ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಸುತ್ತುವ ತವಕ...

Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಅನಿವಾರ್ಯತೆಯೇ ಅನ್ವೇಷಣೆಯ ತಾಯಿ’ ಎನ್ನುವ ವಿಜ್ಞಾನದ ಮೂಲಮಂತ್ರ ಇತರ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಈ ಮಾತಿಗೆ ಸಾಕ್ಷಿಯಂತಿದ್ದಾರೆ ಬೈಕ್ ರೈಡರ್‌ ಪ್ರತಿಮಾ ಹೆಬ್ಬಾರ್. ಉಡುಪಿ ಮೂಲದ ಪ್ರತಿಮಾ ಪ್ರಸ್ತುತ ಬೆಂಗಳೂರು ವಾಸಿ. ನಾಲ್ಕು ವರ್ಷಗಳ ಹಿಂದೆ ಕಚೇರಿಗೆ ತೆರಳಲು ದ್ವಿಚಕ್ರ ವಾಹನ ಬಳಸುವುದು ಅನಿವಾರ್ಯವಾಯಿತು. ಆ ಅನಿವಾರ್ಯತೆಯೇ ಜಗತ್ತನ್ನು ಬೈಕಿನಲ್ಲಿ ಸುತ್ತಿದ ಅವರ ಸಾಧನೆಗೂ ಸ್ಫೂರ್ತಿ.

ಈಗಾಗಲೇ ದೇಶದ ಬಹುತೇಕ ರಾಜ್ಯಗಳನ್ನು ಬೈಕಿನಲ್ಲಿಯೇ ಸುತ್ತಿರುವ ಅವರು, ನೆರೆ ದೇಶ ನೇಪಾಳಕ್ಕೂ ಬೈಕ್‌ನಲ್ಲಿ ತೆರಳಿ ಅನುಭವಗಳ ಬುತ್ತಿ ಕಟ್ಟಿಕೊಂಡಿದ್ದಾರೆ. ‘ಕೇರಳ ನಮ್ಮ ದೇಶದ ಅದ್ಭುತ ಸ್ಥಳ’ ಎನ್ನುವುದು ಅವರ ಅನುಭವದ ಮಾತು. ‘ನಮ್ಮ ರಾಜ್ಯದ ಚಿಕ್ಕಮಗಳೂರು, ಸಕಲೇಶಪುರ ಹಾಗೂ ಮಡಿಕೇರಿ ಪ್ರದೇಶದಲ್ಲಿ ಮತ್ತೆಮತ್ತೆ ಸುತ್ತುವ ಆಸೆಯಾಗುತ್ತದೆ’ ಎನ್ನುತ್ತಾರೆ ಅವರು.

ಇತ್ತೀಚೆಗೆ ನೇಪಾಳದಲ್ಲಿ ಸಂಚರಿಸಿದ ಅನುಭವವನ್ನು ಅವರು ಮೆಲುಕುತ್ತಿದ್ದರೆ, ಕೇಳಿದವರಿಗೂ ಒಂದು ಕ್ಷಣ ಅಲ್ಲಿಗೆ ತೆರಳಿದಂತೆ ಭಾಸವಾಗುತ್ತದೆ.

‘ಲಖನೌನಿಂದ ಹೊರಟು, ದೇಶದ ಗಡಿದಾಟಿ ಮುಕ್ತಿನಾಥ ತಲುಪುವವರೆಗೆ ಜನಸಂಚಾರವೇ ಇಲ್ಲದ ಕಲ್ಲುಮಣ್ಣುಗಳ ದುರ್ಗಮ ದಾರಿ. ಆದರೆ, ಆ ಪ್ರಯಾಸದ ಪ್ರಯಾಣದ ಎಲ್ಲ ದಣಿವನ್ನೂ ಮರೆಸುವ ಶಕ್ತಿ ಅಲ್ಲಿನ ನಿಸರ್ಗಕ್ಕಿದೆ. ರಮಣೀಯ ನೋಟಗಳು ಜೀವನಕ್ಕೊಂದು ಸವಿ ನೆನಪಿನ ಬುತ್ತಿ ಕಟ್ಟಿಕೊಡುತ್ತವೆ’ ಎನ್ನುವುದು ಅವರ ಅನುಭವದ ನುಡಿ.

ಸದ್ಯ ಭೂತಾನ್‌ಗೆ ಬೈಕ್‌ನಲ್ಲಿ ತೆರಳುವ ಸಿದ್ಧತೆಯಲ್ಲಿರುವ ಅವರು, ಮುಂದಿನ ದಿನಗಳಲ್ಲಿ ಸಿಂಗಾಪುರ, ಆಸ್ಟ್ರೇಲಿಯಾಗಳಿಗೆ  ತೆರಳುವ ಗುರಿ ಇಟ್ಟುಕೊಂಡಿದ್ದಾರೆ. ‘ಇತರ ವಾಹನಗಳ ಚಾಲನೆಗಿಂತ ಬೈಕ್‌ ಸವಾರಿಯಲ್ಲಿಯೇ ಹೆಚ್ಚು ತೃಪ್ತಿ’ ಎನ್ನುವುದು ಅವರ ಮನದ ಮಾತು.

‘ಬೇರೆ ಬೇರೆ ಜನರನ್ನು ಭೇಟಿಯಾಗುವ ಅಪೂರ್ವ ಅವಕಾಶ ಸಿಗುತ್ತದೆ. ಹಾಗೆಂದು ಅವರೆನ್ನೆಲ್ಲಾ ಭೇಟಿ ಮಾಡಿ ಅವರ ಮನಸ್ಥಿತಿ ಬದಲಾಯಿಸುತ್ತೇನೆ ಎಂಬ ಭ್ರಮೆ ಇಲ್ಲ. ಇತರರ ಸಂಸ್ಕೃತಿಯನ್ನು ತಿಳಿಯಲು ಸಾಧ್ಯವಾಗುತ್ತಿದೆ. ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದ, ಅಭಿವೃದ್ಧಿಯ ಸೋಂಕಿಲ್ಲದ ಅದೆಷ್ಟೋ ಪ್ರದೇಶಗಳಿಗೆ ಭೇಟಿ ನೀಡಲು ಬೈಕ್ ಸವಾರಿ ನೆರವಾಗುತ್ತದೆ’ ಎನ್ನುವುದು ಅವರ ಅನಿಸಿಕೆ.

ಪ್ರಾರಂಭದಲ್ಲಿ ಅವರಿಗೆ ಸ್ಕೂಟಿಗಳನ್ನು ಓಡಿಸುವಾಗ ತುಂಬಾ ಚಿಕ್ಕ ವಾಹನ, ಓಡಿಸಲು ಅಷ್ಟು ಸಮಂಜಸವಾಗಿಲ್ಲ ಎಂದೆನಿಸುತ್ತಿತ್ತು. ಹಾಗಾಗಿಯೇ ರಾಯಲ್ ಎನ್‌ಫೀಲ್ಡ್‌, ಎಲೆಕ್ಟ್ರಾ ಬೈಕ್‌ಗಳನ್ನು ಓಡಿಸಲು ಹವ್ಯಾಸ ರೂಢಿಸಿಕೊಂಡರು, ಈಗ ಆ ಬೈಕುಗಳು ಅವರ ಜೀವನದ ಅವಿಭಾಜ್ಯ ಅಂಗವಾಗಿವೆ. ಬೈಕ್‌ ಸವಾರಿ ಬಿಟ್ಟು ಬದುಕಲು ಅಸಾಧ್ಯ ಎನ್ನವಷ್ಟು ಅವರು ಅದನ್ನು ನೆಚ್ಚಿಕೊಂಡಿದ್ದಾರೆ.

ಬೈಕ್‌ ಸವಾರರು ಎಂದರೆ ರ‍್ಯಾಶ್‌ ಆಗಿ ವಾಹನ ಚಲಾಯಿಸುವವರು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರು ಎನ್ನುವ ಮನೋಭಾವ ಸಾರ್ವಜನಿಕರಲ್ಲಿದೆ. ಈ ಬಗೆಯ ಪೂರ್ವಾಗ್ರಹಗಳನ್ನು ಜನರ ಮನಸಿನಿಂದ ತೆಗೆಯುವ ಸಲುವಾಗಿ ಆದರೂ, ಜವಾಬ್ದಾರಿಯುತವಾಗಿ ಯಾವುದೇ ಪ್ರದೇಶಕ್ಕೆ ತೆರಳಿದರೂ ಅಲ್ಲಿನ ಎಲ್ಲ ನಿಯಮಗಳಿಗೂ ಅನುಸಾರವಾಗಿ ವಾಹನ ಸವಾರಿ ಮಾಡಬೇಕು ಎನ್ನುವ ಬದ್ಧತೆ ಅವರಿಗಿದೆ. ‘ನಮ್ಮನ್ನು ನೋಡಿ ಬೇರೆಯವರು ರಸ್ತೆ ನಿಯಮಗಳನ್ನು ಪಾಲಿಸುವಂತಾಗಬೇಕು. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು’ ಎನ್ನುತ್ತಾರೆ ಪ್ರತಿಮಾ.

‘ಅನೇಕ ಮಹಿಳೆಯರು ನನಗೆ ದೊಡ್ಡ ಗಾತ್ರದ ಬೈಕುಗಳ ಸವಾರಿ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ಎತ್ತರ ಕಡಿಮೆ. ನಾನು ದಪ್ಪಗಿದ್ದೇನೆ, ತೆಳ್ಳಗಿದ್ದೇನೆ ಎಂದು ಮನದಲ್ಲಿಯೇ ಕೀಳರಿಮೆಯ ಗಡಿಹಾಕಿಕೊಂಡು ತಮ್ಮಲ್ಲಾ ಆಸೆಗಳನ್ನು ಆ ಪರಿಧಿಯಲ್ಲಿಯೇ ಬಂಧಿಸುತ್ತಾರೆ. ಅವೆಲ್ಲವೂ ಅರ್ಥವಿಲ್ಲದ ಆಲೋಚನೆಗಳು ಎನ್ನುವ ಪ್ರತಿಮಾ ಜಗವ ಸುತ್ತಲು ಪುರುಷರಿಗಿರುವಷ್ಟೇ ಅವಕಾಶಗಳು ಮಹಿಳೆಯರಿಗೂ ಇದೆ. ಅವುಗಳನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಡುತ್ತಾರೆ.

ದೇಶದ ಬಹುತೇಕ ಎಲ್ಲ ರಾಜ್ಯಗಳನ್ನು ಸುತ್ತಿರುವ ಅವರಿಗೆ ಮಹಿಳೆ ಎಂಬ ಕಾರಣಕ್ಕೆ ಯಾವುದೇ ವಿಶೇಷ ಸವಾಲು ಎದುರಾಗಿಲ್ಲ. ಬೈಕ್‌ ಪಂಕ್ಚರ್‌ ಹೊರತಾಗಿ ಯಾವುದೇ ಸಮಸ್ಯೆ ಅವರನ್ನು ಕಾಡಿಲ್ಲ. ಮಾತೇ ಮುತ್ತು ಮಾತೇ ಮೃತ್ಯು ಎನ್ನುವ ಅವರು, ಸಹಾಯ ಯಾಚಿಸುವ ‌ದನಿಯಲ್ಲಿ ದೈನ್ಯತೆ ಇದ್ದರೆ, ನೀಡುವ ಕೈಗಳಿಗೆ ಕೊರತೆ ಇಲ್ಲ ಎಂಬ ಸತ್ಯವನ್ನು ಕಂಡುಕೊಂಡಿದ್ದಾರೆ.

‘ಪುರುಷ ಪ್ರಾಧಾನ್ಯತೆಯ ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿ ಮಹಿಳೆಯರು 130 ರಿಂದ 150 ಕಿ.ಮೀ. ವೇಗದಲ್ಲಿ ದೊಡ್ಡ ಗಾತ್ರದ ಬೈಕುಗಳನ್ನೇರಿ ಸವಾರಿ ಮಾಡುವಾಗ ಪುರಷರ ಅಹಂಮಿಕೆಗೆ ಸಣ್ಣದೊಂದು ಪೆಟ್ಟಾದಂತೆ ವರ್ತಿಸುತ್ತಾರೆ. ವಿನಃಕಾರಣ ರಸ್ತೆಗೆ ಅಡ್ಡ ಬಂದು ಚೇಸ್‌ ಮಾಡಲು ಪ್ರಯತ್ನಿಸುತ್ತಾರೆ. ಇಂತಹ ಅನಗತ್ಯ ಕಿರಿಕಿರಿಗಳಿಂದ ದೂರವಿರುವ ಸಲುವಾಗಿ ಸಂಪೂರ್ಣ ದೇಹ ಆವರಿಸುವಂತೆ ರೈಡಿಂಗ್‌ ಜಾಕೆಟ್‌ ಧರಿಸುತ್ತೇನೆ. ಇದರಿಂದಾಗಿ ಅನಗತ್ಯ ತೊಂದರೆಗಳಿಂದ ಪಾರಾಗಿ ಸಂಪೂರ್ಣ ಸವಾರಿಯ ಸುಖವನ್ನು ಅನುಭವಿಸಬಹುದು’ ಎನ್ನುವುದು ಅವರ ಅನುಭವದ ನುಡಿ.

ಬೈಕ್‌ ಏರಿ ವಿಶ್ವ ಸುತ್ತುವ ಜೊತೆಗೆ ‘ಹಾಪ್‌ ಆನ್ ಗರ್ಲ್ಸ್‌’ ಎಂಬ ಸಮೂಹದೊಡಗೂಡಿ ಆಸಕ್ತ ಯುವತಿಯರಿಗೆ ರಾಯಲ್ ಎನ್‌ಫಿಲ್ಡ್‌ ಬೈಕ್‌ ಸವಾರಿಯನ್ನು ಕಲಿಸುವ ಕಾಯಕದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ವೈಯುಕ್ತಿಕ ಖುಷಿಗಾಗಿ ಸವಾರಿ ಮಾಡುತ್ತಿರುವ ಅವರಿಗೆ ಯಾವುದೇ ದಾಖಲೆಗಳ ಗೊಡವೆ ಇಲ್ಲ. ವಿಶ್ವದ ಎಲ್ಲ ರಾಷ್ಟ್ರಗಳನ್ನು ಬೈಕನಲ್ಲಿಯೇ ಸುತ್ತಿ ಅಲ್ಲಿನ ನೈಜ ಸೌಂದರ್ಯ, ಸಂಸ್ಕೃತಿಯನ್ನು ಮನತುಂಬಿಕೊಳ್ಳಬೇಕು ಎನ್ನುವುದೊಂದೆ ಅವರ ಕನಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT