ಬುಧವಾರ, ಮಾರ್ಚ್ 3, 2021
21 °C

‘ಚರ್ಚ್‌ಸ್ಟ್ರೀಟ್‌ ಕಾಮಗಾರಿ ಶೀಘ್ರ ಪೂರ್ಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಚರ್ಚ್‌ಸ್ಟ್ರೀಟ್‌ ಕಾಮಗಾರಿ ಶೀಘ್ರ ಪೂರ್ಣ’

ಬೆಂಗಳೂರು: ‘ಟೆಂಡರ್‌ ಶ್ಯೂರ್‌ ಯೋಜನೆಯಡಿ ಚರ್ಚ್‌ಸ್ಟ್ರೀಟ್‌ ರಸ್ತೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯು ಶೀಘ್ರ ಪೂರ್ಣಗೊಳ್ಳಲಿದೆ’ ಎಂದು ಶಾಸಕ ಎನ್‌.ಎ.ಹ್ಯಾರಿಸ್‌ ತಿಳಿಸಿದರು. ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಮಾತನಾಡಿದರು.

‘ಶೇ 75ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕಾಬಲ್‌ ಸ್ಟೋನ್‌ಗಳನ್ನು ಕೈಯಿಂದ ಜೋಡಿಸಬೇಕು. ಇದಕ್ಕೆ ಸ್ವಲ್ಪ ಸಮಯ ಹಿಡಿಯಲಿದೆ’ ಎಂದರು.

‘ಇಂತಹ ರಸ್ತೆಯು ನಗರದಲ್ಲೇ ಮೊದಲನೆಯದು. ರಸ್ತೆಯನ್ನು ದಾಟುವ ಜನರ ಸುರಕ್ಷತೆಗೆ ಒತ್ತು ನೀಡಬೇಕು. ಹೀಗಾಗಿ ಎಚ್ಚರಿಕೆಯಿಂದ ಕಾಮಗಾರಿಯನ್ನು ನಡೆಸಲಾಗುತ್ತಿದೆ’ ಎಂದು ಹೇಳಿದರು.

ಬಿಬಿಎಂಪಿ ರಸ್ತೆ ಮೂಲಸೌಕರ್ಯ (ಯೋಜನೆ) ವಿಭಾಗದ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌, ‘ಈ ರಸ್ತೆಯನ್ನು ವೈಟ್‌ ಟಾಪಿಂಗ್‌ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವುದಾಗಿದ್ದರೆ ಈ ವೇಳೆಗಾಗಲೇ ಕಾಮಗಾರಿ ಪೂರ್ಣಗೊಂಡಿರುತ್ತಿತ್ತು. ಆದರೆ, ಕಾಬಲ್‌ ಸ್ಟೋನ್‌ಗಳನ್ನು ಅಳವಡಿಸುವುದು ಕೌಶಲಯುತ ಕೆಲಸ. ಪಾದಚಾರಿ ಮಾರ್ಗದಲ್ಲೂ ಇವುಗಳನ್ನು ಅಳವಡಿಸಬೇಕು. ಹೀಗಾಗಿ ಸಮಯ ಹಿಡಿಯುತ್ತಿದೆ’ ಎಂದರು.

‘ರಸ್ತೆ ಕಾಮಗಾರಿಯಿಂದಾಗಿ ನಮ್ಮ ವ್ಯಾಪಾರ ಕುಸಿದಿದೆ. ದುಸ್ಥಿತಿಯಲ್ಲಿರುವ ರಸ್ತೆಯಲ್ಲಿ ಸಂಚರಿಸಲು ಜನರು ಹೆದರುವಂತಾಗಿದೆ. ಫೆಬ್ರುವರಿಯಲ್ಲಿ ಆರಂಭಗೊಂಡ ಕಾಮಗಾರಿಯು ಆರು ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, 10 ತಿಂಗಳು ಕಳೆದರೂ ಕಾಮಗಾರಿ ಕುಂಟುತ್ತಾ ಸಾಗಿದೆ’ ಎಂದು ಚರ್ಚ್‌ಸ್ಟ್ರೀಟ್‌ ರಸ್ತೆಯ ರೆಸ್ಟೋರೆಂಟ್‌ವೊಂದರ ಮಾಲೀಕ ವಿಕ್ರಂ ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.