ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಹಾಲಿಯಲ್ಲಿ ರೋಹಿತ್‌ ಗರ್ಜನೆ

ಎರಡನೇ ಏಕದಿನ ಪಂದ್ಯ: ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌ ಮಿಂಚು
Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮೊಹಾಲಿ: ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಬುಧವಾರ ಕ್ರಿಕೆಟ್‌ ಲೋಕದಲ್ಲಿ ಹೊಸ ಭಾಷ್ಯ ಬರೆದರು. ಏಕದಿನ ಮಾದರಿಯಲ್ಲಿ ಮೂರು ದ್ವಿಶತಕ ಸಿಡಿಸಿದ ದಾಖಲೆಗೆ ಅವರು ಭಾಜನರಾದರು.

ರೋಹಿತ್‌ ಗರ್ಜನೆಗೆ ಪಂಜಾಬ್‌ ಕ್ರಿಕೆಟ್‌ ಸಂಸ್ಥೆಯ ಅಂಗಳದಲ್ಲಿ ಶ್ರೀಲಂಕಾ ತಂಡದ ಬೌಲರ್‌ಗಳು ಬೆದರಿದರು. ಆತಿಥೇಯರು ಎರಡನೇ ಏಕದಿನ ಪಂದ್ಯದಲ್ಲಿ 141ರನ್‌ ಗಳಿಂದ ಜಯದ ತೋರಣ ಕಟ್ಟಿದರು. ಹೀಗಾಗಿ 3 ಪಂದ್ಯಗಳ ಸರಣಿ 1–1ರಲ್ಲಿ ಸಮಬಲವಾಯಿತು.

ರೋಹಿತ್‌, 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ದ್ವಿಶತಕ ಸಿಡಿಸಿದ್ದರು. 2014 ರಲ್ಲಿ ಶ್ರಿಲಂಕಾ ವಿರುದ್ಧ 264ರನ್‌ ಬಾರಿಸಿ ಚರಿತ್ರಾರ್ಹ ಸಾಧನೆ ತಮ್ಮದಾಗಿಸಿಕೊಂಡಿದ್ದರು.

ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 392ರನ್‌ ಗಳಿಸಿತು. ಕಠಿಣ ಗುರಿ ಬೆನ್ನಟ್ಟಿದ್ದ ತಿಸಾರ ‍ಪೆರೇರಾ ಬಳಗ 8 ವಿಕೆಟ್‌ಗೆ 251ರನ್‌ ಗಳಿಗೆ ಹೋರಾಟ ಮುಗಿಸಿತು.

ಶತಕದ ಜೊತೆಯಾಟ:‌ ಮೊದಲ ಪಂದ್ಯದಲ್ಲಿ ಪ್ರವಾಸಿ ಪಡೆಗೆ ಶರಣಾಗಿದ್ದ ಭಾರತದ ಪಾಲಿಗೆ ಇದು ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಅಂಗಳಕ್ಕಿಳಿದ ತಂಡಕ್ಕೆ ರೋಹಿತ್‌ ಮತ್ತು ಶಿಖರ್‌ ಧವನ್‌ (68; 67ಎ, 9ಬೌಂ) ಭದ್ರ ಅಡಿಪಾಯ ಹಾಕಿಕೊಟ್ಟರು.

ಆರಂಭಿಕ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಧವನ್‌, ಮೊಹಾಲಿ ಮೈದಾನದಲ್ಲಿ ರಟ್ಟೆ ಅರಳಿಸಿ ಆಡಿದರು. ಸಿಂಹಳೀಯ ನಾಡಿನ ಬೌಲರ್‌ಗಳನ್ನು ಕಾಡಿದ ಅವರು ಅರ್ಧಶತಕದ ಸಂಭ್ರಮ ಆಚರಿಸಿದರು. 22ನೇ ಓವರ್‌ನಲ್ಲಿ ಸಚಿತ್‌ ಪತಿರಾಣ, ಧವನ್‌ ವಿಕೆಟ್‌ ಉರುಳಿಸಿ 115 ರನ್‌ಗಳ ಮೊದಲ ವಿಕೆಟ್‌ ಜೊತೆಯಾಟಕ್ಕೆ ತೆರೆ ಎಳೆದರು.

ಬಳಿಕ ರೋಹಿತ್‌ ಮತ್ತು ಶ್ರೇಯಸ್‌ ಅಯ್ಯರ್‌ (88; 70ಎ, 9ಬೌಂ, 2ಸಿ) ಗುಡುಗಿದರು. ಎರಡನೇ ಅಂತರರಾಷ್ಟ್ರೀಯ ಏಕದಿನ ಪಂದ್ಯ ಆಡಿದ ಶ್ರೇಯಸ್‌, ಸ್ಫೋಟಕ ಆಟದ ಮೂಲಕ ತವರಿನ ಅಭಿಮಾನಿಗಳನ್ನು ರಂಜಿಸಿದರು.

ಶತಕದ ಹಾದಿಯಲ್ಲಿ ದಾ‍ಪುಗಾಲಿಟ್ಟಿದ್ದ ಅವರು 46ನೇ ಓವರ್‌ನಲ್ಲಿ ತಿಸಾರ ಪೆರೇರಾಗೆ ವಿಕೆಟ್‌ ನೀಡಿದರು. ಅವರು ಪೆವಿಲಿಯನ್‌ ಸೇರುವ ಮುನ್ನ ನಾಯನ ರೋಹಿತ್‌ ಜೊತೆ ಎರಡನೇ ವಿಕೆಟ್‌ಗೆ 213ರನ್‌ಗಳನ್ನು ಸೇರಿಸಿದರು. ಹೀಗಾಗಿ ತಂಡದ ಮೊತ್ತ 300ರ ಗಡಿ ದಾಟಿತು.

ಆ ನಂತರ ರೋಹಿತ್‌ ಅಬ್ಬರಿಸಿದರು. 115 ಎಸೆತಗಳಲ್ಲಿ ಮೂರಂಕಿಯ ಗಡಿ ದಾಟಿದ ಅವರು ಆ ನಂತರ ಲಂಕಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಸುರಂಗ ಲಕ್ಮಲ್‌ ಹಾಕಿದ 44ನೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ ಸಿಡಿಸಿ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು.

ಅವರು ಕೇವಲ 36 ಎಸೆತಗಳಲ್ಲಿ 100 ರನ್‌ ಸೇರಿಸಿ ದ್ವಿಶತಕದ ಸಂಭ್ರಮ ಆಚರಿಸಿದರು. ಇದರಲ್ಲಿ 12 ಸಿಕ್ಸರ್‌ಗಳು ಸೇರಿದ್ದವು.

ಆಘಾತ: ಗುರಿ ಬೆನ್ನಟ್ಟಿದ ಸಿಂಹಳೀಯ ನಾಡಿನ ತಂಡಕ್ಕೆ ಆರಂಭಿಕ ಸಂಕಷ್ಟ ಎದುರಾಯಿತು. ಉಪುಲ್‌ ತರಂಗ (7), ಧನುಷ್ಕಾ ಗುಣತಿಲಕ (16) ಮತ್ತು ಲಾಹಿರು ತಿರಿಮಾನ್ನೆ ಬೇಗನೆ ಔಟಾದರು.

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೂ ಪೆವಿಲಿಯನ್‌ ಪರೇಡ್‌ ನಡೆಸಿದರು. ಏಂಜೆಲೊ ಮ್ಯಾಥ್ಯೂಸ್‌ (ಔಟಾಗದೆ 111; 132ಎ, 9ಬೌಂ, 3ಬೌಂ) ಅಂತಿಮ ಕ್ಷಣದವರೆಗೂ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ.

*


ಪತ್ನಿಗೆ ದ್ವಿಶತಕದ ಉಡುಗೊರೆ: ರೋಹಿತ್‌ ಶರ್ಮಾ, ಬುಧವಾರ ದ್ವಿಶತಕ ಸಿಡಿಸುವ ಮೂಲಕ ಪತ್ನಿ ರಿತಿಕಾ ಸಜ್ದೆಗೆ ಎರಡನೇ ವಿವಾಹ ವಾರ್ಷಿಕೋತ್ಸವದ ಉಡುಗೊರೆ ನೀಡಿದರು.

ರೋಹಿತ್‌ ದ್ವಿಶತಕ ಪೂರೈಸುತ್ತಿದ್ದಂತೆ ತಮ್ಮ ಎಡಗೈಯಲ್ಲಿ ಧರಿಸಿದ್ದ ಉಂಗುರಕ್ಕೆ ಮುತ್ತಿಕ್ಕಿ ಕ್ರೀಡಾಂಗಣದ ಗಣ್ಯರ ಗ್ಯಾಲರಿಯಲ್ಲಿ ಕುಳಿತಿದ್ದ ಪತ್ನಿಯತ್ತ ಕೈ ತೋರಿಸಿ ಸಂಭ್ರಮಿಸಿದರು. ಆಗ ರಿತಿಕಾ ಭಾವುಕರಾದರು. ಖುಷಿಯಿಂದ ಅವರ ಕಣ್ಣುಗಳು ತುಂಬಿ ಬಂದವು.

ಪಂದ್ಯದ ನಂತರ ಪತ್ನಿ ಬಳಿ ಹೋದ ರೋಹಿತ್‌, ಅವರನ್ನು ಅಪ್ಪಿಕೊಂಡು ಹಣೆಗೆ ಚುಂಬಿಸಿದರು. ಈ ಜೋಡಿ 2015ರ ಡಿಸೆಂಬರ್‌ 13ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು.

‘ದ್ವಿಶತಕ ಗಳಿಸಿದ್ದು ಅತೀವ ಖುಷಿ ನೀಡಿದೆ. ಈ ವಿಶೇಷ ಕ್ಷಣಕ್ಕೆ ಪತ್ನಿಯೂ ಸಾಕ್ಷಿಯಾಗಿದ್ದರಿಂದ ಸಂತಸ ಹೆಚ್ಚಿದೆ. ರಿತಿಕಾಗೆ ನಾನು ನೀಡಿದ ವಿವಾಹ ವಾರ್ಷಿಕೋತ್ಸವದ ಉಡುಗೊರೆ ಇದು’ ಎಂದು ಪಂದ್ಯದ ಬಳಿಕ ರೋಹಿತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT