ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಷ್ಮಕೆರೆಯಲ್ಲಿ ಜಲ ಸಾಹಸ ಕ್ರೀಡೆ ರೋಮಾಂಚನ

ಹೆಲಿಕಾಪ್ಟರ್‌ ಜಾಲಿರೈಡ್‌ಗೆ ಮುಗಿಬಿದ್ದ ಜನರು; ಕ್ರೀಡಾಂಗಣದಲ್ಲಿ ದೇಸಿ ಕ್ರೀಡೆಗಳ ವೈಭವ
Last Updated 9 ಡಿಸೆಂಬರ್ 2017, 9:57 IST
ಅಕ್ಷರ ಗಾತ್ರ

ಗದಗ: ಜಿಲ್ಲಾಡಳಿತವು ಗದಗ ಉತ್ಸವದ ಅಂಗವಾಗಿ ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಭೀಷ್ಮಕೆರೆಯಲ್ಲಿ ಶುಕ್ರವಾರ ಆಯೋಜಿಸಿದ ಜಲ ಸಾಹಸ ಕ್ರೀಡೆ ಗಮನ ಸೆಳೆಯಿತು. ಕೆಲವರು ಕುಟುಂಬ ಸಮೇತ ಬಂದು ಜಲವಿಹಾರದ ಖುಷಿ ಅನುಭವಿಸಿದರು. ಇನ್ನು ಕೆಲವರು ವಾಟರ್‌ ಬೈಕ್‌ ಸವಾರಿ ಮಾಡಿ ರೋಮಾಂಚನಕ್ಕೆ ಸಾಕ್ಷಿಯಾದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷಬಾಬು ಅವರು ವಾಟರ್‌ಬೈಕ್‌ನಲ್ಲಿ ಕೆರೆಯಲ್ಲಿ ಒಂದು ಸುತ್ತು ಹಾಕಿದರು. ಕೆರೆ ದಡದಲ್ಲಿ ನಿಂತವರು, ನೀರಿನ ಕಾರಂಜಿ ಚಿಮ್ಮಿಸುತ್ತಾ ಹೋಗುವ ಬೋಟುಗಳನ್ನು ಕಂಡು ಕೇಕೆ ಹಾಕಿ ಸಂಭ್ರಮಿಸಿದರು.

ಜಲ ಸಾಹಸ ಕ್ರೀಡೆ ನಿರ್ವಹಣೆಯನ್ನು ಜಿಲ್ಲಾಡಳಿತವು ಅಡ್ವೆಂಚರ್ಸ್‌ ಸಂಸ್ಥೆಗೆ ವಹಿಸಿದೆ. ಇದಕ್ಕಾಗಿ ಒಟ್ಟು 5 ಬೋಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ವಾಟರ್‌ ಬೈಕ್‌ಗೆ ತಲಾ ₹ 150, ಬನಾನಾ ರೈಡ್‌ಗೆ ₹ 100 ಹಾಗೂ ಬಂಪರ್‌ ರೈಡ್‌ಗೆ ₹ 100 ಶುಲ್ಕ ನಿಗದಿಪಡಿಸಲಾಗಿದೆ.

ಜಾಲಿ ರೈಡ್‌ಗೆ ಮುಗಿಬಿದ್ದ ಜನರು: ಜಿಲ್ಲಾಡಳಿತ ಭವನದ ಹಿಂಭಾಗದ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ ಜಾಲಿರೈಡ್‌ ವ್ಯವಸ್ಥೆ ಮಾಡಲಾಗಿತ್ತು. ಮುಂಗಡ ಟಿಕೆಟ್‌ ಕಾಯ್ದಿರಿಸಿಕೊಂಡವರು ಹೆಲಿಕಾಪ್ಟರ್‌ ಹತ್ತಿ ನಗರ ಪ್ರದಕ್ಷಿಣೆ ಮಾಡಿದರು. ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್‌ ಹತ್ತಿದವರ ಸಂಭ್ರಮ ಹೇಳತೀರದಾಗಿತ್ತು. ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರು ಜಿಲ್ಲಾಧಿಕಾರಿ ಮನೋಜ್‌ ಜೈನ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭು ಬುರಬುರೆ, ನಗರಸಭೆ ಅಧ್ಯಕ್ಷ ಬಿ.ಬಿ.ಅಸೂಟಿ ಅವರೊಂದಿಗೆ ಹೆಲಿಕಾಪ್ಟರ್‌ ಹತ್ತಿ ಆಗಸದಿಂದ ನಗರ ದರ್ಶನ ಮಾಡಿದರು.

ಮೊದಲ ದಿನ ಆರು ಸುತ್ತು: ಹೆಲಿಕಾಪ್ಟರ್‌ ಹಾರಾಟಕ್ಕೆ ಎಟಿಸಿಯಿಂದ (ಏರ್‌ ಟ್ರಾಫಿಕ್‌ ಕಂಟ್ರೋಲ್‌) ಸರ್ಮಪಕವಾಗಿ ಸಿಗ್ನಲ್‌ ಲಭಿಸದ ಹಿನ್ನೆಲೆಯಲ್ಲಿ ಮೊದಲ ದಿನ ಜಾಲಿ ರೈಡ್‌ 6 ಸುತ್ತಿಗೆ ಸೀಮಿತಗೊಂಡಿತು. ತಲಾ 6 ಜನರಂತೆ 6 ಸುತ್ತಿನಲ್ಲಿ 36 ಜನ ಜಾಲಿರೈಡ್‌ ಖುಷಿ ಅನುಭವಿಸಿದರು.

‘ಈಗಾಗಲೇ 500 ಜನ ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದಾರೆ. ಶುಕ್ರವಾರ ಜಾಲಿ ರೈಡ್‌ ಪ್ರಾರಂಭವಾದ ಬೆನ್ನಿಗೇ ಇನ್ನಷ್ಟು ಜನರು ಟಿಕೆಟ್‌ಗಾಗಿ ವಿಚಾರಿಸಿದ್ದಾರೆ. ಡಿ. 12ರವರೆಗೆ ಜಾಲಿರೈಡ್‌ ಮುಂದುವರಿಯಲಿದೆ. ಈ ನಿಟ್ಟಿನಲ್ಲಿ ಪೈಲಟ್‌ ಸೇರಿ 9 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಬಾಹುಬಲಿ ಹೆಲಿಟ್ಯೂರಿಸಂ ಸಂಸ್ಥೆಯ ಮಾಲೀಕ ಬಾಹುಬಲಿ ದರೆಪ್ಪನವರ ಹೇಳಿದರು.

ದೇಸಿ ಕ್ರೀಡೆಗಳ ಸಂಭ್ರಮ: ಉತ್ಸವದ ಅಂಗವಾಗಿ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಗ್ರಾಣಿ (ಭಾರದ ಕಲ್ಲು) ಎತ್ತುವ ಸ್ಪರ್ಧೆ ನಡೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿದೇರ್ಶಕ ಬಿ.ಬಿ.ವಿಶ್ವನಾಥ ಸ್ಪರ್ಧೆಗೆ ಚಾಲನೆ ನೀಡಿದರು. ಮ್ಯಾರಥಾನ್ ಓಟದ ಸ್ಪರ್ಧೆಗೆ ಶಾಸಕ ಬಿ.ಆರ್.ಯಾವಗಲ್ ಹಸಿರು ನಿಶಾನೆ ತೋರಿದರು.

ವಿಜೇತರು: ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ: ಶರಣಪ್ಪ ಸತ್ಯಪ್ಪ ಬೇಲೆರಿ (ಪ್ರಥಮ), ವಿರೇಶ ಗುರಪ್ಪ ಅಂಗಡಿ (ದ್ವಿತೀಯ), ಭರತ ರಾಮಚಂದ್ರ ತಳವಾರ (ತೃತೀಯ)

ಗೋಣಿ ಚೀಲ ಓಟ: ಬಾಲಕರ ವಿಭಾಗ: ಪುಂಡಲೀಕ (ಪ್ರಥಮ), ಆಕಾಶ ಹುಲ್ಲೂರ (ದ್ವಿತೀಯ), ಮುತ್ತು ಭಾವಿ (ತೃತೀಯ). ಬಾಲಕಿಯರ ವಿಭಾಗ: ಶಾಹೀದಾ ಬಳಿಗಾರ (ಪ್ರಥಮ), ಶ್ವೇತಾ ಜಾಧವ (ದ್ವಿತೀಯ), ಅಂಜಲಿ ಹರಿಜನ (ತೃತೀಯ).

ಹಗ್ಗ ಜಗ್ಗಾಟ: ಪುರುಷರ ವಿಭಾಗದಲ್ಲಿ ಪರಸಪ್ಪ ಹಟ್ಟಿ ಅವರ ತಂಡ (ಪ್ರಥಮ) ಶ್ರೀನಿವಾಸ ಗುಳಗಂದಿ ತಂಡ (ದ್ವಿತೀಯ), ಮಹಿಳೆಯರು ವಿಭಾಗ: ಸಂಗೀತಾ ನೇತೃತ್ವದ ತಂಡ (ಪ್ರಥಮ), ಸುಜಾತಾ ಕುರುಬರ ತಂಡ (ದ್ವಿತೀಯ).

ಮ್ಯಾರಾಥಾನ್ ಓಟ: ಬಾಲಕರ ವಿಭಾಗ: ಈರಣ್ಣ ಶಿವಪೂಜಿ (ಪ್ರಥಮ), ಶ್ರೀನಿವಾಸ ತಳವಾರ (ದ್ವಿತೀಯ), ದೇಸಾಯಿಗೌಡ (ತೃತೀಯ). ಬಾಲಕಿಯರ ವಿಭಾಗ: ನೇತ್ರಾವತಿ ಪೂಜಾರ (ಪ್ರಥಮ), ಪವಿತ್ರಾ ಕುರ್ತಕೋಟಿ (ದ್ವಿತೀಯ), ಸಂಜನಾ ಇಂಗಳಗಿ (ತೃತೀಯ). ಪುರುಷರ ವಿಭಾಗ: ಸಾಗರ ಭೋರಕರ (ಪ್ರಥಮ), ಜಗದೀಶ ಡಂಬಳ (ದ್ವಿತೀಯ), ಸುರೇಶ ಗೌಡರ (ತೃತೀಯ). ಮಹಿಳೆಯರ ವಿಭಾಗದಲ್ಲಿ ಮೇಘನಾ ಕೆ. (ಪ್ರಥಮ), ಶಾಹೀದಾಬೇಗಂ ಬಳಿಗಾರ (ದ್ವಿತೀಯ), ಶಶಿಕಲಾ ತಳವಾರ (ತೃತೀಯ).

-ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT