ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ಹಣದುಬ್ಬರ ಏರಿಕೆ

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ನವೆಂಬರ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು 15 ತಿಂಗಳ ಗರಿಷ್ಠ ಮಟ್ಟಕ್ಕೆ (ಶೇ 4.88) ಏರಿಕೆಯಾಗಿದೆ.

ತರಕಾರಿ, ಮೊಟ್ಟೆ, ಇಂಧನ ಬೆಲೆ ದುಬಾರಿಯಾಗಿದ್ದರಿಂದ ಹಣದುಬ್ಬರವು ಈ ಗರಿಷ್ಠ ಪ್ರಮಾಣದ ಏರಿಕೆ ದಾಖಲಿಸಿದೆ ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಐಒ) ತಿಳಿಸಿದೆ.

ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರವು ಶೇ 4.2 ರಿಂದ ಶೇ 4.6ರಷ್ಟು ಇರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಅಂದಾಜಿಸಿತ್ತು. ಆ ನಿರೀಕ್ಷೆ ಈಗ ಹುಸಿಯಾಗಿದೆ.

ನವೆಂಬರ್‌ ತಿಂಗಳಲ್ಲಿ ಸುರಿದ ಭಾರಿ ಮಳೆಯು ಕ್ಷಿಪ್ರವಾಗಿ ಕೊಳೆತು ಹೋಗುವ ತರಕಾರಿ ಮತ್ತು ಹಣ್ಣುಗಳ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಇದು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರವು, ಅಕ್ಟೋಬರ್‌ ತಿಂಗಳಲ್ಲಿ ಶೇ 3.58 ಮತ್ತು 2016ರ ನವೆಂಬರ್‌ನಲ್ಲಿ ಶೇ 3.63ರಷ್ಟಿತ್ತು. ಅದೇ ವರ್ಷದ ಆಗಸ್ಟ್‌ನಲ್ಲಿ (ಶೇ 5.05) ಗರಿಷ್ಠ ಮಟ್ಟದಲ್ಲಿತ್ತು.

ಪ್ರೋಟೀನ್‌ ಸಮೃದ್ಧ ಮೊಟ್ಟೆ ಬೆಲೆ ನವೆಂಬರ್‌ ತಿಂಗಳಲ್ಲಿ ಶೇ 7.95ರಷ್ಟು ಏರಿಕೆ ಕಂಡಿತ್ತು. ಅದಕ್ಕೂ ಹಿಂದಿನ ತಿಂಗಳಲ್ಲಿ ಈ ಏರಿಕೆ ಕೇವಲ
ಶೇ 0.69ರಷ್ಟಿತ್ತು. ಒಟ್ಟಾರೆ ಆಹಾರ ಪದಾರ್ಥಗಳ ಬೆಲೆ ಏರಿಕೆ ಶೇ 4.42ರಷ್ಟು ದಾಖಲಾಗಿದೆ.

ಕೈಗಾರಿಕಾ ಪ್ರಗತಿ 3 ತಿಂಗಳ ಕನಿಷ್ಠ: ದೇಶದ ಕೈಗಾರಿಕಾ ಪ್ರಗತಿಯು ಅಕ್ಟೊಬರ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟವಾದ ಶೇ 2.2ಕ್ಕೆ ಕುಸಿತ ಕಂಡಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಕೈಗಾರಿಕಾ ಪ್ರಗತಿ 2016ರ ಅಕ್ಟೋಬರ್‌ನಲ್ಲಿ ಶೇ 4.2ರಷ್ಟಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ ಮಾಹಿತಿ ನೀಡಿದೆ.

2017ರ ಸೆಪ್ಟೆಂಬರ್‌ನಲ್ಲಿ ಶೇ 4.14 ರಷ್ಟು ಪ್ರಗತಿ ಕಂಡಿತ್ತು. ಇದಕ್ಕೆ ಹೋಲಿಸಿದರೂ ಶೇ 2.12 ರಷ್ಟು ಇಳಿಕೆಯಾಗಿದೆ. ತಯಾರಿಕೆ (ಶೇ 2.5)  ಮತ್ತು ಗಣಿಗಾರಿಕಾ ವಲಯದ ಪ್ರಗತಿ ಕುಂಠಿತಗೊಂಡಿರುವುದರಿಂದ ಒಟ್ಟಾರೆ ಪ್ರಗತಿ ಮೇಲೆ ಪರಿಣಾಮ ಬೀರಿದೆ.

ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ ತಯಾರಿಕಾ ವಲಯದ ಪ್ರಗತಿ ಶೇ 5.9 ರಿಂದ ಶೇ 2.5ಕ್ಕೆ ತಗ್ಗಿದೆ. 23 ಕೈಗಾರಿಕೆಗಳಲ್ಲಿ 10 ಕೈಗಾರಿಕೆಗಳ ಪ್ರಗತಿ ಸಕಾರಾತ್ಮಕ ಮಟ್ಟದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT