7

ವಕೀಲರು ನ್ಯಾಯದ ಪರವಾಗಿರಲಿ: ನ್ಯಾಯಾಧೀಶ ಸಂಶಿ

Published:
Updated:

ದೇವನಹಳ್ಳಿ: ವಕೀಲರು ತಮ್ಮ ಹಕ್ಕಿಗಾಗಿ ಹೋರಾಡಬೇಕೆ ಹೊರತು ಸುಳ್ಳು ಪ್ರಕರಣಗಳನ್ನು ಬೆಂಬಲಿಸಬಾರದು ಎಂದು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎನ್.ಸಂಶಿ ತಿಳಿಸಿದರು.

ನ್ಯಾಯಾಲಯದ ಆವರಣದಲ್ಲಿ ಗುರುವಾರ ನಡೆದ ವಕೀಲರ ದಿನಾಚರಣೆ, ಕರ್ನಾಟಕ ರಾಜ್ಯೋತ್ಸವ ಹಾಗೂ ಇ–ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮ ದಿನವನ್ನು ವಕೀಲರ ದಿನವನ್ನಾಗಿ ಆಚರಿಸಲಾಗುತ್ತಿದೆ. ವಕೀಲರ ವೃತ್ತಿಯ ಪಾವಿತ್ರ್ಯ ಕಾಯ್ದುಕೊಳ್ಳಬೇಕು. ಸತ್ಯಾನ್ವೇಷಣೆಯಲ್ಲಿ ತೊಡಗಬೇಕು. ಒಂದುವರೆ ರೂಪಾಯಿ ಡ್ರಗ್ಸ್ ಪ್ರಕರಣ ಹದಿನೈದು ವರ್ಷದ ನಂತರ ತೀರ್ಮಾನವೆಂದರೆ ಪ್ರಕರಣಗಳು ಯಾವ ರೀತಿ ವಿಳಂಬ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಪ್ರಸ್ತುತ ಕಾನೂನುಗಳ ಬಗ್ಗೆ ಹೋರಾಟ ನಡೆಸಿ ವ್ಯತಿರಿಕ್ತ ಬೇಡ. ಬದಲಾದ ಕಾಲಘಟ್ಟದಲ್ಲಿ ಇ–ಗ್ರಂಥಾಲಯ ಅವಶ್ಯವಿದೆ. ಆಯಾ ದಿನದ ತೀರ್ಪು ಆಯಾ ದಿನ ತಿಳಿದುಕೊಳ್ಳಲು ಸುಲಭವಾಗಲಿದೆ. ಪ್ರತಿಯೊಬ್ಬ ವಕೀಲರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಸಾಹಿತಿ ಮುನಿಕೆಂಪಣ್ಣ ಮಾತನಾಡಿ, ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ, ಎರಡುವರೆ ಸಾವಿರ ವರ್ಷಗಳಿಂದ ಬರವಣಿಗೆ ಅಸ್ತಿತ್ವದಲ್ಲಿದೆ. ಕನ್ನಡ ಮತ್ತು ಸಂಸ್ಕೃತಿ ಬೆಳವಣಿಗೆಯಾಗಿ ವಿಶ್ವ ಮಟ್ಟದಲ್ಲಿ ಪರಿಚಯವಾಗುತ್ತಿದೆ. ಅನ್ಯ ಭಾಷಿಕರು ಕನ್ನಡ ಸಂಸ್ಕೃತಿಯಲ್ಲಿ ಬೆರೆಯಬೇಕು. ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡದಲ್ಲೇ ಕಡ್ಡಾಯವಾಗಿ ಅಧ್ಯಯನ ಮಾಡಬೇಕು ಎಂದರು.

ಕವಿ ಮತ್ತು ಹಾಸ್ಯ ಸಾಹಿತಿ ಡುಂಡಿರಾಜ್ ಮಾತನಾಡಿ, ಕನ್ನಡದ ಪರಿಸ್ಥಿತಿಯನ್ನು ವಕೀಲರೇ ಕಾಪಾಡಬೇಕು. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ನಂತರ ಪರ ಮತ್ತು ವಿರೋಧಿಗಳಿಬ್ಬರೂ ಭಗವದ್ಗೀತೆಯನ್ನು ಮುಟ್ಟಿ ಸತ್ಯವನ್ನೇ ಹೇಳುತ್ತೇನೆ; ಸತ್ಯವನ್ನು ಬಿಟ್ಟು ಬೇರೇನು ಹೇಳುವುದಿಲ್ಲ ಎಂದು ಪ್ರಮಾಣ ಮಾಡುತ್ತಾರೆ. ಹಾಗಾದರೆ ಸುಳ್ಳು ಹೇಳುವವರು ಯಾರು? ಎಂದು ನಗೆ ಚಟಾಕಿ ಹಾರಿಸಿದರು. ಕನ್ನಡ ಭಾಷೆಯ ಸಾಮರ್ಥ್ಯ, ಆಕರ್ಷಣೆ ಅತ್ಯಂತ ಅದ್ಭುತ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ದಿನೇಶ್ ಹೆಗ್ಗಡೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅಬ್ದುಲ್ ಸಲೀಂ, ವಕೀಲ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬೈರೇಗೌಡ, ಕಾರ್ಯದರ್ಶಿ ಪ್ರಭಾಕರ್, ಖಜಾಂಚಿ ಎಂ.ಶ್ರೀನಿವಾಸ್ ಇದ್ದರು.

ಕನ್ನಡ ಶಾಲೆ ಸಿಗುವುದು ಕಷ್ಟ

ನ್ಯಾಯಾಧೀಶ ಎಂ.ಎನ್.ಸಂಶಿ ಮಾತನಾಡಿ, ‘ಕನ್ನಡದ ಬಗ್ಗೆ ಸ್ವಾಭಿಮಾನ ಇರಬೇಕು. ನಾವೆಲ್ಲ ಕನ್ನಡದ ಮಾಧ್ಯಮದಲ್ಲೇ ಶಿಕ್ಷಣ ಪಡೆದು ಈ ಹಂತಕ್ಕೆ ಬಂದಿದ್ದೇವೆ. ಈ ನೆಲದ ಭಾಷೆ ಗೌರವಿಸುವುದು ಕರ್ತವ್ಯ’ ಎಂದರು.

ಕನ್ನಡ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗುತ್ತಿದೆ. ಇನ್ನೂ 30 ವರ್ಷದ ನಂತರ ಹುಡುಕಿದರೂ ಕನ್ನಡ ಶಾಲೆಗಳು ಸಿಗುವುದು ಕಷ್ಟ. ಉತ್ಕೃಷ್ಟ ಭಾಷೆ ಕನ್ನಡ ಉಳಿಯಬೇಕು. ಪ್ರತಿಷ್ಠೆಗಾಗಿ ಆಂಗ್ಲ ಶಾಲೆಗಳು ಬೇಡ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry