ಶನಿವಾರ, ಮಾರ್ಚ್ 6, 2021
21 °C
ಮಕ್ಕಳಲ್ಲಿ ಜಾಗೃತಿ, ಸಮಾಜ ಸೇವೆಯ ವಿವಿಧ ವೈಖರಿ

ಸನ್ಮಾರ್ಗದಲ್ಲಿ ‘ಗೆಳೆಯರ’ ನಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸನ್ಮಾರ್ಗದಲ್ಲಿ ‘ಗೆಳೆಯರ’ ನಡಿಗೆ

ಬಳ್ಳಾರಿ: ಮೂರು ವರ್ಷದ ಹಿಂದೆ ಜುಲೈ ತಿಂಗಳಲ್ಲಿ ಜನ್ಮದಿನದ ಶುಭಾಷಯ ಹೇಳುವುದಕ್ಕೆಂದು ಬಂದ ಕನ್ನಡಪರ ಕಾರ್ಯಕರ್ತರೊಬ್ಬರೊಂದಿಗೆ ನಗರದ ಪೊಲೀಸ್‌ ಅಧಿಕಾರಿಯೊಬ್ಬರು ನಡೆಸಿದ ಸಂವಾದದ ಪರಿಣಾಮ ‘ಸನ್ಮಾರ್ಗ ಗೆಳೆಯರ ಬಳಗ’ ಹುಟ್ಟಿಕೊಂಡಿತು ಎಂದರೆ ಯಾರಿಗಾದರೂ ಅಚ್ಚರಿಯಾಗುತ್ತದೆ.

‘ಇಂದಿನ ಮಕ್ಕಳಲ್ಲಿ ಹಿರಿಯರ ಬಗ್ಗೆ, ಸಮಾಜದ ಬಗ್ಗೆ ಗೌರವ, ಕಾಳಜಿ, ಪ್ರೀತಿಯನ್ನು ಮೂಡಿಸುವುದು ತುರ್ತು ಆಗಬೇಕಾದ ಕೆಲಸ’ ಎಂಬುದು ಅವರ ನಡುವಿನ ಸಂವಾದದ ತಿರುಳಾಗಿತ್ತು. ಅದನ್ನು ಜಾರಿಗೆ ತರುವುದು ಹೇಗೆ ಎಂದು ಇನ್ನಿತರ ಗೆಳೆಯರೊಂದಿಗೆ ಚರ್ಚಿಸಿದರು. ಪರಿಣಾಮವಾಗಿ ಸೇವೆಯ ತುಡಿತವಿದ್ದ ಬಳಗ ರೂಪು ಗೊಂಡಿತು.

ಒಂದು ದಿನ ಬಳ್ಳಾರಿ ತಾಲ್ಲೂಕಿನ ಸಿರಿವಾರದ ಸರ್ಕಾರಿ ಶಾಲೆಯಲ್ಲಿ ಡಾ.ಮಧುಸೂದನ ಕಾರಿಗನೂರು ಅವರಿಂದ ಉಪನ್ಯಾಸವನ್ನು ಏರ್ಪಡಿಸಿದರು. ನೈತಿಕ ಶಿಕ್ಷಣದ ಪ್ರತಿಪಾದನೆ ಮಾಡುತ್ತಿರುವ ವೈದ್ಯರ ಮಾತುಗಳಿಂದ ವಿದ್ಯಾರ್ಥಿಗಳು ಪ್ರಭಾವಿತರಾದರು. ಬಳಗದ ಉತ್ಸಾಹವೂ ಇಮ್ಮಡಿಗೊಂಡಿತು. ಹಲವು ಶಾಲೆಗಳಲ್ಲಿ ಉಪನ್ಯಾಸಗಳು ಏರ್ಪಟ್ಟವು.

ಕೆಲ ತಿಂಗಳ ಬಳಿಕ, ಬಳಗದಲ್ಲಿದ್ದ ಕಣ್ಣಿನ ವೈದ್ಯ ವಿಮ್ಸ್‌ ಆಸ್ಪತ್ರೆಯ ಡಾ.ಪರಸಪ್ಪ ಅವರು, ನಗರ, ಗ್ರಾಮೀಣ ಪ್ರದೇಶದ ಬಡವರಿಗೆ ಉಚಿತವಾಗಿ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಏರ್ಪಡಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಆಸ್ಪತ್ರೆಯಲ್ಲಿರುವ ಸಂಚಾರಿ ನೇತ್ರ ಘಟಕದ ಪ್ರಭಾರಿ ಕಾರ್ಯಕ್ರಮ ಅನುಷ್ಠಾನಾಧಿಕಾರಿಯೂ ಆಗಿರುವ ಅವರ ಮಾತಿಗೆ ಸದಸ್ಯರು ಸಹಮತ ವ್ಯಕ್ತಪಡಿಸಿದರು. ತಾಲ್ಲೂಕಿನ ಸಿಂಧುವಾಳದಲ್ಲಿ ಶಿಬಿರವನ್ನು ಆಯೋಜಿಸಲಾಯಿತು. ಇದುವರೆಗೆ ಬಳಗದಿಂದ ನೇತ್ರ ತಪಾಸಣೆ ಮಾಡಿಸಿಕೊಂಡವರ ಸಂಖ್ಯೆ ಹತ್ತು ಸಾವಿರ ದಾಟಿದೆ. ಆರೋಗ್ಯ ತಪಾಸಣೆ ಶಿಬಿರಗಳು ಬಳಗದ ಮತ್ತೊಂದು ಸೇವೆ. ಇವು ಆರಂಭಿಕ ಸನ್ನಿವೇಶಗಳು. ಈಗ ಜಿಲ್ಲೆಯ ಗಡಿಭಾಗವಾದ ಹಚ್ಚೊಳ್ಳಿವರೆಗೂ ಗೆಳೆಯರ ಬಳಗದ ನೆರವು ದೊರೆತಿದೆ ಎಂಬುದು ಈಗಿನ ವಿಶೇಷ.

ವೈವಿಧ್ಯಮಯ ಸೇವೆ: ಇತ್ತೀಚೆಗಷ್ಟೇ ಗೆಳೆಯರ ಬಳಗದ ಸದಸ್ಯರು ನಗರದಲ್ಲಿ ರಸ್ತೆ ಬದಿ ಮಲಗುವ 120 ನಿರಾಶ್ರಿತರಿಗೆ ಉಚಿತವಾಗಿ ಹೊದಿಕೆ ವಿತರಿಸಿದರು. ಮಲಗಿದವರ ನಿದ್ದೆಗೆ ಭಂಗ ಬಾರದಂತೆ ಹೊದಿಸಿ ಬಂದಿದ್ದು ಗಮನಿಸಬೇಕಾದ ಸಂಗತಿ.

’ನೀರಿನ ಸದ್ಬಳಕೆ ಬಗ್ಗೆ ಜನಜಾಗೃತಿ ಅಭಿಯಾನ, ಮದುವೆ ಸಮಾರಂಭಗಳಲ್ಲೂ ನೀರಿನ ಮಿತ ಬಳಕೆ ಕುರಿತು ಜಾಗೃತಿ, ಗಡಿಭಾಗದ ಕನ್ನಡ ಶಾಲೆಗಳಿಗೆ ಉಚಿತ ನೋಟ್‌ ಪುಸ್ತಕಗಳು, ಊಟದ ತಟ್ಟೆ ವಿತರಣೆ, ಬಾಣಾಪುರ ಮತ್ತು ಬಸರಕೋಡು ಶಾಲೆಯಲ್ಲಿ ಹಸಿರೀಕರಣಕ್ಕಾಗಿ 2 ಸಾವಿರ ಸಸಿ ವಿತರಣೆ, ಸಂಚಾರ ನಿಯಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಅಭಿಯಾನ, ಬೇಸಿಗೆಯಲ್ಲಿ 48 ಸರ್ಕಾರಿ ಬಸ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದು ಬಳಗದ ಸದಸ್ಯರಾದ ಕಪ್ಪಗಲ್ಲು ಚಂದ್ರಶೇಖರ ಆಚಾರ್‌ ’ಪ್ರಜಾವಾಣಿ’ಗೆ ಭಾನುವಾರ ತಿಳಿಸಿದರು.

50 ಸದಸ್ಯರು: ನಗರದ ಕಾಳಮ್ಮ ಬಜಾರ್‌ನಲ್ಲಿ ಕಚೇರಿಯನ್ನು ಹೊಂದಿರುವ ಬಳಗ ಹಿಂದಿನ ವರ್ಷ ನೋಂದಣಿಯಾಗಿದೆ. ಸದ್ಯಕ್ಕೆ ಬಳಗದಲ್ಲಿ 50 ಸದಸ್ಯರಿದ್ದಾರೆ. ಅವರೆಲ್ಲರೂ ಭಿನ್ನ ಕ್ಷೇತ್ರಗಳಿಗೆ ಸೇರಿದವರು ಎಂಬುದು ವಿಶೇಷ. ವಿವಿಧ ಇಲಾಖೆಗಳ ಅಧಿಕಾರಿಗಳು, ವೈದ್ಯರು, ವರ್ತಕರು, ಪತ್ರಕರ್ತರು ಬಳಗದ ಸದಸ್ಯರು.

ಉಳಿತಾಯದ ಹಣ: ಸೇವಾ ಕಾರ್ಯಕ್ರಮಗಳಿಗೆ ಹಣ ಎಲ್ಲಿಂದ ತರುತ್ತೀರಿ ಎಂದು ಕೇಳಿದರೆ, ‘ಬಳಗದ ಸದಸ್ಯರ ಕಷ್ಟಕ್ಕೆ ನೆರವಾಗಲೆಂದು ಸದಸ್ಯರೆಲ್ಲರೂ ನಡೆಸುವ ಸಣ್ಣ ಮಟ್ಟದ ಹಣ ಉಳಿತಾಯದ ಎಲ್ಲ ಲಾಭಾಂಶವೂ ಸೇವೆಗೇ ಮೀಸಲು’ ಎಂದು ಆಚಾರ್‌ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.