7

ಪಾಕಿಸ್ತಾನದಲ್ಲಿ ಭಾರತದ ಬೇರು ಕಳಚಿದ ಯೋಗದ ಮರ

Published:
Updated:
ಪಾಕಿಸ್ತಾನದಲ್ಲಿ ಭಾರತದ ಬೇರು ಕಳಚಿದ ಯೋಗದ ಮರ

ಯೋಗದ ವಿಷಯ ನನ್ನ ಕಿವಿಯ ಮೇಲೆ ಮೊದಲು ಬಿದ್ದದ್ದು 1980ರ ದಶಕದಲ್ಲಿ; ಪಾಕಿಸ್ತಾನದಲ್ಲಿ ನಾನು ಬೆಳೆಯುತ್ತಿದ್ದ ಹೊತ್ತಿನಲ್ಲಿ. ಪ್ರೊಫೆಸರ್ ಮೊಯಿಜ್ ಹುಸೇನ್ ಎಂಬ ವರ್ಣರಂಜಿತ ವ್ಯಕ್ತಿ ಕರಾಚಿಗೆ ಬಂದಾಗ ಯೋಗದ ಕುರಿತು ಮಾತುಗಳೆದ್ದವು. ಮುಂಬೈನ ಸಂಸ್ಥೆಯೊಂದರಲ್ಲಿ ಯೋಗ ಕಲಿತು ಬಂದಿದ್ದ ಅವರು, ಆಮೇಲಾಮೇಲೆ ಒತ್ತಡ ತಗ್ಗಿಸಿಕೊಳ್ಳುವ ಪರ್ಯಾಯ ಮಾರ್ಗಗಳನ್ನು ಹೇಳಿಕೊಡಲಾರಂಭಿಸಿದ್ದರು. ಜಪಾನ್‍ನ ರೇಖಿ ಚಿಕಿತ್ಸೆ, ಕ್ಯಾಲಿಫೋರ್ನಿಯಾದ ಎನ್.ಎಲ್.ಪಿ

(ನ್ಯೂರೊಲಿಂಗ್ವಿಸ್ಟಿಕ್ ಪ್ರೋಗ್ರಾಂ), ಚೀನಾದಲ್ಲಿ ಹುಟ್ಟಿದ್ದು ಎನ್ನಲಾದ ಕ್ವಿಗೋಂಗ್… ಎಲ್ಲವನ್ನೂ ಮೊಯಿಜ್ ಹುಸೇನ್ ಕಲಿಸುತ್ತಿದ್ದರು.

‘ಮೈಂಡ್ ಸೈನ್ಸಸ್ ಅಂಡ್ ಕ್ಲಾಸಿಕಲ್ ಯೋಗ’ ಎಂಬ ಅವರ ಸಂಸ್ಥೆ ಕರಾಚಿಯ ಕೆಲವು ಮಹಿಳೆಯರನ್ನು, ಅದರಲ್ಲೂ ಮುಖ್ಯವಾಗಿ ಹೆಚ್ಚು ಪ್ರವಾಸ ಮಾಡುವ ಸಿರಿವಂತ ಕುಟುಂಬದವರನ್ನು ಆಕರ್ಷಿಸಿತ್ತು. ತಮ್ಮ ದೇಹ ಹಾಗೂ ಮನಸ್ಸನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂಬ ಬಯಕೆಯಿಂದ ಅವರೆಲ್ಲ ಸಂಸ್ಥೆ ಸೇರಿದ್ದರು. ನಿಧಾನವಾಗಿ ಒಬ್ಬರಾದ ಮೇಲೆ ಒಬ್ಬರಂತೆ ಯೋಗ ಕಲಿಸುವ ಗುರುಗಳು ಹುಟ್ಟಿಕೊಂಡರಾದರೂ ಅವರೆಲ್ಲ ಆ ಕಾಲಘಟ್ಟದಲ್ಲಿ ವಿಪರೀತ ಎಚ್ಚರಿಕೆಯಿಂದ ಇರಬೇಕಿತ್ತು. ಯಾಕೆಂದರೆ, 1980ರ ದಶಕದಲ್ಲಿ ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಇಸ್ಲಾಮೀಕರಣ ಆಗುತ್ತಿತ್ತು. ಭಾರತದ ಜೊತೆ ಶೀತಲಸಮರವೂ ಇತ್ತೆನ್ನಿ. ಭಾರತ ಹಾಗೂ ಹಿಂದುತ್ವದ ಜೊತೆ ಸಂಬಂಧವಿದ್ದ ಯಾವುದನ್ನೇ ಆಗಲಿ ಸಂಪೂರ್ಣ ನಿರಾಕರಿಸದೇ ಇದ್ದರೂ ಉತ್ತೇಜಿಸಲಾಗದ ಸ್ಥಿತಿಯಂತೂ ಇತ್ತು.

ಇದು ನಿರ್ದಿಷ್ಟವಾಗಿ ಭಾರತೀಯ ನೃತ್ಯಾಸಕ್ತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಸರ್ಕಾರಿ ಅಧಿಕಾರಿಗಳು ಈ ನೃತ್ಯಗಳ ಸಾರ್ವಜನಿಕ ಪ್ರದರ್ಶನವನ್ನು ನಿಷೇಧಿಸಿದ್ದರು. ಅದಕ್ಕೆ ಅವರು ನೃತ್ಯ ಅಶ್ಲೀಲವೂ ಭಾರತೀಯವೂ ಆಗಿದೆ ಎಂಬ ಕಾರಣ ಕೊಟ್ಟಿದ್ದರು. ಪಾಕಿಸ್ತಾನದ ಕಲಾ ವಿದ್ಯಾರ್ಥಿಗಳು ಗುರುಗಳನ್ನು ಹುಡುಕಿಕೊಂಡು ಭಾರತಕ್ಕೆ ಹೊರಡಲು ಮುಂದಾದರೆ ವೀಸಾ ಸಿಗುತ್ತಿರಲಿಲ್ಲ. ಶಾಸ್ತ್ರೀಯ ನೃತ್ಯ ಕಲಿತವರು ಪಾಕಿಸ್ತಾನದಲ್ಲಿ ಶಿಷ್ಯರನ್ನು ಆಕರ್ಷಿಸಲಾಗದೆ ಬೇರೆ ದೇಶಗಳತ್ತ ವಲಸೆ ಹೋಗಬೇಕಾಯಿತು.

ಸ್ವಾತಂತ್ರ್ಯಪೂರ್ವದ ಭಾರತದ ವಾಯವ್ಯ ಭಾಗದಲ್ಲಿ ಮುಗಲ್ ಬೇರುಗಳಿದ್ದವು. ಕಥಕ್ ನೃತ್ಯ ಹುಟ್ಟಿದ್ದು ಆ ವಲಯದಲ್ಲಿ. ಹೀಗಾಗಿ ಅದೊಂದು ನೃತ್ಯವನ್ನು ಪಾಕಿಸ್ತಾನದಲ್ಲಿ ಕಾಮಾಲೆ ಕಣ್ಣುಗಳಿಂದ ನೋಡುತ್ತಿರಲಿಲ್ಲ. ಒಡಿಸ್ಸಿ ಅಥವಾ ಭರತನಾಟ್ಯದ ಶಾಲೆಗಳನ್ನು ಕಂಡರೆ ಬಹುತೇಕರಿಗೆ ಆಗುತ್ತಿರಲಿಲ್ಲ.

ಹೆಚ್ಚೇನೂ ಅಧ್ಯಾತ್ಮವಲ್ಲದ, ಕಸರತ್ತಿನ ಇನ್ನೊಂದು ವರಸೆ ಎಂದೇ ಜನಜನಿತವಾಗಿದ್ದ ಯೋಗಕ್ಕೆ ಸ್ವಲ್ಪಮಟ್ಟಿಗೆ ಜಾಗ ಸಿಕ್ಕಿತು. ಕರಾಚಿಯಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಸಣ್ಣ ಮಟ್ಟದಲ್ಲಿ ಯೋಗ ತರಗತಿಗಳನ್ನು ಪ್ರಾರಂಭಿಸಲು ಸಾಧ್ಯವಾಯಿತಷ್ಟೆ.

ಒಂದು ದಶಕ ಉರುಳಿತು. 1990ರ ದಶಕದಲ್ಲಿ ಸರ್ಕಾರಿ ಟಿ.ವಿ. ವಾಹಿನಿಯ ಜೊತೆಗೆ ಖಾಸಗಿ ವಾಹಿನಿಗಳ ಸಂಖ್ಯೆ ಹೆಚ್ಚಾಯಿತು. ಅವುಗಳಲ್ಲಿ ಯೋಗ ತರಗತಿಗೂ ಅವಕಾಶ ಒದಗಿಬಂತು. ಬೆಳಗಿನ ಕಾರ್ಯಕ್ರಮದಲ್ಲಿ 20 ನಿಮಿಷ ಅಥವಾ ಅರ್ಧ ಗಂಟೆ ಕಾಲಾವಕಾಶ ಯೋಗಪಾಠಕ್ಕೆ ಮೀಸಲಿತ್ತು.

ಮಗುವಿಗೆ ಆರೋಗ್ಯಕರ ಆಹಾರ ತಯಾರಿಸುವುದು ಹೇಗೆ, ಕುಟುಂಬದ ಸುಖಭೋಜನದ ಮಾರ್ಗೋಪಾಯಗಳೇನು ಎಂಬೆಲ್ಲ ಸಲಹೆಗಳನ್ನು ನೋಡಿ-ಕೇಳಿ ಸಾಕಾಗಿದ್ದ ಪಾಕಿಸ್ತಾನದ ಮಹಿಳೆಯರನ್ನು, ಟಿ.ವಿ. ವಾಹಿನಿಗಳ ಯೋಗಪಾಠಗಳು ಆಕರ್ಷಿಸಿದವು. ಮೈ-ಕೈ ಮುಚ್ಚುವಂತೆ ಬಟ್ಟೆ ತೊಟ್ಟು, ನಿಸ್ಸಂಕೋಚವಾಗಿ ಮಾಡಬಹುದಾದ ಯೋಗಾಸನಗಳು ಅವರಿಗೆ ಹಿಡಿಸಿದವು. ಆರೋಗ್ಯಕರ ಜೀವನಕ್ಕೆ ಸರಳ ದಾರಿಯಾಗಿಯೂ ಯೋಗ ಅವರಿಗೆ ಕಂಡಿತು.

ವೀಕ್ಷಕರು, ಕೈಕಾಲುಗಳನ್ನು ಅತ್ತಿತ್ತ ಆಡಿಸಿ, ದೇಹ ಬಾಗಿಸಿ, ದೀರ್ಘವಾಗಿ ಉಸಿರು ತೆಗೆದುಕೊಳ್ಳುವ ಕ್ರಮಗಳನ್ನು ಟಿ.ವಿ. ನೋಡಿಯೇ ಅನುಸರಿಸತೊಡಗಿದರು. ಶೇ 90ರಷ್ಟು ಮುಸ್ಲಿಂ ಸಂಪ್ರದಾಯವಾದಿಗಳೇ ಇರುವ ಪಾಕಿಸ್ತಾನದಲ್ಲಿ ಇದು ಅನೇಕರಿಗೆ ಹೊಸ ಗುರಿಯಂತೆಯೇ ಭಾಸವಾಯಿತು.

ಕ್ರಮೇಣ ಯೋಗವು ಉದ್ಯಾನಗಳಿಗೆ ಬಂತು. ಕೆಲವು ಯೋಗ ಶಿಕ್ಷಕರು ಅಲ್ಲಿ ಇಸ್ಲಾಂ ಆಚರಣೆಯ ಬಿಂಬಗಳನ್ನು ಆಸನಗಳಿಗೆ ಅನ್ವಯಿಸಿದರು. ಸೂರ್ಯ ನಮಸ್ಕಾರಕ್ಕೂ ಇಸ್ಲಾಂ ಧರ್ಮೀಯರ ಸಲತ್ ಪ್ರಾರ್ಥನೆಗೂ ಇರುವ ಸಾಮ್ಯತೆಯನ್ನು ಒತ್ತಿಹೇಳಿದರು. ಇದರಿಂದ ಪಾಕಿಸ್ತಾನದ ಸಂಪ್ರದಾಯಸ್ಥ ಮಧ್ಯಮ ವರ್ಗದ ಜನರೂ ಯೋಗಮುಖಿಗಳಾದರು. ಯೋಗ, ಹಿಂದೂ ಯತಿಗಳ ಸ್ವತ್ತು ಎಂದುಕೊಂಡಿದ್ದ ಕೆಲವರು ಆ ಅಭಿಪ್ರಾಯದಿಂದ ಹೊರಬಂದರು.

ಈಗ ಪಾಕಿಸ್ತಾನದ ನಗರಗಳಲ್ಲಿ ಯೋಗ ಜನಪ್ರಿಯವಾಗಿದೆ. ಶಂಶಾದ್ ಹೈದರ್ ಎಂಬ ಯೋಗಗುರು ಹೇಳುವಂತೆ ಪಂಜಾಬ್‍ನಲ್ಲಿ 50 ಯೋಗ ಕ್ಲಬ್‍ಗಳಿವೆ. ಮೂರು ವರ್ಷಗಳಿಂದ ಸತತವಾಗಿ ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಯೋಗದಿನ ಆಚರಿಸಲಾಗುತ್ತಿದೆ. ಉತ್ತರದ ಚಿತ್ರಾಲ್‍ನಿಂದ ಹಿಡಿದು ದಕ್ಷಿಣದ ಕರಾಚಿಯವರೆಗೆ ಯೋಗ ಮಾಡುವ ಜನರಿದ್ದಾರೆ.

ಭಾರತ, ಥಾಯ್ಲೆಂಡ್, ಬಾಲಿ, ಉತ್ತರ ಅಮೆರಿಕ, ಬ್ರಿಟನ್ ಹೀಗೆ ವಿವಿಧೆಡೆಯ ಯೋಗ ಶಾಲೆಗಳಲ್ಲಿ ಕಲಿತು ಬಂದ ಯುವಕ- ಯುವತಿಯರನ್ನು ಪಾಕಿಸ್ತಾನದಲ್ಲಿ ಕಾಣಬಹುದು. ಕರಾಚಿಯ ಸ್ವ್ಯಾಂಕ್ ಸ್ಟುಡಿಯೊದ ಯೋಗ ಶಿಕ್ಷಕರು ಫೇಸ್‍ಬುಕ್ ಪುಟಗಳಿಂದಲೇ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದಾರೆ. ಅಂತರರಾಷ್ಟ್ರೀಯ ಯೋಗಸಂಸ್ಥೆಗಳ ಸಹಯೋಗ ಇರುವುದಾಗಿಯೂ ಅವರು ಹೇಳಿಕೊಳ್ಳುತ್ತಾರೆ.

ಹಟ, ವಿನ್ಯಾಸ, ಅಷ್ಟಾಂಗ, ಪವರ್ ಯೋಗ ಹಾಗೂ ಬಿಕ್ರಮ್ ಯೋಗಗಳನ್ನು ಅಲ್ಲಿ ಕಲಿಸುತ್ತಾರೆ. ಯೋಗಾಸನಗಳನ್ನು ಹೇಳಿಕೊಡುವಾಗ ಸಂಸ್ಕೃತದ ಹೆಸರುಗಳನ್ನೇ ಬಳಸುತ್ತಾರೆನ್ನುವುದು ವಿಶೇಷ. ಇಂಗ್ಲಿಷ್ ಹೆಸರುಗಳಿದ್ದರೂ ಸಂಸ್ಕೃತದ ಹೆಸರುಗಳೇ ಅವರಿಗೆ ಮೆಚ್ಚು. ಮಹಿಳೆಯರಿಗೇ ಪ್ರತ್ಯೇಕ ತರಗತಿಗಳು ನಡೆಯುತ್ತವೆ. ಪುರುಷರು, ಮಹಿಳೆಯರು ಒಟ್ಟಿಗೆ ಕಲಿಯುವ ಅವಕಾಶವೂ ಇದೆ. ಎರಡು ತಂಡಗಳೂ ಮನೆಮಾತಾಗಿವೆ.

ಯೋಗ ಪಾಠ ಈಗಲೂ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ. ಶಾಲೆಗಳು, ಉದ್ಯಾನಗಳಲ್ಲಿಯೂ ಯೋಗ ಕಲಿಯುವವರನ್ನು ಕಾಣಬಹುದು. ಸಲ್ವಾರ್ ಕಮೀಜ್, ಅಬಾಸ್ ಹಾಗೂ ಹಿಜಬ್ ಧರಿಸಿದ ಮಹಿಳೆಯರು ಒಂದು ಕಡೆ ಯೋಗಾಭ್ಯಾಸ ಮಾಡುತ್ತಾರೆ. ಇನ್ನೊಂದು ಕಡೆ ಉದ್ದ ದಾಡಿ ಬಿಟ್ಟ ಪುರುಷರೂ ಸಲ್ವಾರ್ ಕಮೀಜ್ ತೊಟ್ಟು ಸೂರ್ಯ ನಮಸ್ಕಾರ ಮಾಡಲು ಹಿಂದೇಟು ಹಾಕುವುದಿಲ್ಲ. ಅವರ ಪಕ್ಕದಲ್ಲೇ ಟ್ರ್ಯಾಕ್ ಪ್ಯಾಂಟ್, ಟಿ-ಶರ್ಟ್ ಹಾಕಿಕೊಂಡ ಯುವಕ-ಯುವತಿಯರೂ ಇರುತ್ತಾರೆ.

ಹಿಂದುತ್ವ ಹಾಗೂ ಭಾರತೀಯತೆಯಿಂದ ಯೋಗಪ್ರತ್ಯೇಕಗೊಳ್ಳುವುದನ್ನು ಮಡಿವಂತರು ಒಪ್ಪಲಾರರು. ಆದರೆ, ಪಶ್ಚಿಮದ ದೇಶಗಳಲ್ಲಿ ಯೋಗಕ್ಕೆ ಏನಾಗುತ್ತಿದೆಯೋ ಪಾಕಿಸ್ತಾನದಲ್ಲೂ ಅದೇ ಆಗುತ್ತಿದೆ. ಐಷಾರಾಮಿ ಯೋಗ ಸ್ಟುಡಿಯೊಗಳು ತಲೆಎತ್ತಿವೆ. ಏರಿಯಲ್ ಯೋಗ, ಯೋಗಾಸನ ಚಾಂಪಿ

ಯನ್‍ಷಿಪ್‍ಗಳು ವ್ಯಾಪಕವಾಗಿ ನಡೆಯುತ್ತಿವೆ.

ಈ ಪ್ರಕ್ರಿಯೆ ನನಗೆ ಸೂಫಿಯಿಸಂ ಅನ್ನು ಇತ್ತೀಚೆಗೆ ಬಿಂಬಿಸುತ್ತಿರುವ ರೀತಿಯನ್ನು ನೆನಪಿಸುತ್ತದೆ. ಇಸ್ಲಾಂನ ಶಾಖೆ ಎಂದೇ ನಂಬಲಾಗಿದ್ದ ಸೂಫಿಯಿಸಂ ಅನ್ನು ಪಶ್ಚಿಮ ದೇಶಗಳಲ್ಲಿ ಬೇರೆ ರೀತಿ ಬಿಂಬಿಸಲಾಗುತ್ತಿದೆ. ಅದನ್ನು ಇಸ್ಲಾಂ ಬೇರುಗಳಿಂದ ಬೇರ್ಪಡಿಸಿ, ಶಾಂತಿ ಹಾಗೂ ಸಹಿಷ್ಣುತೆಯ ವಿಶ್ವ ಆಂದೋಲನವನ್ನಾಗಿ ಪ್ರಸ್ತುತಪಡಿಸುತ್ತಿದ್ದಾರೆ. 13ನೇ ಶತಮಾನದ ಪರ್ಷಿಯನ್ ಕವಿ ರೂಮಿ ಪ್ರೇಮಕವನಗಳನ್ನು ಕಟ್ಟಿದನೇ ವಿನಾ ಸೃಷ್ಟಿಕರ್ತನಿಗೆ ನಮನ ಸಲ್ಲಿಸುವ ಸಾಂಪ್ರದಾಯಿಕ ಗೀತೆಗಳನ್ನಲ್ಲ. ವಿಶ್ವ ಶಾಂತಿ, ಸಹಿಷ್ಣುತೆ, ಪ್ರೇಮ ಸಂದೇಶ ಸಾರಲು ಇಂತಹ ತ್ಯಾಗ ಬೇಕು ಎನಿಸುತ್ತದೆ.

ಹೊಸ ಅಸ್ಮಿತೆ: 1947ರಲ್ಲಿ ಭಾರತದಿಂದ ಕತ್ತರಿಸಿ, ಪಾಕಿಸ್ತಾನವನ್ನು ರಚಿಸಿದಾಗ ಪಶ್ಚಿಮ ಏಷ್ಯಾದವರು ಅಧಿಕಾರ ಹಾಗೂ ಶ್ರೀಮಂತಿಕೆಯ ಪ್ರಲೋಭನೆಗಳನ್ನು ಒಡ್ಡಿದ್ದರು. ಪಾಕಿಸ್ತಾನದ್ದು ಅರಬ್ ಅಸ್ಮಿತೆಯೋ ದಕ್ಷಿಣ ಏಷ್ಯಾದ್ದೋ ಎಂದು ಸ್ಪಷ್ಟವಾಗಲೇ ಇಲ್ಲ. ಶುದ್ಧ ಇಸ್ಲಾಮಿಕ್ ಪರಂಪರೆಯ ಅಸ್ಮಿತೆ ಪಡೆದುಕೊಳ್ಳುವ ದಶಕಗಳ ಯತ್ನದ ನಂತರ ಪಾಕಿಸ್ತಾನೀಯರು ಒಂದು ಹಂತಕ್ಕೆ ಬಂದರು. ತಮ್ಮದು ಭಿನ್ನ ಪರಂಪರೆ ಎಂದರು. ಕೇಂದ್ರ ಏಷ್ಯಾ, ಪರ್ಷಿಯಾ, ಭಾರತ ಹಾಗೂ ಪಶ್ಚಿಮ ಏಷ್ಯಾದ ಪರಂಪರೆಯ ಮಿಶ್ರ ಬೇರುಗಳು ತಮ್ಮಲ್ಲಿವೆ ಎನ್ನುವುದನ್ನು ಒಪ್ಪಿದರು. ಹಲವು ಬೇರುಗಳು ಹಾಗೂ ಪರಂಪರೆಗಳ ಜೊತೆ ಮರು ಸಂಪರ್ಕ ಸಾಧಿಸುವುದು ಈಗ ನಮ್ಮ ಮುಂದಿರುವ ಸವಾಲು. ಹೊಸ ಅಸ್ಮಿತೆಯಿಂದ ಭವಿತವ್ಯದ ಕುರಿತು ಕನಸುಗಳನ್ನು ಕಟ್ಟಿಕೊಳ್ಳಬಹುದೇನೋ?

1,700 ವರ್ಷಗಳಷ್ಟು ಹಳೆಯ, ನಿದ್ರಾಭಂಗಿಯ ಬುದ್ಧನ ಪ್ರತಿಮೆ ಪಾಕಿಸ್ತಾನದಲ್ಲಿ ಇತ್ತೀಚೆಗೆ ಸಿಕ್ಕಿತು. ಭಾಮಲದ ಪ್ರಾಚೀನ ಬೌದ್ಧ ಪ್ರದೇಶದಲ್ಲಿ ಅದು ಸಿಕ್ಕಿದ್ದು. ಉತ್ತರ ಹಾಗೂ ವಾಯವ್ಯ ಸಂಸ್ಕೃತಿಯ ಬೇರುಗಳು ಇಸ್ಲಾಮಿಕ್ ಪೂರ್ವ ಪರಂಪರೆಯಲ್ಲಿದ್ದವು ಎನ್ನುವುದಕ್ಕೆ ಈ ಪ್ರತಿಮೆ ಪುರಾವೆ ಒದಗಿಸಿದೆ.

ಸಣ್ಣ ಸಂಖ್ಯೆಯಲ್ಲಿ ಇರುವ ಪ್ರಗತಿಪರ ಇತಿಹಾಸಕಾರರು ದೇಶದ ಪ್ರಾಚೀನ ಪರಂಪರೆ ಹಾಗೂ ಧರ್ಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಯತ್ನಿಸುತ್ತಿದ್ದಾರೆ. ಪಾಕಿಸ್ತಾನದ ಚರಿತ್ರೆ ಶುರುವಾಗುವುದು ಅರಬ್‍ನ ಮುಹಮ್ಮದ್ ಬಿನ್ ಕಾಸಿಂ ಕ್ರಿ.ಶ. 711ರಲ್ಲಿ ಸಿಂಧ್ ದಾಳಿ ನಡೆಸಿದ ಕಾಲಘಟ್ಟದಿಂದ ಎಂದೇ ವರ್ಷಗಟ್ಟಲೆ ಹೇಳುತ್ತಾ ಬಂದಿದ್ದು, ಅದನ್ನು ಬದಲಿಸುವುದು ಸುಲಭವಲ್ಲ.

ಕರಾಚಿಯ ಚಳಿಗಾಲದ ತಣ್ಣನೆಯ ವಾತಾವರಣದಲ್ಲಿ ಯೋಗ ಮಾಡುತ್ತಾ ನಾನು ತಂಗಾಳಿಗೆ ಒಡ್ಡಿಕೊಂಡು ಸುಖಿಸುತ್ತೇನೆ. ಅರಬ್ಬೀ ಸಮುದ್ರದ ಅಲೆಗಳನ್ನು ಕಣ್ತುಂಬಿಕೊಳ್ಳುತ್ತೇನೆ. ಯೋಗದಿಂದಲೂ ಪರಂಪರೆಯ ಯಾವುದಾದರೂ ಕೊಂಡಿ ಸಿಗುತ್ತದೆಯೇನೋ ಎಂದು ಯೋಚಿಸುತ್ತೇನೆ. ಆಸನಗಳು, ಭಂಗಿಗಳಿಗೆ ನನ್ನ ಗುರು ಸಂಸ್ಕೃತದ ಹೆಸರುಗಳನ್ನು ಹೇಳುವಾಗಲೆಲ್ಲ ಸಾಮರಸ್ಯ ಭಾವನೆ ಮೂಡುತ್ತದೆ. ಆಗಲೇ ಹತ್ತಿರದ ಮಸೀದಿಯ ಧ್ವನಿವರ್ಧಕ

ದಲ್ಲಿ ಪ್ರಾರ್ಥನೆ ಮೊಳಗುತ್ತದೆ. ನಾವೆಲ್ಲಾ ಮೌನಕ್ಕೆ ಜಾರುತ್ತೇವೆ, ನಮ್ಮದೇ ಉಸಿರಿನ ಶಬ್ದ ಕೇಳಿಸಿಕೊಳ್ಳುತ್ತೇವೆ. ಅಜಾನ್‍ನ ಹಳೆಯ ಶಬ್ದಗಳು ಕಿವಿತುಂಬುತ್ತವೆ.

ಅಭ್ಯಾಸ ಮುಗಿದ ಮೇಲೆ ನನ್ನ ಯೋಗ ಮ್ಯಾಟನ್ನು ಸುತ್ತಿಟ್ಟು, ಪ್ರಾರ್ಥನೆಯ ಮ್ಯಾಟ್ ಹುಡುಕುತ್ತೇನೆ. ಇಷ್ಟು ಸಾಮರಸ್ಯ ಭಾವನೆ ನನಗೆ ಹಿಂದೆಂದೂ ಮೂಡಿರಲಿಲ್ಲ. ಇಸ್ಲಾಮಿಕ್ ಪರಂಪರೆ, ದಕ್ಷಿಣ ಏಷ್ಯಾದ ಬೇರುಗಳು ಎರಡೂ ಮಿಳಿತಂಥ ಭಾವ.

–ದಿ ನ್ಯೂಯಾರ್ಕ್ ಟೈಮ್ಸ್

(ಬಿನಾ ಶಾ ಹಲವು ಸೃಜನಶೀಲ ಕೃತಿಗಳನ್ನು ಬರೆದಿದ್ದಾರೆ.

‘ಎ ಸೀಜನ್ ಫಾರ್ ಮಾರ್ಟಿಯರ್ಸ್’ ಅವರ ಇತ್ತೀಚಿನ ಕೃತಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry