ಶನಿವಾರ, ಫೆಬ್ರವರಿ 27, 2021
28 °C

ಬಾಲಿವುಡ್‌ನ ಬಾಲನಟಿಗೆ ಲೈಂಗಿಕ ಕಿರುಕುಳ ನೀಡಿರುವುದು ಸಾಬೀತಾದರೆ ಆರೋಪಿಗೆ ವಿಮಾನ ಪ್ರಯಾಣ ನಿಷೇಧ: ಜಯಂತ್ ಸಿನ್ಹಾ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನ ಬಾಲನಟಿಗೆ ಲೈಂಗಿಕ ಕಿರುಕುಳ ನೀಡಿರುವುದು ಸಾಬೀತಾದರೆ ಆರೋಪಿಗೆ ವಿಮಾನ ಪ್ರಯಾಣ ನಿಷೇಧ: ಜಯಂತ್ ಸಿನ್ಹಾ

ರಾಂಚಿ: ವಿಮಾನಯಾನದ ವೇಳೆ ಬಾಲಿವುಡ್‌ನ ಬಾಲನಟಿಗೆ ಲೈಂಗಿಕ ಕಿರುಕುಳ ನೀಡಿದ್ದು ಸಾಬೀತಾದರೆ ಕಿರುಕುಳ ನೀಡಿದ ವ್ಯಕ್ತಿಗೆ ವಿಮಾನ ಪ್ರಯಾಣಕ್ಕೆ ನಿಷೇಧ ವಿಧಿಸಲಾಗುವುದು ಎಂದು ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.

‘ದೆಹಲಿಯಿಂದ ಮುಂಬೈಗೆ ಶನಿವಾರ ಪ್ರಯಾಣಿಸುತ್ತಿದ್ದಾಗ ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ. ನನ್ನ ಹಿಂಭಾಗ ಮತ್ತು ಕತ್ತನ್ನು ಹಲವಾರು ಬಾರಿ ಮುಟ್ಟಿದ’ ಎಂದು ದೆಹಲಿ ವಿಮಾನನಿಲ್ದಾಣ ತಲುಪಿದ ಬಳಿಕ ನಟಿ ಕಣ್ಣೀರು ಸುರಿಸುತ್ತ ಸಾಮಾಜಿಕ ಮಾಧ್ಯಮದಲ್ಲಿ ಅಳಲು ತೋಡಿಕೊಂಡಿದ್ದರು.

ಈ ಕುರಿತು ರಾಂಚಿಯಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಸಚಿವ ಸಿನ್ಹಾ, ‘ಇಂತಹ ಘಟನೆ ನಡೆಯಬಾರದಿತ್ತು. ಇಲಾಖೆಯು ನಟಿಯ ಬೆಂಬಲಕ್ಕೆ ಇದೆ’ ಎಂದು ಹೇಳಿದ್ದಾರೆ.

ನಟಿಯ ಹೇಳಿಕೆ ಆಧರಿಸಿ ಅಪರಿಚಿತ ವ್ಯಕ್ತಿಯೊಬ್ಬರ ಮೇಲೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಕಲಂ 354 (ಮಾನಭಂಗಕ್ಕೆ ಯತ್ನ) ಮತ್ತು ಪೊಕ್ಸೊ ಕಾಯ್ದೆ ಅಡಿ(ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ) ದೂರು ದಾಖಲಾಗಿದೆ.

‘ಇಂತಹ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ. ಬಾಲಕಿಗೆ ನ್ಯಾಯ ಸಿಗಲು ಈ ಪ್ರಕರಣದ ತನಿಖೆಗೆ ಕಂಪೆನಿ ಸಹಕರಿಸಲಿದೆ’ ಎಂದು ವಿಸ್ತಾರ ವಿಮಾನಯಾನ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ವ್ಯಕ್ತಿಯೊಬ್ಬನ ಮೇಲೆ ವಿಮಾನ ಪ್ರಯಾಣ ನಿಷೇಧ ನಿಯಮ ಜಾರಿಯಾದರೆ ಆತನನ್ನು ಕನಿಷ್ಠ 3 ತಿಂಗಳಿನಿಂದ ಗರಿಷ್ಠ ಜೀವಿತಾವಧಿಯವರೆಗೆ ವಿಮಾನಯಾನ ಸೇವೆ ಬಳಸದಂತೆ ನಿಷೇಧ ಹೇರಬಹುದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.