾದ ಅರ್ಜಿಗಳನ್ನು ಕೆಲ ಕಾಲೇಜುಗಳು ತಿರಸ್ಕರಿಸಿದ್ದವು.ಇದನ್ನು ವಿದ್ಯಾರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಇದನ್ನು 2017ರ ಸೆ.28ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ, ‘ವಿದ್ಯಾರ್ಥಿಗಳ ಪ್ರವೇಶ ಅರ್ಜಿಗಳನ್ನು ಪರಿಗಣಿಸಿ’ ಎಂದು ಆಯಾ ಕಾಲೇಜುಗಳಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಹೊರಡಿಸಿತ್ತು. ಈ ಆದೇಶವನ್ನೇ ಇಟ್ಟುಕೊಂಡು ಹೈಕೋರ್ಟ್‌ ಮೆಟ್ಟಿಲು ಏರದ ಅನ್ಯ ವಿದ್ಯಾರ್ಥಿಗಳು, ‘ನಾವೂ ಈ ಆದೇಶದ ಫಲಾನುಭವಿಗಳು ಎಂಬಂತೆ ಬಿಂಬಿಸಿಕೊಂಡು ಆದೇಶ ಸೃಷ್ಟಿಸಿಕೊಂಡಿದ್ದರು. ಇದು ದೃಢೀಕೃತ ಆದೇಶ ಎಂಬಂತೆ ಅಧಿಕೃತ ಮೊಹರನ್ನೂ ಹಾಕಿ ಪ್ರಯೋಜನ ಪಡೆದಿದ್ದಾರೆ’ ಎಂಬುದು ಅರ್ಜಿದಾರರ ಆರೋಪ.

‘ತಿರುಚಲಾದ ಆದೇಶವನ್ನು 2017ರ ಅಕ್ಟೋಬರ್ 29ರಂದು ಹೊರಡಿಸಲಾಗಿದೆ ಎಂದು ತೋರಿಸಲಾಗಿದೆ. ಆದರೆ ಅಂದು ಶನಿವಾರವಾಗಿದ್ದು ಹೈಕೋರ್ಟ್‌ ಕಲಾಪವೇ ನಡೆದಿರಲಿಲ್ಲ’ ಎಂಬುದು ಅರ್ಜಿದಾರರ ಮತ್ತೊಂದು ವಾದಾಂಶ.

ಆದೇಶ ಪಡೆದಿದ್ದ ಮೂಲ ಅರ್ಜಿದಾರ ವಿದ್ಯಾರ್ಥಿಗಳು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರಿಗೆ ಈ ಕುರಿತಂತೆ ದೂರು ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.